ಅರಳಗೋಡುನಲ್ಲಿ ಅವ್ಯವಸ್ಥೆಯ ಅಂಗನವಾಡಿ

kgl aralagodu
ಕಾರ್ಗಲ್‌ನ ಅರಳಗೋಡಿನಲ್ಲಿರುವ ಅಂಗನವಾಡಿ ಕಟ್ಟಡ.
Published on

ಕಾರ್ಗಲ್: ಶಿಥಿಲಾವಸ್ಥೆ ತಲುಪಿರುವ ಹಾಗೂ ಮಳೆ ಬಂದಾಗ ಸೋರುವ ಹಳೆಯ ಕಟ್ಟಡದಲ್ಲಿಯೇ ಅರಳಗೋಡು ಅಂಗನವಾಡಿ ತರಗತಿಗಳನ್ನು ನಡೆಸುವ ಅನಿವಾರ್ಯತೆ ಉಂಟಾಗಿದೆ.

ಹೊಸ ಕಟ್ಟಡ ನಿರ್ಮಾಣಕ್ಕಾಗಿ ಗ್ರಾಮಸ್ಥರು ಸಹಿ ಸಂಗ್ರಹಿಸಿ ಸಂಬಂಧಿಸಿದ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಇತ್ತೀಚೆಗೆ ಅರಳಗೋಡಿನಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಹೊಸ ಅಂಗನವಾಡಿ ಕಟ್ಟಡಕ್ಕಿರುವ ತೊಡಕಿನ ಬಗ್ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಗಮನಕ್ಕೆ ತರಲಾಗಿತ್ತು. ಜನರ ಮನವಿಗೆ ಶಾಸಕ ಪೂರಕವಾಗಿ ಸ್ಪಂದಿಸಿ, ಹೊಸ ಕಟ್ಟಡ ನಿರ್ಮಾಣದ ಭರವಸೆ ನೀಡಿದ್ದಾರೆ.
1985ರ ಆಸುಪಾಸು ನಿರ್ಮಾಣವಾದ ಈ ಅಂಗನವಾಡಿ ಮೇಲ್ನೋಟಕ್ಕೆ ನೋಡಲು ಚಂದವಾಗಿ ಕಾಣುತ್ತದೆ. ಆದರೆ ಮಳೆಗಾಲದ ಸಂದರ್ಭ ಅದರಲ್ಲೂ ಅತಿವೃಷ್ಟಿಯಾದರೆ ಗೋಡೆಗಳು ಸಂಪೂರ್ಣ ತೇವವಾಗಿರುತ್ತವೆ. ನೀರು ಗೋಡೆಯಿಂದ ನೆಲಕ್ಕೆ ಇಳಿದು ಹೋಗುತ್ತಿರುತ್ತದೆ. ಇದರ ನಡುವೆಯೇ ಮಕ್ಕಳು ಕುಳಿತು ಪಾಠ ಕೇಳಬೇಕಾದ ಸ್ಥಿತಿ ಇದೆ. ಜತೆಗೆ ಅಂಗನವಾಡಿ ಮೇಲ್ಛಾವಣಿ ಲಡ್ಡಾಗಿದೆ. ಗೋಡೆಗಳು ಸಂಪೂರ್ಣ ತೇವವಾಗಿವೆ. ವಿದ್ಯುತ್ ಮೀಟರ್ ಅಳವಡಿಸಿರುವ ಜಾಗದಲ್ಲೂ ಒದ್ದೆಯಾಗಿದ್ದು ಗೋಡೆ ಮುಟ್ಟುವುದು ಸಹ ಅಪಾಯಕಾರಿ. ಅಡುಗೆ ಕೋಣೆ ಮೇಲ್ಛಾವಣೆಯಂತೂ ಸಂಪೂರ್ಣ ಹಾಳಾಗಿದೆ. ಭಾರಿ ಗಾಳಿ, ಮಳೆ ಆಗುವ ಸಂದರ್ಭ ಮೇಲ್ಛಾವಣಿ ಯಾವಾಗ ಕುಸಿದು ಬೀಳುತ್ತದೋ ಎಂಬ ಆತಂಕ ಎದುರಾಗಿದೆ.
ಅಂಗನವಾಡಿಯಲ್ಲಿ ಪ್ರಸ್ತುತ 17 ಮಕ್ಕಳಿದ್ದಾರೆ. ಕಾರ್ಯಕರ್ತೆ ಮತ್ತು ಸಹಾಯಕಿ ಕೆಲಸ ನಿರ್ವಹಿಸುತ್ತಿದ್ದಾರೆ. ಹೊಸ ಕಟ್ಟಡಕ್ಕೆ ಸಂಬಂಧಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಬಳಿ ಮನವಿ ಮಾಡಲಾಗಿದೆ. ಆದರೆ ಇಲಾಖೆಯು ಹೊಸದಾದ ಕಟ್ಟಡ ನಿರ್ಮಾಣಕ್ಕೆ ಜಾಗ ಮಂಜೂರಾತಿಗಾಗಿ ಪ್ರಯತ್ನಿಸುತ್ತಿದ್ದು, ಜಾಗದ ಸಮಸ್ಯೆ ನೂತನ ಕಟ್ಟಡ ನಿರ್ಮಾಣಕ್ಕೆ ಹಿನ್ನಡೆ ಉಂಟುಮಾಡಿದೆ.
ಅರಳಗೋಡು ಗ್ರಾಪಂ ಸಿಂಘಳೀಕ ಅಭಯಾರಣ್ಯದ ವ್ಯಾಪ್ತಿಯಲ್ಲಿ ಇರುವುದರಿಂದ ಇಲಾಖೆ ಕೇಳುತ್ತಿರುವ ಜಾಗದ ಮಂಜೂರಾತಿ ಕಷ್ಟಸಾಧ್ಯ. ಈ ಹಿಂದೆಲ್ಲ ಇಲ್ಲಿ ನಿರ್ಮಾಣವಾದ ಸಾಕಷ್ಟು ಕಟ್ಟಡಗಳಿಗೆ ಜಾಗ ಮಂಜೂರಾತಿ ಪತ್ರ ಕೇಳುತ್ತಿರಲಿಲ್ಲ. ಪಂಚಾಯಿತಿಯಿಂದ ಜಾಗವನ್ನು ಗುರುತಿಸಿ ನಾಲ್ಕು ದಿಕ್ಕುಗಳ ಚಕ್ಕುಬಂದಿ ಹಾಕಿ ಅನುಮತಿ ನೀಡಲಾಗುತ್ತಿತ್ತು. ಈಗಲೂ ಅದೇ ರೀತಿ ಅಂಗನವಾಡಿ ಕಟ್ಟಡಕ್ಕೆ ಜಾಗ ನೀಡುವಂತೆ ಪಂಚಾಯಿತಿಯು ಸಂಬಂಧಿಸಿದ ಇಲಾಖೆಗೆ ಮನವಿ ಮಾಡಿದ್ದು, ಆದರೆ ಅನುಮತಿ ಸಿಕ್ಕಿಲ್ಲ.
ಅರಳಗೋಡು ಅಂಗನವಾಡಿಗೆ ಹೊಸ ಕಟ್ಟಡಕ್ಕೆ ಕೋರಿ ನಮ್ಮ ಕೇಂದ್ರ ಕಚೇರಿಗೆ ಮನವಿ ಸಲ್ಲಿಸಲಾಗಿದೆ. ಸಭೆಯಲ್ಲಿ ಶಾಸಕರ ಗಮನಕ್ಕೂ ತರಲಾಗಿದೆ. ಸರ್ಕಾರಿ ಶಾಲೆಯ ಕಾಪೌಂಡ್ ಆವರಣದೊಳಗೆ ಹೊಸ ಕಟ್ಟಡ ನಿರ್ಮಿಸಲು ಜಾಗದ ಸಮಸ್ಯೆ ತಲೆದೋರಲಾರದು. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಮೇಲ್ವಿಚಾರಕಿ ಗುತ್ಯಮ್ಮ ತಿಳಿಸಿದ್ದಾರೆ.
ಗ್ರಾಮದ ಅಂಗನವಾಡಿ ಹೊಸ ಕಟ್ಟಡ ಬೇಡಿಕೆಯನ್ನು ಸ್ಥಳೀಯ ಪಂಚಾಯಿತಿಗೆ ಸಲ್ಲಿಸಲಾಗಿದೆ. ಇದಕ್ಕೆ ಪಂಚಾಯಿತಿಯಲ್ಲಿ ಅನುದಾನ ಲಭ್ಯ ಇಲ್ಲವಾದ್ದರಿಂದ ಅಂಗನವಾಡಿ ಅಭಿವೃದ್ಧಿಯನ್ನು ಸಂಬಂಧಿಸಿದ ಇಲಾಖೆಗೆ ನೀಡುವುದಾಗಿ ತಿಳಿಸಿದ್ದರು. ಮಕ್ಕಳ ಸ್ಥಳಾಂತರಕ್ಕೆ ಗ್ರಾಮದಲ್ಲಿ ಬದಲೀ ಕಟ್ಟಡವೂ ಇಲ್ಲ ಎನ್ನುತ್ತಾರೆ ಬಾಲವಿಕಾಸ ಸಮಿತಿ ಅಧ್ಯಕ್ಷೆ ಪ್ರಮೀಳಾ ಅಳಗೋಡು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net