ಸಜ್ಜನಿಕೆಯ ಸಾಧಕನಿಗೆ ಶತಮಾನದ ನಮನ

3-67e2e9391cb15
Published on
ಕನ್ನಡ ಚಿತ್ರರಂಗದಲ್ಲಿ ಸಹಜತೆಯ ಅಭಿನಯ ನೀಡಿ ತಂದೆ, ತಾತ, ಬಂಧು ಹೀಗೆ ರಕ್ತಸಂಬಂಧಿಕರೋ ಎನ್ನುವಂತೆ ಕನ್ನಡಿಗರ ಮನಸ್ಸಿನಲ್ಲಿ ಉಳಿದುಕೊಂಡಿರುವ ಕಲಾವಿದ ಕೆ.ಎಸ್.ಅಶ್ವಥ್ (ಕರಗನಹಳ್ಳಿ ಸುಬ್ಬರಾಯಪ್ಪ ಅಶ್ವಥ್) ಅವರ ಜನ್ಮ ಶತಮಾನೋತ್ಸವ. (ಜನನ 1925ರ ಮಾರ್ಚ್ 25). ಅವರ ನೆನಪಾದ ಕೂಡಲೇ ನನಗೆ ನೆನಪಾಗುವ ಗೀತೆ, ‘ತಾಯೆ ಶಾರದೆ ಲೋಕಪೂಜಿತೆ’. ಸ್ವಾಭಿಮಾನಿ ಬಡತನವನ್ನು ಕೂಡ ಬಂಗಾರವೆಂದು ಭಾವಿಸಿ ದಿಟ್ಟತನದ ಬದುಕನ್ನು ಕಟ್ಟಿಕೊಂಡ ಅಶ್ವಥ್ ಜೀವನದ ಅನಿವಾರ್ಯತೆಗಾಗಿ ಕ್ಯಾಂಟೀನ್ ಆರಂಭಿಸಿದಾಗ ಅದನ್ನು ಅನ್ನಬ್ರಹ್ಮನ ಆರಾಧನೆ ಎಂದು ಕರೆದಿದ್ದನ್ನು ಮರೆಯುವುದು ಹೇಗೆ?

ಅಶ್ವಥ್ ಹುಟ್ಟಿದ್ದು ಹೊಳೆನರಸೀಪುರದ ಸಮೀಪವಿರುವ ಕರಗನಹಳ್ಳಿ. ತಂದೆ ಪುರೋಹಿತ ಸುಬ್ಬರಾಯಪ್ಪ. ಹುಟ್ಟಿದ ಎರಡೇ ವರ್ಷಕ್ಕೆ ತಾಯಿಯನ್ನು ಕಳೆದುಕೊಂಡರು. ಇವರು ಹುಟ್ಟಿದಾಗ ತಂದೆಗೆ ಆಗಲೇ ಐವತ್ತು ವರ್ಷ, ನಾಲ್ವರು ಹೆಣ್ಣುಮಕ್ಕಳು ಬೆಳೆದು ದೊಡ್ಡವರಾಗಿದ್ದರು. ಒಂದು ಗಂಡು ಮಗು ಬೇಕು ಎನ್ನುವ ಹಂಬಲಕ್ಕೆ ಇವರು ಭುವಿಗೆ ಬಂದಿದ್ದರು. ಬೆಳೆದಿದ್ದು ಶಾಲಾ ಶಿಕ್ಷಕಿಯಾಗಿದ್ದ ಸೋದರತ್ತೆ ತಿಪ್ಪಮ್ಮನ ಆಶ್ರಯದಲ್ಲಿ. ಆಗಲೇ ಸಿನಿಮಾ ಹುಚ್ಚು, ‘ಹಂಟರ್ ವಾಲಿ’ ನೋಡಿ ಅನುಕರಿಸಲು ಹೋಗಿ ಬೆನ್ನು ಮುರಿದು ಕೊಂಡಿದ್ದೂ ಇದೆ. ಕ್ವಿಟ್ ಇಂಡಿಯಾ ಚಳವಳಿ ಅವರ ವಿದ್ಯಾಭ್ಯಾಸಕ್ಕೆ ವಿರಾಮ ಹಾಕಿತು. ಮುಂದೆ ಸವಾಲಿನ ಬದುಕು. ಸೋದರತ್ತೆಯ ಮಗಳು ಶಾರದಾ ಜೊತೆಗೆ ಹದಿನೆಂಟನೆಯ ವಯಸ್ಸಿಗೆ ವಿವಾಹವೂ ಆಯಿತು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಲ್ಲಿ ಗುಮಾಸ್ತರಾಗಿ ಉದ್ಯೋಗ ಪಡೆದವರು ಕ್ರಮೇಣ ಅಧಿಕಾರಿಯಾದರು.

ಸರ್ಕಾರಿ ಉದ್ಯೋಗದ ನೆಮ್ಮದಿ ಬದುಕು ಇದ್ದರೂ ಕಲೆ ಬಿಡಲಿಲ್ಲ. ‘ಹವ್ಯಾಸಿ ಕಲಾವಿದರ’ ತಂಡದ ಮೂಲಕ ನಾಟಕದಲ್ಲಿ ಅಭಿನಯಿಸಲು ಆರಂಭಿಸಿದರು. ಇವರ ಅಭಿನಯ ಕಂಡು ಕೆ.ಸುಬ್ರಹ್ಮಣ್ಯಂ ತಮ್ಮ ‘ಸ್ತ್ರೀರತ್ನ’ ಚಿತ್ರದಲ್ಲಿ ನಾಯಕನ ಪಾತ್ರ ಕೊಟ್ಟರು. ‘ಶಿವಶರಣೆ ನಂಬಿಯಕ್ಕ’, ‘ಕೋಕಿಲ ವಾಣಿ’ ಎರಡು ಚಿತ್ರಗಳು ಒಟ್ಟೊಟ್ಟಿಗೇ ಸಿಕ್ಕವು. ಚಿತ್ರರಂಗದಲ್ಲಿಯೇ ಉಳಿಯಬಹುದು ಎನ್ನುವ ನಂಬಿಕೆ ಬಂದಿತು. ಹೆಂಡತಿಗೆ ಹೇಳದೆ ಸರ್ಕಾರಿ ಉದ್ಯೋಗವನ್ನೂ ಬಿಟ್ಟರು. ಅವಕಾಶಗಳನ್ನು ಹುಡುಕಿ ಮದ್ರಾಸಿಗೆ ಹೊರಟೇ ಬಿಟ್ಟರು.

ಹೆಂಡತಿ ಮದ್ರಾಸಿಗೆ (ಈಗಿನ ಚೆನ್ನೈ) ಹುಡುಕಿಕೊಂಡು ಬಂದರು. ಅಶ್ವಥ್ ಸ್ಥಿತಿ ಕಂಡು ಕಣ್ಣೀರು ಹಾಕಿದರು. ವರ್ಷಕ್ಕೆ ಐದಾರು ಚಿತ್ರಗಳು ನಿರ್ವಣವಾಗುತ್ತಿದ್ದ ಆ ಕಾಲದಲ್ಲಿ ಚಿತ್ರರಂಗವನ್ನೇ ನಂಬಿ ಬದುಕುವುದು ಸುಲಭವಾಗಿರಲಿಲ್ಲ. ಆದರೆ ಅಶ್ವಥ್ ಅವರ ತಾಳ್ಮೆಯೇ ಅವರನ್ನು ಗೆಲ್ಲಿಸಿತು. ಆಗೀಗ ನಾಟಕಗಳನ್ನು ಮಾಡುತ್ತ ಬದುಕಿನಲ್ಲಿ ಗಟ್ಟಿಯಾದರು. ‘ನಂದಾದೀಪ’, ‘ಬೆಳ್ಳಿಮೋಡ’ಗಳಲ್ಲಿ ತಂದೆಯ ಪಾತ್ರ ಸಿಕ್ಕಿತು. ಸಿಕ್ಕ ಅವಕಾಶಗಳಿಗೆ ಜೀವ ತುಂಬಿದರು. ‘ನ್ಯಾಯವೇ ದೇವರು’, ‘ಉಯ್ಯಾಲೆ’, ‘ಕಸ್ತೂರಿ ನಿವಾಸ’, ‘ಸರ್ವಮಂಗಳ’, ‘ನಾಗರಹಾವು’ ಹೀಗೆ ವೈವಿಧ್ಯಮಯ ಪಾತ್ರಗಳ ಮೂಲಕ ಬೆಳೆಯುತ್ತ ಹೋದರು.

ಮೈಸೂರಿನಲ್ಲಿ ಅಶ್ವಥ್ ಒಂದು ಟಾಂಗಾವನ್ನು ಬಾಡಿಗೆಗೆ ಗೊತ್ತುಮಾಡಿಕೊಂಡಿದ್ದರು. ಅದೊಂದು ಸುಂದರ ಗಾಡಿ. ಅದರಲ್ಲಿ ಅಶ್ವಥ್ ಅವರ ದಿನನಿತ್ಯದ ಪಯಣ. ಅನವಶ್ಯಕವಾದ ಜನಗಳ ಆಕರ್ಷಣೆ ತಮ್ಮೆಡೆಗೆ ಬೀರದಿರಲಿ ಎಂದು ಒಂದು ಮಫ್ಲರ್ ಸುತ್ತಿಕೊಂಡು ಒಂದೆಡೆ ಬಂದು ನಿಲ್ಲುತ್ತಿದ್ದರು. ‘ಮಧುರ ಮಧುರವೀ ಮಂಜುಳಗಾನ’ ಕಾರ್ಯಕ್ರಮಕ್ಕೆ ನಾನು ಕರೆದಾಗ ಪ್ರೀತಿಯಿಂದ ಭಾಗವಹಿಸುತ್ತಿದ್ದರು. ಪ್ರತಿ ಹಾಡನ್ನೂ ಆನಂದಿಸುತ್ತಿದ್ದರು.

ಡಾ.ರಾಜಕುಮಾರ್ ಅವರ ಜೊತೆಗೆ ಅಶ್ವಥ್ ಅವರದು ವಿಶೇಷ ಸಂಬಂಧ, ಅವರ ಜೋಡಿಯ ಪಾತ್ರಗಳದ್ದೇ ಒಂದು ಪರಂಪರೆ. ಅಶ್ವಥ್ ಅವರಿಗೆ ಡಾ.ರಾಜಕುಮಾರ್ ಪ್ರಶಸ್ತಿ ಬಂದಾಗ, ‘ಅಶ್ವಥ್ ಎಂದರೆ ವಿಶ್ವಕೋಶವಿದ್ದಂತೆ. ಅವರ ಹೆಸರಿನ ಪ್ರಶಸ್ತಿ ನನಗೆ ಬರಬೇಕಿತ್ತು, ನನ್ನ ಹೆಸರಿನ ಪ್ರಶಸ್ತಿ ಅವರಿಗೆ ಬಂದಿರುವುದು ನಿಜಕ್ಕೂ ವಿಪರ್ಯಾಸ’ ಎಂದು ಸ್ವತಃ ರಾಜಕುಮಾರ್ ಅವರೇ ಹೃದಯತುಂಬಿ ಹೇಳಿದ್ದರು. ಸಜ್ಜನಿಕೆಯ ಹಿನ್ನೆಲೆಯಿಂದ ಬಂದ ಅಶ್ವಥ್ ಅವರಿಗೆ ಕ್ರಮೇಣ ಕನ್ನಡ ಚಿತ್ರರಂಗ ಪಡೆದುಕೊಂಡ ತಿರುವು ನೋವು ಕೊಟ್ಟಿತು. 1994ರ ಜೂನ್ 1ರಂದು ಚಿತ್ರರಂಗಕ್ಕೆ ವಿದಾಯ ಹೇಳಿದರು. ಬಣ್ಣದ ಲೋಕದಲ್ಲಿ ಅಲ್ಲೋಲ ಕಲ್ಲೋಲವೇ ಆಯಿತು. ಆದರೆ ಆರ್.ಎನ್.ಜಯಗೋಪಾಲ್ ಅವರಿಗಾಗಿ ‘ಸ್ವಾತಿಮುತ್ತು’ ಧಾರಾವಾಹಿಯಲ್ಲಿ, ರಾಜಕುಮಾರ್ ಅವರಿಗಾಗಿ ‘ಶಬ್ದವೇಧಿ’ ಚಿತ್ರದಲ್ಲಿ ಅಭಿನಯಿಸಿದರು. ಅಂತರವನ್ನು ಕಾಪಾಡಿಕೊಂಡೇ ಬಂದರು.

352 ಚಿತ್ರಗಳಲ್ಲಿ ಅಭಿನಯಿಸಿದ ಅವರು ರಾಜಕುಮಾರ್ ಅವರ ಜೊತೆಗೆ 94 ಚಿತ್ರಗಳಲ್ಲಿ ಅಭಿನಯಿಸಿದರು. ‘ನಮ್ಮ ಮಕ್ಕಳು’ (1968-69), ‘ನಾಗರಹಾವು’ (1972-73), ‘ಮುತ್ತಿನ ಹಾರ’ (1990-91) ಚಿತ್ರಗಳಿಗೆ ಶ್ರೇಷ್ಠ ಪೋಷಕ ನಟ ಗೌರವ ಪಡೆದ ಅವರಿಗೆ 1981ನೆಯ ಸಾಲಿನಲ್ಲಿ ರಾಜ್ಯೋತ್ಸವ ಗೌರವ ಮತ್ತು 1993-94ನೆಯ ಸಾಲಿಗೆ ಜೀವಮಾನದ ಸಾಧನೆಗಾಗಿ ಡಾ.ರಾಜಕುಮಾರ್ ಪ್ರಶಸ್ತಿಯ ಗೌರವ ಅರಸಿಕೊಂಡು ಬಂದವು. ಇದೆಲ್ಲಕ್ಕಿಂತ ಮುಖ್ಯವಾಗಿ ಅವರು ಕನ್ನಡಿಗರ ಮನದಲ್ಲಿ ನೆಲೆ ನಿಂತಿರುವ ರೀತಿ ದೊಡ್ಡದು.

2010ರ ಜನವರಿ 18ರಂದು ನಮ್ಮನ್ನು ಅಗಲಿದ ಅಶ್ವಥ್ ಅವರ ಜನ್ಮಶತಮಾನೋತ್ಸವವನ್ನು ವಿಶೇಷವಾಗಿ ಆಚರಿಸಬೇಕಿದೆ. ಕನ್ನಡಕ್ಕೆ ವಿಶೇಷ ಕೊಡುಗೆ ನೀಡಿದ, ಅಚ್ಚಗನ್ನಡ ಮಾತನಾಡುತ್ತಿದ್ದ ಕೆ.ಎಸ್.ಅಶ್ವಥ್ ಸೇರಿದಂತೆ ಈ ವರ್ಷ ಜನ್ಮ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಸಾಧಕರೆಲ್ಲರನ್ನೂ ಸ್ಮರಿಸುವ ವಿಶೇಷ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ಅಯೋಜಿಸಲಿದೆ.(ಲೇಖಕರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net