

ನವದೆಹಲಿ: ಸೂರ್ಯಾಸ್ತದ ಬಳಿಕವೂ ಶವ ಪರೀಕ್ಷೆ ಮಾಡಬಹುದು ಎಂದು ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಈ ಹಿಂದೆ ಹಗಲಿನಲ್ಲಿ ಮಾತ್ರವೇ ಪೋಸ್ಟ್ಮಾರ್ಟಂ ನಡೆಸಲು ಅವಕಾಶವಿತ್ತು. ಸದ್ಯ ಸೂರ್ಯಾಸ್ತದ ನಂತರ ಮರಣೋತ್ತರ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಈ ನಿಯಮ 2021ರ ನವೆಂಬರ್ 15ರಿಂದ ಜಾರಿಯಲ್ಲಿದೆ.
ಆಸ್ಪತ್ರೆಗಳಲ್ಲಿ ಸರಿಯಾದ ಮೂಲಸೌಕರ್ಯ ಇದ್ದರೆ ಸೂರ್ಯಾಸ್ತದ ನಂತರವೂ ಪೋಸ್ಟ್ಮಾರ್ಟಂ ನಡೆಸಬಹುದು. ಅಂಗಾಂಗ ದಾನಕ್ಕೆ ಸಂಬಂಧಿಸಿದ ಪೋಸ್ಟ್ಮಾರ್ಟಂಗೆ ಹೆಚ್ಚಿನ ಆದ್ಯತೆ ನೀಡಿ ಸರ್ಕಾರ ಈ ಆದೇಶವನ್ನು ಸೋಮವಾರ ಪ್ರಕಟಿಸಿದೆ.
ನರಹತ್ಯೆ, ಆತ್ಮಹತ್ಯೆ, ಅತ್ಯಾಚಾರ ಮತ್ತು ಇತರೆ ಸಂದೇಹಾಸ್ಪದ ಸಾವಿನ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಪ್ರಕರಣಗಳಿಗೆ ಈ ಆದೇಶ ಅನ್ವಯ ಆಗಲಿದೆ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ಮಾಂಡವೀಯ ಟ್ವೀಟ್ ಮಾಡಿದ್ದು, ಬ್ರಿಟಿಷ್ ಕಾಲದ ವ್ಯವಸ್ಥೆಯೊಂದು ಇಂದಿಗೆ ಕೊನೆಗೊಂಡಿದ್ದು, ಇನ್ನು 24 ಗಂಟೆ ಪೋಸ್ಟ್ಮಾರ್ಟಂ ಸೇವೆ ಸಿಗಲಿದೆ ಎಂದಿದ್ದಾರೆ. ಒಟ್ಟಾರೆ ಈ ಹೊಸ ಆದೇಶದಿಂದ ಮೃತರ ಕುಟುಂಬಗಳಿಗೆ ಮೃತದೇಹಗಳನ್ನು ಬಹುಬೇಗನೆ ನೀಡಲು ಹಾಗೂ ಶೀಘ್ರವಾಗಿ ಅಂಗಾಂಗ ದಾನ ಪ್ರಕ್ರಿಯೆ ಮುಗಿಸಲು ಅನುಕೂಲವಾಗಲಿದೆ