ಹೆಣ್ಣು ಭ್ರೂಣ ಪತ್ತೆ, ಗರ್ಭಪಾತ ಮಾಡಿಸುತ್ತಿದ್ದ ಪ್ರಕರಣ: ಮತ್ತಿಬ್ಬರ ಬಂಧನ

arrested
Published on

ಬೆಂಗಳೂರು: ಹೆಣ್ಣು ಭ್ರೂಣ ಪತ್ತೆ ಹಾಗೂ ಗರ್ಭಪಾತ ಮಾಡಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಯ್ಯಪ್ಪನಹಳ್ಳಿ ಠಾಣಾ ಪೊಲೀಸರು ಮತ್ತೆ ವೈದ್ಯ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಒಂಭತ್ತಕ್ಕೆ ಏರಿದೆ.

ಬಂಧಿತ ಆರೋಪಿಗಳು ಇದುವರೆಗೂ 900 ಕ್ಕೂ ಹೆಚ್ಚು ಹೆಣ್ಣು ಭ್ರೂಣ ಪತ್ತೆ ಹಾಗೂ ಗರ್ಭಪಾತ ಮಾಡಿಸಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.


ಮೈಸೂರು ಮೂಲದವರಾದ ಡಾ.ಚಂದನ್ ಬಲ್ಲಾಳು(೫೨) ಮತ್ತು ಪ್ರಯೋಗಾಲಯ ತಾಂತ್ರಿಕ ಸಿಬ್ಬಂದಿ ನಿಸ್ಸಾರ್ (೨೮) ಬಂಧಿತರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಉದಯಗಿರಿಯಲ್ಲಿರುವ ಮಾತಾ ಆಸ್ಪತ್ರೆ, ರಾಜ್ ಕುಮಾರ್ ರಸ್ತೆಯಲ್ಲಿರುವ ಆಯುರ್ವೇದಿಕ್ ೈಲ್ಸ್ ಡೇ ಕೇರ್ ಸೆಂಟರ್ ಜಪ್ತಿ ಮಾಡಲಾಗಿದೆ. ಆರೋಪಿ ಡಾ.ಚಂದನ್ ಬಲ್ಲಾಳು ಹೆಣ್ಣು ಭ್ರೂಣವನ್ನು ಗರ್ಭಪಾತ ಮಾಡಿಸುತ್ತಿದ್ದರೆ, ಈ ಕೃತ್ಯಕ್ಕೆ ಆರೋಪಿ ಸಿಸ್ಸಾರ್ ಔಷಧಿಗಳನ್ನು ತಂದು ಕೊಡುವ ಮೂಲಕ ಕೃತ್ಯಕ್ಕೆ ಸಹಕಾರ ನೀಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಶಿವಲಿಂಗೇಗೌಡ, ನಯನ್ ಕುಮಾರ್, ವೀರೇಶ್, ನವೀನ್‌ಕುಮಾರ್ ಎಂಬ ನಾಲ್ವರು ಬಂಧಿಸಲಾಗಿತ್ತು. ಆ ನಂತರ ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಚೆನ್ನೈ ಮೂಲದ ಡಾ.ತುಳಸಿರಾಮ್, ಚಂದನ್ ಬಲ್ಲಾಳು ಆಸ್ಪತ್ರೆಲ್ಲಿ ಸ್ವಾಗತಕಾರಿಣಿಯಾದ ರಿಜ್ಮಾ ಖಾನಂ ಮತ್ತು ಡಾ.ಚಂದನ್ ಬಲ್ಲಾಳು ಪತ್ನಿ ಹಾಗೂ ಮಾತಾ ಆಸ್ಪತ್ರೆಯ ವ್ಯವಸ್ಥಾಪಕಿ ಮೀನಾ ಎಂಬ ಮೂವರನ್ನು ಬಂಧಿಸಲಾಗಿತ್ತು. ಇದೀಗ ತಲೆಮರೆಸಿಕೊಂಡಿದ್ದ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.


ಇನ್ನೂ ಹಲವರ ಕೈವಾಡವಿದೆ:
ಹೆಣ್ಣು ಭ್ರೂಣ ಪತ್ತೆ ಹಾಗೂ ಗರ್ಭಪಾತ ಮಾಡಿಸುತ್ತಿದ್ದ ಜಾಲದ ಕುರಿತು ಮಾಹಿತಿ ಪಡೆದಿದ್ದ ಬೈಯ್ಯಪ್ಪನಹಳ್ಳಿ ಪೊಲೀಸರು ಕಳೆದ ಅಕ್ಟೋಬರ್‌ನಲ್ಲಿ ಶಿವನಂಜೇಗೌಡ, ವೀರೇಶ್, ನವೀನ್ ಕುಮಾರ್ ಮತ್ತು ನಯನ್ ಕುಮಾರ್ ಎಂಬುವವರನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳು ಗರ್ಭಿಣಿಯರನ್ನು ಗುರುತಿಸಿಕೊಂಡು ಮಂಡ್ಯದ ಆಲೆಮನೆಯೊಂದರಲ್ಲಿ ಸ್ಕ್ಯಾನ್ ಮಾಡಿಸುತಿದ್ದರು. ಬಳಿಕ ಹೆಣ್ಣು ಭ್ರೂಣವಾಗಿರುವುದು ಖಚಿತವಾದರೆ ಮೈಸೂರಿನ ಡಾ.ಚಂದನ್ ಬಲ್ಲಾಳ್ ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸುತ್ತಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿತ್ತು. ಮತ್ತಷ್ಟು ತನಿಖೆ ಮುಂದುವರಿಸಿದಾಗ ಈ ಪ್ರಕರಣದಲ್ಲಿ ವೈದ್ಯರ ಸಹಿತ ಇನ್ನೂ ಹಲವರ ಕೈವಾಡವಿರುವುದು ಪತ್ತೆಯಾಗಿತ್ತು. ಸದ್ಯ ಮತ್ತಿಬ್ಬರನ್ನು ಬಂಧಿಸಲಾಗಿದ್ದು, ಈ ಪ್ರಕರಣದಲ್ಲಿ ಇದುವರೆಗೂ ಒಟ್ಟು ಒಂಭತ್ತು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳಾದ ಶಿವಲಿಂಗೇಗೌಡ. ವೀರೇಶ್, ನವೀನ್‌ಕುಮಾರ್ ಮತ್ತು ನಯನ್ ಕುಮಾರ್, ಡಾ. ತುಳಸಿರಾಮ್ ಮೂಲಕ ಹೆಣ್ಣು ಭ್ರೂಣ ಪತ್ತೆ ಮಾಡುತ್ತಿದ್ದರು. ಆ ಬಳಿಕ ರಿಜ್ಮಾ ತಂಡ ಗರ್ಭಿಣಿಯರನ್ನು ಡಾ.ಚಂದನ್ ಬಲ್ಲಾಳು ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸುತ್ತಿದ್ದರು. ಆರೋಪಿಗಳು ಪ್ರತಿ ಭಾನುವಾರ ಹೆಣ್ಣು ಭ್ರೂಣ ಪತ್ತೆ ಮಾಡುವ ಕೆಲಸ ಮಾಡುತ್ತಿದ್ದರು.

ಡಾ.ಚಂದನ್ ಬಲ್ಲಾಳು ಮೈಸೂರಿನಲ್ಲಿರುವ ಮಾತಾ ಆಸ್ಪತ್ರೆಯನ್ನು ಅಭಿವೃದ್ಧಿ ಪಡಿಸಿ ಬೇರೆ ವೈದ್ಯರನ್ನು ಅಲ್ಲಿಗೆ ಕರೆಸಿಕೊಂಡು ಈ ರೀತಿಯ ಕೃತ್ಯ ಎಸಗುತ್ತಿದ್ದ. ಇವರ ಕೃತ್ಯದ ಬಗ್ಗೆ ಕೆಲವರಿಗೆ ಗೊತ್ತಾದ ಹಿನ್ನೆಲೆಯಲ್ಲಿ ಮೈಸೂರಿನ ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ಮತ್ತೊಂದು ಆಸ್ಪತ್ರೆಯನ್ನು ಆರಂಭಿಸುತ್ತಾನೆ. ಅದಕ್ಕೆ ಆಯುರ್ವೇಧಿಕ್ ೈಲ್ಸ್ ಡೇ ಕೇರ್ ಸೆಂಟರ್ ಎಂಬ ಹೆಸರಿಟ್ಟು ಅಲ್ಲಿಗೆ ರಿಜ್ಮಾ ತಂಡವನ್ನು ಕರೆಸಿಕೊಂಡು ಗರ್ಭೀಣಿಯರನ್ನು ಅಡ್ಮಿಷನ್ ಮಾಡಿಸಿಕೊಂಡು ಗರ್ಭಪಾತ ಮಾಡಿಸುತ್ತಿರುತ್ತಾನೆ. ಇಲ್ಲಿಗೆ ಔಷಧಿಗಳನ್ನು ಮಾತಾ ಆಸ್ಪತ್ರೆಯಿಂದ ಪೂರೈಕೆ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಈ ಎರಡು ಆಸ್ಪತ್ರೆಯನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


900 ಕ್ಕೂ ಹೆಣ್ಣು ಭ್ರೂಣ ಪತ್ತೆ, ಗರ್ಭಪಾತ
ಆರೋಪಿಗಳು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಪ್ರತೀ ತಿಂಗಳಿಗೆ ಕನಿಷ್ಠ ೨೦-೨೫ ಭ್ರೂಣ ಹತ್ಯೆ ಮಾಡುತ್ತಿದ್ದರು ಎಂಬ ಸಂಗತಿ ಪೊಲೀಸರ ವಿಚಾರಣೆಯಲ್ಲಿ ಬಹಿರಂಗವಾಗಿದೆ. ಇದುವರೆಗೂ ಸುಮಾರು ೯೦೦ ಕ್ಕೂ ಹೆಚ್ಚು ಹೆಚ್ಚು ಭ್ರೂಣ ಪತ್ತೆ ಮತ್ತು ಗರ್ಭಪಾತ ಮಾಡಿಸಿದ್ದಾರೆ ಎಂಬ ಅಘಾತಕಾರಿಯಾದ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ. ಹೆಣ್ಣು ಭ್ರೂಣ ಪತ್ತೆಗೆ ೨೫ ಸಾವಿರ ರೂ. ಹಾಗೂ ಹೆಣ್ಣು ಭ್ರೂಣ ಇರುವುದು ಪತ್ತೆಯಾದರೆ ಅದರ ಗರ್ಭಪಾತಕ್ಕೆ ೨೫ ಸಾವಿರ ರೂ. ಹಣವನ್ನು ಆರೋಪಿಗಳು ಗರ್ಭಿಣಿಯರು ಮತ್ತು ಅವರ ಕುಟುಂಬ ಸದಸ್ಯರಿಂದ ವಸೂಲಿ ಮಾಡುತ್ತಿದ್ದರು. ಬಂದ ಹಣವನ್ನು ಎಲ್ಲಾ ಆರೋಪಿಗಳು ಹಂಚಿಕೊಳ್ಳುತ್ತಿದ್ದರು.

ವಿವಿಧ ಜಿಲ್ಲೆಗಳಿಗೂ ವ್ಯಾಪಿಸಿದ್ದ ಜಾಲ
ಹೆಣ್ಣು ಭ್ರೂಣ ಪತ್ತೆ ಹಾಗೂ ಗರ್ಭಪಾತ ಮಾಡಿಸುತ್ತಿದ್ದ ಪ್ರಕರಣವು ಕೇವಲ ಬೆಂಗಳೂರು ಮೈಸೂರಿಗೆ ಸೀಮಿತವಾಗಿರದೇ ವಿವಿಧ ಜಿಲ್ಲೆಗಳಿಗೂ ಈ ಜಾಲ ವ್ಯಾಪಿಸಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ತುಮಕೂರು, ದಾವಣಗೆರೆ ವ್ಯಾಪ್ತಿಸಿದ್ದು, ಬೆಂಗಳೂರಿನಿಂದ ಮೈಸೂರು ಮಾರ್ಗದಲ್ಲಿರುವ ಗರ್ಭಿಣಿಯರನ್ನು ಹೆಚ್ಚಾಗಿ ಕರೆದೊಯ್ದು ಹೆಣ್ಣು ಭ್ರೂಣ ಪತ್ತೆ ಹಚ್ಚಿ ಗರ್ಭಪಾತ ಮಾಡಿಸುತ್ತಿದ್ದರು. ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net