ನೌಕರಿ ನೆಪದಲ್ಲಿ ಚೀನಾ ಕಂಪನಿಗಳ ವಂಚನೆ ಪ್ರಕರಣ; ಇಡಿಯಿಂದ 6.47 ಕೋಟಿ ಜಪ್ತಿ

China app
Published on

ಬೆಂಗಳೂರು: ಅರೆಕಾಲಿಕ ನೌಕರಿ ಆಮಿಷವೊಡ್ಡಿ ವಂಚನೆ ಮಾಡುತ್ತಿದ್ದ ಚೀನಾ ಆ್ಯಪ್ ಕಂಪನಿಗೆ ಸೇರಿದ 71.3 ಲಕ್ಷ ಕ್ರಿಪ್ಟೋ ಕರೆನ್ಸಿ ಸೇರಿದಂತೆ 6.47 ಕೋಟಿ ರೂ.ಅನ್ನು ಜಾರಿ ನಿರ್ದೇಶನಾಲಯ(ಇಡಿ) ಜಪ್ತಿ ಮಾಡಿದೆ.

ಬೆಂಗಳೂರು ನಗರ ಸಿಇಎನ್ ಠಾಣೆಯಲ್ಲಿ ದಾಖಲಾಗಿರುವ ಪಾರ್ಟ್‌ಟೈಮ್ ಜಾಬ್ ವಂಚನೆ ಪ್ರಕರಣದ ಹೆಚ್ಚಿನ ತನಿಖೆಯನ್ನು ಇಡಿ ಅಧಿಕಾರಿಗಳು ಕೈಗೊಂಡಿದ್ದಾರೆ.

ಚೀನಾ ಮೂಲದ ವ್ಯಕ್ತಿಗಳು, ಭಾರತದಲ್ಲಿ ಕಂಪನಿಗಳನ್ನು ತೆರೆದು ಭಾರತೀಯರನ್ನು ನಿರ್ದೇಶಕ ಹುದ್ದೆ, ಅನುವಾದಕರು ಮತ್ತು ಮಾನವ ಸಂಪನ್ಮೂಲ ವ್ಯವಸ್ಥಾಪಕ ಮತ್ತು ಟೆಲಿಕಾಲ್‌ಗಳನ್ನು ನೇಮಕ ಮಾಡಿಕೊಂಡಿದ್ದರು. ಆನ್‌ಲೈನ್‌ನಲ್ಲಿ ಕೀಪ್‌ಶರೇರ್ ಎಂಬ ಮೊಬೈಲ್ ಆ್ಯಪ್‌ನಲ್ಲಿ ಪರಿಚಯಿಸಿ ಅರೆಕಾಲಿಕ ನೌಕರಿ ಕೊಡಿಸುವುದಾಗಿ ಆಮಿಷವೊಡ್ಡುತ್ತಿದ್ದರು.

ಟೆಲಿ ಕಾಲರ್‌ಗಳ ಕಡೆಯಿಂದ ಕಾಲ್ ಮಾಡಿಸಿ ಅರೆಕಾಲಿಕ ನೌಕರಿಗೆ ಅಮಾಯಕರನ್ನು ನೇಮಕ ಮಾಡಿಕೊಳ್ಳುತ್ತಿದ್ದರು. ಇದಾದ ಮೇಲೆ ಹೆಚ್ಚಿನ ಕಮಿಷನ್ ಕೊಡುವುದಾಗಿ ಆಮಿಷವೊಡ್ಡಿ ಆ್ಯಪ್ ಕಂಪನಿಗೆ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು. ಸೆಲೆಬ್ರಿಟಿಗಳ ವೀಡಿಯೊಗಳನ್ನು ಲೈಕ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವ ಟಾಸ್ಕ್ ಕೊಡುತ್ತಿದ್ದರು.

ಪ್ರತಿ ವಿಡಿಯೊಗೆ ಶೇರ್ ಮಾಡಿದಾಗ 20 ರೂ. ರಂತೆ ನೌಕರನ ಕೀಪ್‌ಶೇರ್ ವಾಲೆಟ್‌ಗೆ ಹಣ ಜಮೆ ಮಾಡುತ್ತಿದ್ದರು. ಅದನ್ನು ಡ್ರಾ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅದನ್ನು ಡ್ರಾ ಮಾಡಬೇಕೆಂದರೆ ಹಣ ಹೂಡಿಕೆ ಮಾಡಬೇಕೆಂದು ಹೇಳಿ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು. ಪ್ಲೇ ಸ್ಟೋರ್‌ನಲ್ಲಿ ಅಪ್ಲಿಕೇಷನ್ ತೆಗೆದು ಬಿಡುತ್ತಿದ್ದರು. ಇದರಿಂದ ನೂರಾರು ಜನರಿಗೆ ಮೋಸ ಆಗಿದೆ.

ಇದೆ ರೀತಿ ಟೋನಿಂಗ್ ವರ್ಲ್ಡ್ ಇಂಟರ್‌ನ್ಯಾಷನಲ್ ಪ್ರೈ.ಲಿ., ಅನ್ಸೋಲ್ ಟೆಕ್ನಾಲಜಿ ಪ್ರೈ.ಲಿ., ರೆಡ್‌ರಾಕೂನ್ ಸರ್ವಿಸಸ್ ಇಂಡಿಯಾ ಪ್ರೈ.ಲಿ., ಎನರ್ಜಿಕೋ ಡಿಜಿಟಲ್ ಪ್ರೈ. ಲಿ., ಬ್ರಿಡ್ಜ್ ತೇರಾ ಟೆಕ್ನಾಲಜೀಸ್ ಪ್ರೈ.ಲಿ., ಅಶೆನ್‌ಫಾಲಸ್ ಟೆಕ್ನಾಲಜಿಸ್ ಪ್ರೈ.ಲಿ ಕಂಪನಿಗಳನ್ನು ತೆರೆದಿದ್ದರು. ಈ ಕಂಪನಿಗಳು ಮತ್ತು 9 ವ್ಯಕ್ತಿಗಳಿಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ.

ಸಾರ್ವಜನಿಕರಿಂದ ಹೂಡಿಕೆ ಮಾಡಿಸಿಕೊಂಡ ಹಣವನ್ನು ಕ್ರಿಪ್ಟೋ ಕರೆನ್ಸಿಗೆ ಪರಿವರ್ತಿಸಿ ಆನಂತರ ಚೀನಾಗೆ ವರ್ಗಾವಣೆ ಮಾಡುತ್ತಿದ್ದರು. ಇದಕ್ಕೂ ಮೊದಲು ಪ್ರಕರಣದಲ್ಲಿ ಭಾಗಿಯಾಗಿರುವ 12 ಘಟಕಗಳ ಮೇಲೆ ಇಡಿ ಶೋಧ ಕಾರ್ಯಾಚರಣೆ ನಡೆಸಿತ್ತು. ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿ 5.85 ಕೋಟಿ ರೂ. ಹೆಚ್ಚಿನ ಹಣ ಜಪ್ತಿ ಮಾಡಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net