ಮಗಳ ಅದ್ಧೂರಿ ಮದ್ವೆಗೆ ನಡೆದಿತ್ತು ಭಾರಿ ತಯಾರಿ: ಅಷ್ಟರಲ್ಲೇ ಕ್ರೂರ ವಿಧಿ ಆಟಕ್ಕೆ ಕುಟುಂಬವೇ ಬಲಿ!

Marriage
Published on

ಹೈದರಾಬಾದ್​: ಆಕಸ್ಮಿಕವಾಗಿ ಕಾರು ಕಾಲುವೆಗೆ ಬಿದ್ದು ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ತೆಲಂಗಾಣದ ಜಗಿತ್ತಲಾ ಜಿಲ್ಲೆಯ ಮೇದಪಲ್ಲಿಯ ಎಸ್​ಆರ್​ಎಸ್​ಸಿ ಕಾಕತೀಯ ಕಾಲುವೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಕೊರುಟ್ಲಾ ವಲಯದ ಜೋಗಿನಿಪಲ್ಲಿ ಮೂಲದ ವಕೀಲ ಅಮರೇಂದ್ರ ರಾವ್​, ಪತ್ನಿ ಸಿರಿಷಾ, ಮಗಳು ಶ್ರೇಯಾ ಮತ್ತು ಮಗ ಜಯಂತ್​ ಕಾರಿನಲ್ಲಿದ್ದರು. ಜಯಂತ್​ ಬಚಾವ್​ ಆಗಿದ್ದು, ಉಳಿದ ಮೂವರು ದುರಂತ ಸಾವಿಗೀಡಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯರ ನೆರವಿನಿಂದ ಕ್ರೇನ್​ ಬಳಸಿ ಕಾರನ್ನು ಹಾಗೂ ಮೂವರ ಮೃತದೇಹಗಳನ್ನು ಮೇಲಕ್ಕೆ ಎತ್ತಿದ್ದಾರೆ.

ಲಾಯರ್ ಅಮರೇಂದ್ರ ಕುಟುಂಬ ಜಗಿತ್ತಲ ಬಿಟ್ಟು ಸೊಂಟೂರು ಜೊಗಿನಿಪಲ್ಲಿಗೆ ಹಬ್ಬಕ್ಕೆಂದು ತೆರಳಿದ್ದರು. ಮೇದಪಲ್ಲಿ ತಲುಪುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡ ಕಾರು ಕಾಲುವೆಗೆ ಬಿದ್ದಿದೆ. ಕಾರು ಓಡಿಸುತ್ತಿದ್ದ ಜಯಂತ್ ಬಾಗಿಲು ತೆರೆದು ಹೊರಕ್ಕೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾನೆ. ಆದರೆ, ಉಳಿದ ಮೂವರ ಕಾರಿನಲ್ಲಿ ಸಿಲುಕಿಕೊಂಡಿದ್ದರು. ನೀರಿನ ಸೆಳೆತಕ್ಕೆ ಸಿಲುಕಿದ ಕಾರು ಕೆಲ ದೂರದವರೆಗೆ ಕೊಚ್ಚಿ ಹೋಗಿದೆ. ಇದನ್ನೂ ನೋಡಿದ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸುವ ಮುನ್ನವೇ ಮೂವರ ಪ್ರಾಣ ಪಕ್ಷಿ ಹಾರಿಹೋಗಿತ್ತು.

ಅಮರೇಂದ್ರ ಮಗಳು ಶ್ರೇಯಾ ಕೆಲ ದಿನಗಳ ಹಿಂದಷ್ಟೇ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದರು. ಮದುವೆಗೆ ಇನ್ನು ಕೆಲವೇ ದಿನಗಳು ಬಾಕಿ ಇತ್ತು. ಅದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದರು. ಅಷ್ಟರಲ್ಲೇ ದುರ್ಘಟನೆ ನಡೆದಿದೆ. ಮುಂಜಾನೆ ಆಗಿದ್ದರಿಂದ ನಿದ್ರೆಗೆ ಜಾರಿದ್ದೆ ಕಾರು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ. ಮೃತ ಅಮರೇಂದ್ರ ಕುಟುಂಬ ಸ್ಥಳೀಯ ಶಾಸಕ ಸಂಜಯ್​ ಕುಮಾರ್​ ಸಂಬಂಧಿ ಎಂದು ತಿಳಿದುಬಂದಿದೆ. ಮೃತದೇಹಗಳನ್ನು ಜಗಿತ್ತಲ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net