ರಾಜಧಾನಿಗೊಂದು ಬಿಸಿನೆಸ್ ಕಾರಿಡಾರ್

dks
Published on

ಬೆಂಗಳೂರು: ರಾಜಧಾನಿಯ ಸಂಚಾರ ದಟ್ಟಣೆ ತಗ್ಗಿಸಲು 117 ಕಿ.ಮೀ. ಬಿಸಿನೆಸ್ ಕಾರಿಡಾರ್ ರಸ್ತೆಗೆ (ಹಿಂದಿನ ಪೆರಿಫೆರಲ್ ರಿಂಗ್ ರಸ್ತೆ) ಸಚಿವ ಸಂಪುಟ ಸಭೆ ಅನುಮೋದಿಸಿದೆ. ಭೂ ಸಂತ್ರಸ್ತರು ಪರಿಹಾರ ಪಡೆಯಲು ನಾಲ್ಕು ಆಯ್ಕೆಗಳನ್ನು ಕಲ್ಪಿಸಲಾಗಿದೆ.

ವಿಧಾನಸೌಧದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಬೆಂಗಳೂರು ನಗರಾಭಿವೃದ್ಧಿ ಸಚಿವ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು.

ಹಿಂದಿನ ಸರ್ಕಾರಗಳು ಉದ್ದೇಶಿಸಿದ್ದ ಪೆರಿಫೆರಲ್ ರಿಂಗ್ ರಸ್ತೆಯನ್ನು ಬೆಂಗಳೂರು ಬಿಸಿನೆಸ್ ಕಾರಿಡಾರ್ ಎಂದು ಮರುನಾಮಕರಣ ಮಾಡಿ 117 ಕಿ.ಮೀ. ರಸ್ತೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ ಎಂದರು. ತುಮಕೂರು ರಸ್ತೆಯಿಂದ ಯಲಹಂಕ, ಎಲೆಕ್ಟ್ರಾನಿಕ್ ಸಿಟಿ ಮೂಲಕ ಮೈಸೂರು ರಸ್ತೆ ಮೂಲಕ ಬೆಂಗಳೂರು ಎಕ್ಸಿಬಿಷನ್ ಸೆಂಟರ್‌ವರೆಗೂ ಸಾಗಲಿದೆ. ಬೆಂಗಳೂರಿನ ಉತ್ತರ ಭಾಗದಲ್ಲಿ 73 ಕಿ.ಮೀ ಸಾಗಲಿದ್ದು, ಉಳಿದದ್ದು ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಸಾಗಲಿದೆ ಎಂದು ಡಿಸಿಎಂ ತಿಳಿಸಿದರು.

ಹಿಂದಿನ ಸರ್ಕಾರ ಯೋಜನೆಗೆ ಅಧಿಸೂಚನೆ ಹೊರಡಿಸಿದ್ದು, ಹಿಂಪಡೆದಿರಲಿಲ್ಲ. ಈಗ ನಗರದಲ್ಲಿ ನೈಸ್ ರಸ್ತೆಗೆ ಪರ್ಯಾಯ ರಸ್ತೆ ಅಗತ್ಯವಿದೆ. ಡಿನೋಟಿಫಿಕೇಶನ್ ಮಾಡಬಾರದು ಎಂದು ಯೋಜನೆ ಕೈಗೊತ್ತಿಕೊಂಡಿದೆ. ಈ ಯೋಜನೆಗೆ ಸರ್ಕಾರದ ಖಾತರಿಯೊಂದಿಗೆ ಹುಡ್ಕೋ ಮೂಲಕ 27 ಸಾವಿರ ಕೋಟಿ ರೂ. ಸಾಲ ಪಡೆಯಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು.

ಈ ಯೋಜನೆಗಾಗಿ 100 ಮೀ ಅಗಲ ಜಾಗಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಈಗ ಸರ್ಕಾರ ಬೆಂಗಳೂರು ಮೈಸೂರು ಹೆದ್ದಾರಿ ಗಾತ್ರದಲ್ಲೇ (65 ಮೀ.) ಈ ರಸ್ತೆ ಮಾಡಲು ತೀರ್ಮಾನಿಸಿದೆ. ರಸ್ತೆ ಎರಡೂ ಭಾಗದಲ್ಲಿ ಸರ್ವೀಸ್ ರಸ್ತೆ ಇರಲಿದ್ದು, ಪ್ರಮುಖ ರಸ್ತೆ ಟೋಲ್ ರಸ್ತೆಯಾಗಲಿದೆ. ಈ ರಸ್ತೆಯ ಮಧ್ಯೆ ಮೆಟ್ರೋ ಯೋಜನೆ ರೂಪಿಸಲು ಜಾಗ (5 ಮೀ.) ಕಲ್ಪಿಸಲಾಗುವುದು. ಉಳಿದ 35 ಮೀ. ಜಾಗವನ್ನು ರೈತರಿಗೆ ಪರಿಹಾರ ರೂಪದಲ್ಲಿ ಮರಳಿಸಲು ತೀರ್ಮಾನಿಸಲಾಗಿದೆ. ಈ ಜಾಗ ಹರಾಜು ಹಾಕಬೇಕೆಂದು ಸಲಹೆಗಳು ಬಂದಿತ್ತಾದರೂ ರೈತರಿಗೆ ನೀಡಲು ನಿರ್ಧರಿಸಿದ್ದೇವೆ. ಇದು ವಾಣಿಜ್ಯ ಉದ್ದೇಶಕ್ಕೆ ನೆರವಾಗಲಿರುವ ಹಿನ್ನೆಲೆಯಲ್ಲಿ ರೈತರ ಮನವಿ ಮೇರೆಗೆ ಜಾಗವನ್ನು ಅವರಿಗೆ ನೀಡಲು ತೀರ್ಮಾನ ಮಾಡಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

ಭೂ ಸಂತ್ರಸ್ತರಿಗೆ ಪರಿಹಾರಕ್ಕೆ 4 ಆಯ್ಕೆ

ಸರ್ಕಾರ ಹಾಗೂ ಬಿಡಿಎ ಮೇಲೆ ಆರ್ಥಿಕ ಹೊರೆ ಕಡಿಮೆ ಮಾಡಲು ಈ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ನಾಲ್ಕು ರೀತಿಯಲ್ಲಿ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ. ಮಾರುಕಟ್ಟೆ ದರದಲ್ಲಿ ನಗರ ಭಾಗದಲ್ಲಿ ಎರಡು ಪಟ್ಟು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮೂರುಪಟ್ಟು ನಗದು ಪರಿಹಾರ ಅಥವಾ ಟಿಡಿಆರ್ ಅಥವಾ ಎಫ್‌ಎಆರ್ ಅಥವಾ ಶೇ.35 ವಾಣಿಜ್ಯ ಭೂಮಿ ಪಡೆಯುವ ಅವಕಾಶವನ್ನು ನೀಡಲಾಗಿದೆ. ಒಂದು ವೇಳೆ ವಾಣಿಜ್ಯ ಭೂಮಿ ಬೇಡ ವಸತಿ ಪ್ರದೇಶದಲ್ಲಿ ಜಾಗ ಬೇಕು ಎಂದರೆ ಬಿಡಿಎ ಅಭಿವೃದ್ಧಿ ಪಡಿಸಿರುವ ನೂತನ ಬಡಾವಣೆಗಳಲ್ಲಿ ಶೇ.40 ಜಾಗ ನೀಡಲಾಗುವುದು. ಬಿಡಿಎ ಕಾಯ್ದೆಯಲ್ಲಿ ಹೊಸ ಕಾಯ್ದೆ ಅನುಸಾರ ಹೆಚ್ಚಿನ ಪರಿಹಾರ ನೀಡಲು ಅವಕಾಶವಿಲ್ಲ. ಆದರೂ ರೈತರಿಗೆ ನೆರವಾಗಲು ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.

2 ವರ್ಷಗಳಲ್ಲಿ ಯೋಜನೆ ಪೂರ್ಣ

2 ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳಿಸಲಾಗುವುದು. ಒಂದುವೇಳೆ ಯಾರಾದರೂ ಭೂಮಿ ನೀಡಲು ನಿರಾಕರಿಸಿದರೆ ಪರಿಹಾರ ಹಣವನ್ನು ಕೋರ್ಟ್‌ನಲ್ಲಿ ಠೇವಣಿ ಮಾಡಿ ಯೋಜನೆ ಮುಂದುವರಿಸುತ್ತೇವೆ. 2,560 ಎಕರೆ ಭೂಮಿ ಬೇಕಾಗಿದ್ದು, 1,900 ಕುಟುಂಬಗಳಿಗೆ ಪರಿಣಾಮ ಬೀರುತ್ತದೆ. ಈ ರಸ್ತೆಯಿಂದ ಬೆಂಗಳೂರು ನಗರಕ್ಕೆ ವಾಹನ ಸಂಚಾರದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಯೋಜನ ಆಗಲಿದೆ ಎಂದು ಡಿಸಿಎಂ ತಿಳಿಸಿದರು.

ಸಂಪರ್ಕ ಎಲ್ಲಿಂದ ಎಲ್ಲಿಗೆ?

ತುಮಕೂರು ರಸ್ತೆಯ ಮಾದನಾಯಕನಹಳ್ಳಿ ರಸ್ತೆಯ ಜಂಕ್ಷನ್, ಹೆಸರಘಟ್ಟ ರಸ್ತೆಯ ಜಂಕ್ಷನ್, ದೊಡ್ಡಬಳ್ಳಾಪುರ ರಸ್ತೆ ಜಂಕ್ಷನ್, ಹೆಣ್ಣೂರು ರಸ್ತೆಯ ಜಂಕ್ಷನ್, ಚನ್ನಸಂದ್ರ, ವೈಟ್‌ಫೀಲ್ಡ್ ರಸ್ತೆ, ಸರ್ಜಾಪುರ ರಸ್ತೆ ಜಂಕ್ಷನ್‌ನಲ್ಲಿ ಕ್ಲೋವರ್ ಲ್ೀ ನಿರ್ಮಿಸಲಾಗುತ್ತದೆ. ಚೊಕ್ಕನಹಳ್ಳಿ ರಸ್ತೆಯ ಜಂಕ್ಷನ್‌ನಲ್ಲಿ ಮೇಲ್ಸೇತುವೆಯೊಂದಿಗೆ ಕ್ಲೋವರ್ ಲ್ೀ ನಿರ್ಮಿಸಲು ನಿರ್ಧಾರ.

-ಯೋಜನಾ ವೆಚ್ಚ 27 ಸಾವಿರ ಕೋಟಿ ರೂ.

-ಸಂತ್ರಸ್ತರು ಭೂಮಿ ಆಯ್ಕೆ ಮಾಡಿದರೆ ₹10 ಸಾವಿರ ಕೋಟಿಗಿಂತ ಕಡಿಮೆ ವೆಚ್ಚ

-ಬೆಂಗಳೂರು ನಗರದಲ್ಲಿ ಶೇ.40 ಸಂಚಾರ ದಟ್ಟಣೆ ತಗ್ಗಲಿದೆ

-2007ರ ನೋಟಿಫಿಕೇಶನ್ ಪ್ರಕಾರ ಉತ್ತರ ಭಾಗದಲ್ಲಿ 1,800 ಎಕರೆ

-ದಕ್ಷಿಣ ಭಾಗದಲ್ಲಿ ಕೆಲವು ವಸತಿ ಪ್ರದೇಶ ಒಳಪಟ್ಟಿದೆ

-20 ಗುಂಟೆಗಿಂತ ಒಳಗಿರುವವರಿಗೆ ನಗದು ಪರಿಹಾರ

-20 ಗುಂಟೆಗಿಂತ ಹೆಚ್ಚಿದ್ದರೆ ಬಹು ಆಯ್ಕೆಯಲ್ಲಿ ಒಂದಕ್ಕೆ ಅವಕಾಶ

-ಡಾ.ಕೆ.ಶಿವರಾಮ ಕಾರಂತ ಲೇಔಟ್, ಕಾರಿಡಾರ್ ಅಕ್ಕಪಕ್ಕದ ಲೇಔಟ್‌ನಲ್ಲಿ ವಸತಿ

-ಯೋಜನೆ ತ್ವರಿತ ಅನುಷ್ಠಾನಕ್ಕೆ ನಿವೃತ್ತ ಅಧಿಕಾರಿ ಎಲ್.ಕೆ.ಅತೀಕ್‌ಗೆ ಜವಾಬ್ದಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net