ಮಧ್ಯಂತರ ಬಜೆಟ್ ಸಿಕ್ಕೀತೇ ಬಂಪರ್ ಗಿಫ್ಟ್

Budget
Published on

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಲೋಕಸಭೆ ಚುನಾವಣೆ ಸಮೀಪದಲ್ಲಿರುವಾಗ ಮಂಡನೆ ಆಗುತ್ತಿರುವ ಈ ಆಯವ್ಯಯದಲ್ಲಿ ಏನಿರಬಹುದು ಎಂಬ ಲೆಕ್ಕಾಚಾರ ಈಗಾಗಲೇ ನಡೆಯುತ್ತಿದೆ. ಉದ್ಯಮಿಗಳು, ಉದ್ಯೋಗಿಗಳು ಸೇರಿದಂತೆ ಸಾರ್ವಜನಿಕರು ಈ ಬಜೆಟ್ ಬಗ್ಗೆ ಕುತೂಹಲ ಹೊಂದಿದ್ದಾರೆ. ಗ್ರಾಮೀಣ ಪ್ರದೇಶದ ಆರ್ಥಿಕತೆ ಉತ್ತೇಜಿಸುವ ನಿಟ್ಟಿನಲ್ಲಿ ಹಲವು ಘೋಷಣೆಗಳು ಹೊರಬೀಳುವ ನಿರೀಕ್ಷೆ ಯಿದೆ. ಜತೆಗೆ ಆರ್ಥಿಕ ನೆರವಿನ ಯೋಜನೆಗಳನ್ನು ಪ್ರಕಟಿಸಲಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಉಚಿತ ಕೊಡುಗೆಗಳನ್ನು ಟೀಕಿಸಿದ್ದರೂ ಕಳೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಕೂಡ ಕೆಲವೆಡೆ ಉಚಿತ ಕೊಡುಗೆಗಳನ್ನು ಘೋಷಿಸಿತ್ತು. ಹೀಗಾಗಿ ಈ ಕುರಿತು ಮಧ್ಯಂತರ ಬಜೆಟ್​ನಲ್ಲಿ ಕುತೂಹಲ ಮೂಡಿದ್ದು, ಉಚಿತ ಕೊಡುಗೆಗಳ ಪ್ರಸ್ತಾಪವಿದ್ದರೂ ಅಚ್ಚರಿಯೇನಲ್ಲ. ಉಳಿದಂತೆ ಮೂಲ

ಸೌಕರ್ಯಗಳಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡಲಿದೆ ಎಂದು ಅಂದಾಜಿಸಲಾಗಿದೆ. ಬಂದರು, ವಿಮಾನ ನಿಲ್ದಾಣ, ರೈಲು ನಿಲ್ದಾಣ, ರಾಷ್ಟ್ರೀಯ ಹೆದ್ದಾರಿಗಳ ನಿರ್ವಣಕ್ಕೆ ಬಜೆಟ್​ನಲ್ಲಿ ಒತ್ತು ಕೊಡುವ ಸಾಧ್ಯತೆ ಆರ್ಥಿಕ ತಜ್ಞರು ನಿರೀಕ್ಷಿಸಿದ್ದಾರೆ. ಜತೆಗೆ, ಮನೆ ಖರೀದಿ ಮತ್ತು ನಿರ್ಮಾಣ ಸಂಬಂಧವೂ ತೆರಿಗೆಯಲ್ಲಿ ನಿರಾಳತೆ ಉಂಟಾಗುವ ಲಕ್ಷಣಗಳಿವೆ. ಅಲ್ಲದೆ ಎಲೆಕ್ಟ್ರಿಕ್ ವಾಹನಗಳ ಸಬ್ಸಿಡಿ ಇತ್ಯಾದಿ ವಿಚಾರದಲ್ಲೂ ಕೆಲ ಬದಲಾವಣೆ ನಿರೀಕ್ಷಿತವಾಗಿದೆ.

ತೆರಿಗೆಯಲ್ಲಿ ಅನುಕೂಲ ಸಾಧ್ಯತೆ: ವೇತನದಾರರಿಗೆ, ಮಧ್ಯಮವರ್ಗದವರಿಗೆ ಹಾಗೂ ನಿವೃತ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆದಾಯ ತೆರಿಗೆ ಸ್ಲ್ಯಾಬ್​ನಲ್ಲಿ ಬದಲಾವಣೆ ನಿರೀಕ್ಷೆ ಕಂಡುಬಂದಿದೆ. ಸದ್ಯ 15 ಲಕ್ಷ ರೂಪಾಯಿಗೂ ಮೇಲ್ಪಟ್ಟ ಆದಾಯವನ್ನು ಗರಿಷ್ಠ ತೆರಿಗೆ ಸ್ಲ್ಯಾಬ್​ನಲ್ಲಿ ಇರಿಸಲಾಗಿದೆ. ಈ ಮಿತಿಯನ್ನು 20 ಲಕ್ಷ ರೂಪಾಯಿಗೆ ಹೆಚ್ಚಿಸುವ ಸಾಧ್ಯತೆ ಇದೆ. ಉಳಿತಾಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೆಲ ಉಳಿತಾಯ ಮತ್ತು ಪಾವತಿಯನ್ನು ಆದಾಯ ತೆರಿಗೆ ವಿನಾಯಿತಿಗೆ ತರಬಹುದು. ಮತ್ತೊಂದೆಡೆ, ಸೆಕ್ಷನ್ 80ಸಿ ಮಿತಿಯಲ್ಲೂ ಹೆಚ್ಚಳ ಆಗಬಹುದು ಎನ್ನಲಾಗಿದೆ.

ನಿರೀಕ್ಷೆಗಳೇನು?

  • * ಗ್ರಾಮೀಣ ಆರ್ಥಿಕ ಪ್ರಗತಿಗೆ ಕಲ್ಯಾಣ ಯೋಜನೆಗಳ ನಿರೀಕ್ಷೆ
  • * ನೇರ ಆರ್ಥಿಕ ಸಹಾಯ ವರ್ಗಾವಣೆ ಘೋಷಣೆ ಸಾಧ್ಯತೆ
  • * ಕೃಷಿ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗದ ಕಾರಣ ಪ್ರೋತ್ಸಾಹ ಕ್ರಮಗಳು
  • * ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆಗೆ ಕೇಂದ್ರ ಸರ್ಕಾರದ ಒಲವು
  • * ಈ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ, ತೆರಿಗೆ ವ್ಯವಸ್ಥೆ ಇನ್ನಷ್ಟು ಸರಳೀಕರಣ
  • * ಗೃಹಸಾಲದ ಬಡ್ಡಿದರ ಇಳಿಕೆ
  • * ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೂ ಇ-ವಾಣಿಜ್ಯ ವೇದಿಕೆ ವಿಸ್ತರಣೆ
  • * ಅಂತಾರಾಷ್ಟ್ರೀಯ ವಹಿವಾಟುಗಳಿಗೂ ಯುಪಿಐ ಸೌಲಭ್ಯ ಅಳವಡಿಕೆ
  • * ಉತ್ಪಾದನಾ ಘಟಕಗಳಿಗೆ ತೆರಿಗೆ ಪ್ರಮಾಣ ಕಡಿಮೆಗೊಳಿಸುವುದು
  • * ಡಿಜಿಟಲ್ ಮೂಲಸೌಕರ್ಯ ಕಲ್ಪಿಸಲು ಹೆಚ್ಚಿನ ಬಂಡವಾಳ ಹೂಡಿಕೆ
  • * ಸ್ಟಾರ್ಟಅಪ್​ಗಳಿಗೆ ನಿಗದಿತ ಅನುದಾನ ಸೌಲಭ್ಯ
  • * ಆರೋಗ್ಯ ವಿಮೆಗಳ ಜಿಎಸ್​ಟಿ ಕಡಿತಕ್ಕೆ ಒತ್ತಾಯ
  • * ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ
  • * ಇವಿ ಕ್ಷೇತ್ರದಲ್ಲಿ ಮಾರುಕಟ್ಟೆ ವಿಸ್ತರಣೆ ಅವಕಾಶಗಳ ವೃದ್ದಿ

ರಾಜ್ಯ ಬಯಸೋದೇನು?

ಬೆಂಗಳೂರು: ರಾಜ್ಯದ ಜನರ ಗಮನ ಸೆಳೆಯಬಹುದಾದ ಒಂದಷ್ಟು ಘೋಷಣೆಗಳನ್ನು ಕೇಂದ್ರ ಮಧ್ಯಂತರ ಬಜೆಟ್​ನಲ್ಲಿ ನಿರೀಕ್ಷಿಸಬಹುದಾಗಿದೆ.

1 ಏಮ್್ಸ ಸ್ಥಾಪನೆ ಘೋಷಣೆಯಾಗಬಹುದು. ರಾಯಚೂರಿನಲ್ಲೇ ಸ್ಥಾಪನೆಗೆ ರಾಜ್ಯ ಸರ್ಕಾರ ಕೂಡ ಪತ್ರ ಬರೆದಿದೆ.

2 ಭದ್ರಾ ಮೇಲ್ದಂಡೆ ಯೋಜನೆಗೆ ಕಳೆದ ಬಜೆಟ್​ನಲ್ಲಿ 5,300 ಕೋಟಿ ಘೋಷಿಸಲಾಗಿತ್ತು. ಅದು ಬಿಡುಗಡೆಯಾಗಿಲ್ಲ. ಈ ಬಾರಿ ಮತ್ತಷ್ಟು ಘೋಷಣೆಯಾಗಬಹುದೆಂಬ ಆಶಯವಿದೆ.

3 ನದಿ ಜೋಡಣೆ ಹಾಗೂ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಕಟಣೆ ಹೊರಬೀಳುವ ಸಾಧ್ಯತೆಗಳಿವೆ.

4 ರೈಲ್ವೆ ಯೋಜನೆ, ರೈಲ್ವೆ ಮೂಲಸೌಕರ್ಯಕ್ಕೆ ಅನುದಾನ. ಹೊಸ ರೈಲುಗಳ ಘೋಷಣೆ

5 ಹಾಸನದಲ್ಲಿ ಐಐಟಿ ಸ್ಥಾಪನೆಗೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಒತ್ತಾಯ ಹಿಂದಿನಿಂದಲೂ ಇದೆ ಅದು ಈಡೇರಬಹುದು

6 ಗ್ರೀನ್ ಎನರ್ಜಿ, ಕೈಗಾರಿಕೆ ಕಾರಿಡಾರ್​ನಂತಹ ಪ್ರಮುಖ ಘೋಷಣೆ ಸಾಧ್ಯತೆಗಳಿದ್ದು, ರಾಜ್ಯಕ್ಕೆ ದೊಡ್ಡ ಪಾಲು ನಿರೀಕ್ಷೆ

7 15 ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಗಳ ತೆರಿಗೆ ಪಾಲಿನ ಮೊತ್ತ ಶೇ.42ಕ್ಕೆ ಹೆಚ್ಚಿಸುವ ನಿರೀಕ್ಷೆ

8 ರಾಜ್ಯಕ್ಕೆ ಬರಬೇಕಾಗಿರುವ ವಿವಿಧ ಬಾಕಿಗಳ ಮೊತ್ತ ಬಿಡುಗಡೆಯ ಆಶಯ

ಹೊಸ ಸರ್ಕಾರ ರಚನೆ ಆದ ಮೇಲೆ ಪೂರ್ಣ ಬಜೆಟ್ ಮಂಡಿಸುತ್ತೇವೆ. ಮಧ್ಯಂತರ ಬಜೆಟ್ ನಮಗೆಲ್ಲರಿಗೂ ಮಾರ್ಗಸೂಚಿ. ದೇಶ ಪ್ರಗತಿಯಲ್ಲಿ ಮತ್ತೊಂದು ಮಜಲನ್ನು ತಲುಪಲಿದೆ ಎಂಬ ಭರವಸೆ ನನಗಿದ್ದು, ಪ್ರತಿಯೊಬ್ಬರ ಅಭಿವೃದ್ಧಿಯೂ ಆಗಲಿದೆ.

| ನರೇಂದ್ರ ಮೋದಿ ಪ್ರಧಾನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net