

ಬೆಂಗಳೂರು: ಸಿಎಂ ಯಡಿಯೂರಪ್ಪ ಅವರು ದೆಹಲಿಗೆ ಹೋಗುವಾಗ ಜತೆಯಲ್ಲಿ 6 ಬ್ಯಾಗ್ ಅನ್ನು ತೆಗೆದುಕೊಂಡು ಹೋಗಿದ್ದಾರೆ. ಹೈಕಮಾಂಡ್ಗೆ ಉಡುಗೊರೆ ತೆಗೆದುಕೊಂಡು ಹೋಗಿದ್ದಾರಾ? ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕೆಣಕಿದ್ದಾರೆ.
ಸಿಎಂ ಹಾಗೂ ವಿಜಯೇಂದ್ರ ದೆಹಲಿ ಪ್ರವಾಸ ಕುರಿತ ಪ್ರಶ್ನೆಗೆ ಜೆ.ಪಿ.ಭವನದಲ್ಲಿ ಪ್ರತಿಕ್ರಿಯಿಸಿರುವ ಎಚ್ಡಿಕೆ, ಸಿಎಂ ನಿನ್ನೆ ದೆಹಲಿಗೆ ಹೋಗುವಾಗ 6 ಬ್ಯಾಗ್ ಅನ್ನು ಜತೆಯಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಹೈಕಮಾಂಡ್ಗೆ ಕೊಡಲು ಉಡುಗೊರೆ ತೆಗೆದುಕೊಂಡು ಹೋಗಿದ್ದಾರಾ? ಅಥವಾ ಬೇರೆ ಏನು ತೆಗೆದುಕೊಂಡು ಹೋಗಿದ್ದಾರೆ? ಎಂಬುದನ್ನು ಅವರೇ ಹೇಳಬೇಕು ಎಂದರು.
ರಾಜ್ಯದ ಹಲವೆಡೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅದನ್ನು ನಿಲ್ಲಿಸುವುದು ಸರ್ಕಾರದ ಕೆಲಸ. ರಾಜ್ಯಪಾಲರಿಗೆ ಸಂಸದೆ ಸುಮಲತಾ ದೂರು ನೀಡಲು ಹೋಗಿರುವ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ಅಕ್ರಮ ಗಣಿಗಾರಿಕೆ ನಿಲ್ಲಿಸಲು ನಡೆಯುವ ಹೋರಾಟಕ್ಕೆ ನಾನು ಹಾಗೂ ನಮ್ಮ ಪಕ್ಷ ಸಾಥ್ ಕೊಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.