ಆಮಿಷಕ್ಕೆ ಕಡಿವಾಣ ಅಗತ್ಯ; ಚುನಾವಣೆಯಲ್ಲಿ ಉಚಿತ ಕೊಡುಗೆಗಳ ಪ್ರಲೋಭನೆ

dfg
Published on

ಉಚಿತ ಕೊಡುಗೆಗಳನ್ನು ನೀಡುವುದಾಗಿ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಮತದಾರರಿಗೆ ತರ್ಕರಹಿತ ಭರವಸೆ ನೀಡುವುದನ್ನು ತಡೆಗಟ್ಟಲು ಯಾವುದಾದರೂ ಮಾರ್ಗವಿದೆಯೇ? ಇದೊಂದು ಗಂಭೀರ ವಿಷಯವಾಗಿದ್ದು, ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಇಂಥ ಪ್ರಲೋಭನೆ ಒಡ್ಡುವುದನ್ನು ಹೇಗೆ ತಡೆಗಟ್ಟಬಹುದು?- ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಇಂತಹ ಪ್ರಶ್ನೆಗಳನ್ನು ಕೇಳಿದೆ.

ಚುನಾವಣೆಗಳಲ್ಲಿ ಒಡ್ಡುವ ಉಚಿತ ಕೊಡುಗೆಗಳ ಆಮಿಷಗಳು ಮತದಾರರ ಮೇಲೆ ಹಾಗೂ ಚುನಾವಣೆ ಫಲಿತಾಂಶದ ಮೇಲೆ ಅನುಚಿತ ಪ್ರಭಾವ ಬೀರುತ್ತವೆ. ಇಂತಹ ಆಮಿಷ ಒಡ್ಡುವ ಪಕ್ಷಗಳ ಚಿಹ್ನೆ ಮತ್ತು ನೋಂದಣಿಯನ್ನು ರದ್ದುಪಡಿಸಬೇಕು ಎಂದು ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಎಂಬುವರು ಸಲ್ಲಿಸಿದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಚುನಾವಣೆ ಸಂದರ್ಭದಲ್ಲಿ ಮತದಾರರನ್ನು ಸೆಳೆಯಲು ಕೊಡುಗೆಗಳನ್ನು ನೀಡುವ ಸಂಗತಿ ಹೊಸದೇನಲ್ಲ. ಹಲವಾರು ದಶಕಗಳಿಂದ ಬಹುತೇಕ ಪಕ್ಷಗಳಲ್ಲಿ, ಅದರಲ್ಲೂ ವಿಶೇಷವಾಗಿ ಪ್ರಾದೇಶಿಕ ಪಕ್ಷಗಳಿಂದ ಇಂತಹ ಸಂಪ್ರದಾಯ ಬೆಳೆದುಬಂದಿದೆ.

ಚುನಾವಣೆಯಲ್ಲಿ ಜಯ ಗಳಿಸಿದರೆ ಯಾವ ರೀತಿಯ ಯೋಜನೆಗಳನ್ನು ಜಾರಿಗೊಳಿಸುತ್ತೇವೆ, ಪಕ್ಷದ ನೀತಿ- ನಿಲುವುಗಳೇನು ಎಂಬುದನ್ನು ಘೋಷಿಸುವುದು ಸಹಜ. ಆದರೆ, ಇದು ಮತದಾರರಿಗೆ ಅತಿಯಾದ ಆಮಿಷವೊಡ್ಡುವ, ಪ್ರಲೋಭನೆ ನೀಡಿ ಹಾದಿ ತಪ್ಪಿಸುವ ಹಂತ ತಲುಪಬಾರದೆಂಬುದು ಅಪೇಕ್ಷಣೀಯ. ಆದರೆ, ಇವೆರಡೂ ಸಂಗತಿಗಳ ನಡುವೆ ಸೀಮೆ ಗುರುತಿಸುವುದು ಹೇಗೆ? ಲಕ್ಷ್ಮಣರೇಖೆ ಎಳೆಯುವವರು ಯಾರು? ಎಂಬುದು ಸವಾಲಿನ ಸಂಗತಿಯೇ ಆಗಿದೆ. ಏಕೆಂದರೆ, ಲ್ಯಾಪ್​ಟಾಪ್, ಟಿವಿ, ಮಿಕ್ಸಿ, ಗ್ರೖೆಂಡರ್, ಫ್ಯಾನ್, ಚಿನ್ನದ ತಾಳಿ ಮುಂತಾದವುಗಳನ್ನು ಉಚಿತವಾಗಿ ನೀಡುವ ಆಮಿಷ ಒಡ್ಡಿದ್ದನ್ನೂ ಕಂಡಿದ್ದೇವೆ. ಇತ್ತೀಚಿನ ದಿನಗಳಲ್ಲಿ ಕೆಲ ರಾಜ್ಯಗಳಲ್ಲಿ ನೀರು, ವಿದ್ಯುತ್ ಅನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿ ಚುನಾವಣೆ ಗೆಲ್ಲಲಾಗಿದೆ.

ಉಚಿತ ಕೊಡುಗೆಗಳ ಆಮಿಷದಿಂದ ಮುಕ್ತ ಹಾಗೂ ನ್ಯಾಯಯುತ ಮತದಾನದ ಅಡಿಪಾಯವೇ ಅಲುಗಾಡುತ್ತದೆ ಎಂದು 2013ರಲ್ಲಿ ವಿಚಾರಣೆಯೊಂದರ ಸಂದರ್ಭದಲ್ಲೇ ಸುಪ್ರೀಂ ಕೋರ್ಟ್ ಎಚ್ಚರಿಸಿತ್ತು. ಭರವಸೆಗಳ ನಿಯಂತ್ರಣಕ್ಕೆ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು. ಆಮಿಷಗಳ ತಡೆಗೆ ಪ್ರತ್ಯೇಕ ಶಾಸನ ರೂಪಿಸುವ ಅಗತ್ಯವಿದೆ ಎಂದೂ ಅಭಿಪ್ರಾಯಪಟ್ಟಿತ್ತು. ಆದರೆ, ಈ ನಿಟ್ಟಿನಲ್ಲಿ ಶಾಸನ ಅಥವಾ ಸೂಕ್ತ ಮಾರ್ಗಸೂಚಿ ರೂಪಿತವಾಗಿಲ್ಲ. ಇತ್ತೀಚೆಗೆ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಉಚಿತ ಕೊಡುಗೆಗಳನ್ನು ನೀಡುವುದು ‘ರೇವಡಿ ಸಂಸ್ಕೃತಿ’ (ಹಬ್ಬಗಳ ಸಂದರ್ಭದಲ್ಲಿ ಎಳ್ಳಿನ ಸಿಹಿ ಹಂಚುವ ಸಂಸ್ಕೃತಿ) ಆಗಿದ್ದು, ಇದು ದೇಶದ ಅಭಿವೃದ್ಧಿಗೆ ಮಾರಕವಾಗಿದೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ನಾಯಕ ಅರವಿಂದ ಕೇಜ್ರಿವಾಲ್ ಅವರು, ‘ಮಕ್ಕಳಿಗೆ ಉಚಿತ ಶಿಕ್ಷಣ, ಜನರಿಗೆ ಉಚಿತ ಚಿಕಿತ್ಸೆ ನೀಡುವುದು ರೇವಡಿ ಸಂಸ್ಕೃತಿಯಲ್ಲ’ ಎಂದಿದ್ದರು. ಉಚಿತ ಕೊಡುಗೆಗಳ ಆಮಿಷವನ್ನು ಎಷ್ಟರಮಟ್ಟಿಗೆ ಒಪ್ಪಬೇಕು? ಇದು ಕಾರ್ಯಸಾಧುವೇ? ಆರ್ಥಿಕ ಸ್ಥಿತಿಗತಿ ಮೇಲೆ ಇದರಿಂದಾಗುವ ಪರಿಣಾಮ ಮುಂತಾದ ಸಂಗತಿಗಳ ಕುರಿತು ಮತದಾರರು ಸಹ ವಿವೇಚನೆಯಿಂದ ನಿರ್ಧರಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net