ಅಂತರಂಗ| ಮಾನವೀಯತೆ-ಕಟ್ಟಳೆಗಳ ಸಂಘರ್ಷ

sabbath
Published on

ಯಹೂದ್ಯರಿಗೆ ಸಬ್ಬತ್ ದಿನ ಬಹಳ ಪ್ರಮುಖ ಮತ್ತು ಪವಿತ್ರ ದಿನವಾಗಿತ್ತು. ಆ ದಿನದಂದು ಯಾವುದೇ ಕೆಲಸ ಮಾಡುವುದು ನಿಷಿದ್ಧ. ಆ ದಿನವನ್ನು ಸಂಪೂರ್ಣವಾಗಿ ವಿರಾಮ ಹಾಗೂ ಪ್ರಾರ್ಥನೆಗೆ ಮೀಸಲಾಗಿಡಬೇಕೆನ್ನುವುದು ಯಹೂದ್ಯ ಧರ್ಮದ ಕಟ್ಟಳೆಯಾಗಿತ್ತು. ಆದರೆ ಬೈಬಲ್​ನ ಉದ್ದಕ್ಕೂ ಯೇಸು ಸಬ್ಬತ್​ಗೆ ಸಂಬಂಧಪಟ್ಟ ಈ ಕಟ್ಟಳೆಯನ್ನು ಪಾಲಿಸದೇ ಇರುವುದನ್ನು ಗಮನಿಸಬಹುದು.

ಉದಾಹರಣೆಗೆ ಸಬ್ಬತ್ ದಿನದಂದು ಧಾನ್ಯಗಳನ್ನು ಹೆಕ್ಕಿ ತಿನ್ನುವುದು ಒಂದು ರೀತಿಯ ಕೆಲಸವಾಗುತ್ತದೆಯಾದ್ದರಿಂದ, ಆ ರೀತಿ ಮಾಡಿದ ಯೇಸುವಿನ ಶಿಷ್ಯರನ್ನು ಕಂಡು ಯಹೂದ್ಯ ಫರಿಸಾಯರು ಕ್ಯಾತೆ ತೆಗೆಯುತ್ತಾರೆ. ಆಗ ತಮ್ಮ ಶಿಷ್ಯರನ್ನು ಸಮರ್ಥಿಸುತ್ತಾ ಯೇಸು ಹಸಿದಾಗ ತಿನ್ನುವುದರಲ್ಲಿ ತಪ್ಪಿಲ್ಲ ಎನ್ನುತ್ತಾರೆ. ಹಾಗೆಯೇ ಸಬ್ಬತ್ ದಿನದಂದು ಅವರ ಬಳಿ ಆರೋಗ್ಯ ಭಾಗ್ಯವನ್ನು ಬೇಡುತ್ತಾ ಬಂದ ಜನರನ್ನು ಅವರು ಹಿಂದೆ ಕಳುಹಿಸಲಿಲ್ಲ.

ಯೇಸುವಿಗೆ ಮಾನವೀಯತೆಗಿಂತ ಮಿಗಿಲಾದುದು ಕಟ್ಟಳೆ ಅಲ್ಲ ಎಂಬುದು ಸ್ಪಷ್ಟವಿತ್ತು. ಯೇಸು ಫರಿಸಾಯರಿಗೆ ಕೇಳುವ ಪ್ರಶ್ನೆಯೂ ಅತ್ಯಂತ ಸಮಂಜಸವಾದುದು: ಸಬ್ಬತ್ ದಿನದಂದು ನಿಮ್ಮ ಎತ್ತು ಅಥವಾ ನಿಮ್ಮ ಮಗು ಬಾವಿಗೆ ಬಿದ್ದರೆ, ಅದು ಸಬ್ಬತ್ ದಿನ ಅಂದ ಮಾತ್ರಕ್ಕೆ ನೀವು ಸುಮ್ಮನಿರುವಿರೇ? ಹಾಗೆ ಮಾಡಿದರೆ ನಿಮ್ಮ ಎತ್ತು ಅಥವಾ ನಿಮ್ಮ ಮಗು ಸಾಯುವುದಿಲ್ಲವೇ? ಆದರೂ ಆ ಸಂದರ್ಭದಲ್ಲಿ ಸಬ್ಬತ್ ನೀವು ಪಾಲಿಸಬೇಕಲ್ಲವೇ? ನಿಮಗೊಂದು ನ್ಯಾಯ ಇತರರಿಗೊಂದು ನ್ಯಾಯ ಯಾಕೆ? ಇತರರನ್ನು ಪ್ರತಿ ಸಂದಿಗ್ಧ ಸಂದರ್ಭದಲ್ಲೂ ನೀವು ಸಬ್ಬತ್ ಪಾಲಿಸಲು ಒತ್ತಡವನ್ನು ಹೇರುವಿರಾದರೆ, ನೀವು ಕೂಡ ಅದೇ ಪದ್ಧತಿಯನ್ನು ಪಾಲಿಸುವುದು ಸಾಧು ತಾನೇ? ಇಲ್ಲವಾದಲ್ಲಿ ನೀವು ಆಷಾಢಭೂತಿಗಳಾಗುವುದಿಲ್ಲವೇ? ಇಂಥ ಮಾರ್ವಿುಕ ಪ್ರಶ್ನೆಗಳಿಗೆ ಯಹೂದ್ಯ ಪುರೋಹಿತವರ್ಗದಲ್ಲಿ ಉತ್ತರವಿರಲಿಲ್ಲ.

ಮಾನವೀಯತೆಯನ್ನು ಪಾಲಿಸಿ. ಅದಿಲ್ಲ ಅಂದ ಮೇಲೆ ಯಾವುದೇ ಕಾನೂನು ಕಟ್ಟಳೆಗೆ ಬೆಲೆಯಿಲ್ಲ. ಧರ್ಮ ಮಾನವೀಯತೆಗೆ ವಿರೋಧವಲ್ಲ. ಆ ರೀತಿ ಮಾಡಿದ್ದು ಮನುಷ್ಯನೇ ಹೊರತು ದೇವರಲ್ಲ. ಆದ್ದರಿಂದ ನೈಜ ಧರ್ಮವನ್ನು ಪಾಲಿಸುವುದೆಂದರೆ ಮಾನವೀಯತೆಯ ಹರಿಕಾರರಾಗುವುದು ಎಂಬುದು ಯೇಸುವಿನ ಮಾತಿನ ತಾತ್ಪರ್ಯ.

(ನಾಳಿನ ಅಂತರಂಗದಲ್ಲಿ: ಶಿವಶರಣೆ ಡಾ. ನೀಲಮ್ಮತಾಯಿ ಅಸುಂಡಿ, ಅಧ್ಯಾತ್ಮ ವಿದ್ಯಾಶ್ರಮ, ಆದಿಶಕ್ತಿ ನಗರ, ಗದಗ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net