ಸಮನ್ವಿ ಸಾವು: ದೇವರೇ ಈ ಸಾವು ನ್ಯಾಯವೇ? ನಿಜಕ್ಕೂ ನೀ ಇದ್ದೀಯಾ... ತಾರಾ, ಸೃಜನ್,​ ಅನುಪ್ರಭಾಕರ್​ ನೋವಿನ ನುಡಿ

samanvi
Published on

ಬೆಂಗಳೂರು: 'ನನ್ನಮ್ಮ ಸೂಪರ್​ ಸ್ಟಾರ್​' ರಿಯಾಲಿಟಿ ಶೋ ಖ್ಯಾತಿಯ ಸಮನ್ವಿ ಸಾವಿಗೆ ಲಕ್ಷಾಂತರ ಮಂದಿ ಕಂಬನಿ ಮಿಡಿದಿದ್ದಾರೆ. ಈ ಶೋನ ಜಡ್ಜ್​ ಆಗಿರುವ ತಾರಾ ಅನುರಾಧಾ, ಅನುಪ್ರಭಾಕರ್​, ಸೃಜನ್​ ಲೋಕೇಶ್​ ಕೂಡ ದೇವರನ್ನು ಶಪಿಸುತ್ತಾ, ಪುಟ್ಟ ಕಂದಮ್ಮನ ಸಾವಿಗೆ ಕಣ್ಣೀರು ಹಾಕಿದ್ದಾರೆ.

ಭಾರವಾದ ಮನಸ್ಸಿನಲ್ಲೇ 'ದಿಗ್ವಿಜಯ ನ್ಯೂಸ್'​ ಜತೆ ಮಾತನಾಡಿದ ಹಿರಿಯ ನಟಿ ತಾರಾ ಅನುರಾಧ, 'ನಾವ್ಯಾರೂ ಊಹೆಯೂ ಮಾಡಿರದಂತಹ ದುರಂತ ಸಮನ್ವಿ ಸಾವು. ಇದು ದೊಡ್ಡ ಆಘಾತಕಾರಿ ಸುದ್ದಿ. ಯಾವ ತಾಯಿಗೂ ಈ ಸಂಕಷ್ಟ ಬರಬಾರದರು. ಮಕ್ಕಳು ತಾಯಿಯ ಕಣ್ಣ ಮುಂದೆಯೇ ಪ್ರಾಣ ಬಿಡೋದು ಅತ್ಯಂತ ಕ್ರೂರ...' ಎನ್ನುತ್ತಲೇ ಹಿರಿಯ ನಟಿ ತಾರಾ ಕಣ್ಣೀರಿಟ್ಟರು. 'ಆ ತಾಯಿಗೆ ಈ ನೋವನ್ನು ತಡೆಯುವ ಶಕ್ತಿಯನ್ನು ದೇವರು ಕೊಡಲಿ... ಸಮನ್ವಿ ಬಹಳ ಶೈಲಿಸ್ಟ್​ ಆಗಿದ್ದಳು. ಮಗಳಿಗಾಗಿ ಈ ಶೋನ ಒಪ್ಪಿಕೊಂಡೆ ಎಂದು ಅಮೃತಾ ಬಹಷ್ಟು ಸಲ ಹೇಳಿದ್ದರು. ತಾರಮ್ಮ ಎಂದು ಸಮನ್ವಿ ಕರೆಯುತ್ತಿದ್ದಳು... ಶೋನಲ್ಲಿ ಎಲ್ಲ ಮಕ್ಕಳೂ ಹಚ್ಚಿಕೊಂಡಿದ್ರು..' ಎನ್ನುತ್ತ ಮತ್ತಷ್ಟು ಭಾವುಕರಾದರು.

ಸಮನ್ವಿ ಸಾವಿಗೆ ಕಂಬನಿ ಮಿಡಿದ ನಟ ಸೃಜನ್​ ಲೋಕೇಶ್​, 'ದೇವರು ನಿಜವಾಗಿಯೂ ದೇವರಾ? ಅಥವಾ ದೇವರು ಇದ್ದಾನಾ? ಇಲ್ಲ, ದೇವರನ್ನ ನಂಬಲೇಬೇಕಾ? ಈ ಪ್ರಶ್ನೆಗಳು ಆಗಾಗ ಮೂಡಿ ಬರುತ್ತಿವೆ. ಇವತ್ತು ಈ ಘಟನೆಯ ನಂತರ ನಿಜವಾಗಲೂ ದೇವರು ಇದ್ದಾನೋ ಇಲ್ಲವೋ ಅನ್ನೋ ಪ್ರಶ್ನೆ ಮನಸ್ಸಿಗೆ ತುಂಬಾ ಗಾಢವಾಗಿ ಕಾಡುತ್ತಿದೆ. ಪುಟ್ಟ ಕಂದ ಸಮನ್ವಿ ಮಿಸ್ ಯೂ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಸೃಜನ್​ ಕೂಡ ಸಮನ್ವಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

'ನನ್ನನ್ನು ಪ್ರೀತಿಯಿಂದ Cherry judge ಅಂತ ಕರೆಯುತಿದ್ದ ಕಂದಮ್ಮ ಸಮನ್ವಿ ಇನ್ನಿಲ್ಲ. ಇದೆಂಥಾ ವಿಧಿಯಾಟ? ದೇವರೆ ಈ ಸಾವು ಅನ್ಯಾಯವೇ?' ಎಂದಿರುವ ನಟಿ ಅನುಪ್ರಭಾಕರ್​, 'ಈ ನೋವು ಭರಿಸುವ ಶಕ್ತಿಯನ್ನು ತಾಯಿ ಅಮೃತಾ ಮತ್ತು ಕುಟುಂಬಕ್ಕೆ ಆ ಭಗವಂತ ನೀಡಬೇಕು' ಎಂದು ಟ್ವೀಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net