

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿ ಹೆಚ್ಚಿಸುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು(ಶುಕ್ರವಾರ) ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ವಿಧಾನ ಮಂಡಲದ ಉಭಯ ಸದನಗಳ ನಾಯಕರ ಸಭೆ ನಡೆಯಿತು.
SC-ST ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ಬಗ್ಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ನೀಡಿರುವ ವರದಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.
ಎಸ್ಸಿ ಸಮುದಾಯಕ್ಕೆ ಶೇ.17, ಎಸ್ಟಿ ಸಮುದಾಯಕ್ಕೆ ಶೇ.7 ಮೀಸಲಾತಿ ಹೆಚ್ಚಳ ಮಾಡುವ ಬಗ್ಗೆ ಡಿಸೆಂಬರ್ನಲ್ಲಿ ನಡೆಯುವ ಅಧಿವೇಶನದಲ್ಲಿ ಚರ್ಚಿಸಿ ಮಾಡಿ ಜಾರಿ ಮಾಡುವುದಾಗಿ ಸಿಎಂ ಹೇಳಿದರು. ಸಚಿವರಾದ ಆರ್.ಅಶೋಕ್, ಜೆ.ಸಿ.ಮಾಧುಸ್ವಾಮಿ, ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಆನಂದ್ ಸಿಂಗ್, ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಶಾಸಕರಾದ ಯು.ಟಿ.ಖಾದರ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಭೋಜೇಗೌಡ, ಅಜಯ್ ಧರ್ಮಸಿಂಗ್, ಮಾಜಿ ಶಾಸಕ ವಿ.ಎಸ್.ಉಗ್ರಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ಮೊದಲು ನಾಗಮೋಹನ್ ದಾಸ್ ವರದಿಯನ್ನು ಸಂಪುಟದಲ್ಲಿ ತಂದು ಮುಂದಿನ ಅಧಿವೇಶದಲ್ಲಿ ಚರ್ಚೆಗೆ ಇಡಲಾಗುತ್ತದೆ. ಶೆಡ್ಯುಲ್ ಒಂಬತ್ತರಡಿ ಮೀಸಲು ಹೆಚ್ಚಳ ಮಾಡಲಾಗುವುದು. ಇದೇ ರೀತಿ ತಮಿಳುನಾಡಿನಲ್ಲೂ ಶೇ.60ಕ್ಕೆ ಹೆಚ್ಚಿಸಲಾಗಿದೆ. ಅದೇ ರೀತಿ ಇಲ್ಲೂ ಮಾಡುವ ಬಗ್ಗೆ ನಿರ್ಣಯಿಸಲಾಗಿದೆ.
ಹಿನ್ನೆಲೆ: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕೆಂಬ ಒತ್ತಾಯ ಬಹಳ ವರ್ಷಗಳಿಂದ ಇದೆ. ಕೇಂದ್ರದಲ್ಲಿ ಈ ವರ್ಗಗಳ ಜನರಿಗೆ ಕೇಂದ್ರ ಸರ್ಕಾರಿ ನೌಕರಿಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಎಸ್ಸಿಗೆ ಶೇ.15 ಹಾಗೂ ಎಸ್ಟಿಗೆ ಶೇ.7.5 ಮೀಸಲಾತಿ ಇದೆ. ಎರಡೂ ಸೇರಿ ಶೇ. 22.5 ಮೀಸಲಾತಿ ಇದೆ. ಕರ್ನಾಟಕದಲ್ಲಿ ಎಸ್ಸಿಗೆ ಶೇ.15 ಹಾಗೂ ಎಸ್ಟಿಗೆ ಶೇ.3 ಮೀಸಲಾತಿ ಇದ್ದು, ಒಟ್ಟು ಶೇ.18 ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೀಸಲಾತಿ ನಡುವೆ ಶೇ.4.5 ವ್ಯತ್ಯಾಸವಿದೆ. ಇದು ಜನಸಂಖ್ಯೆಗೆ ಅನುಗುಣವಾಗಿಲ್ಲ ಎಂದು ಈ ವರ್ಗಕ್ಕೆ ಸೇರಿದ ಜನ ಮೀಸಲಾತಿ ಹೆಚ್ಚಿಸುವಂತೆ ಹೋರಾಟ ಮಾಡುತ್ತಿದ್ದಾರೆ.
2011ರ ಜನಗಣತಿ ಪ್ರಕಾರ ಎಸ್ಸಿ ಸಮುದಾಯ ಶೇ.17.15, ಎಸ್ಟಿಗೆ ಸೇರಿದವರು ಶೇ.6.95 ಇದ್ದಾರೆ. ಎರಡೂ ವರ್ಗ ಸೇರಿ ಶೇ.24.10 ಜನರಿದ್ದಾರೆ. ಆದರೆ ಮೀಸಲಾತಿ ಕೇವಲ ಶೇ.18 ಇದೆ. ಹೀಗಾಗಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ ಬಂದಿತ್ತು. ಈ ಕಾರಣಕ್ಕೆ ಸಮ್ಮಿಶ್ರ ಸರ್ಕಾರ ಇದ್ದಾಗ 2019ರಲ್ಲಿ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿಯು 2020ರ ಜುಲೈನಲ್ಲಿ ವರದಿ ನೀಡಿದೆ. ಎಸ್ಟಿ ಜನಾಂಗದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಶೇ.3ರಿಂದ ಶೇ.7ರಷ್ಟು ಹೆಚ್ಚಿಸಬೇಕು. ಎಸ್ಸಿ ಜನಾಂಗದವರಿಗೆ ಶೇ.15- ಶೇ.17ರಷ್ಟು ಹೆಚ್ಚಾಗಬೇಕು. ಒಟ್ಟಾರೆ ಮೀಸಲಾತಿಯು ಶೇ.6ರಷ್ಟು ಹೆಚ್ಚಾಗಬೇಕು ಎಂದು ನಾಗಮೋಹನ್ ದಾಸ್ ಸಮಿತಿಯು ತಿಳಿಸಿದೆ. ಆದರೆ ಎರಡು ವರ್ಷ ಕಳೆದರೂ ಅಂಗೀಕಾರ ಆಗಿ ಜಾರಿಯಾಗಿಲ್ಲ. ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಇದೆ, ನಾಗಮೋಹನ್ ದಾಸ್ ಅವರ ಸಮಿತಿ ವರದಿ ಇದೆ, ಇದಲ್ಲದೆ ಸುಭಾಷ್ ಆಡಿ ಅವರ ನೇತೃತ್ವದಲ್ಲಿ ಇನ್ನೊಂದು ಸಮಿತಿ ರಚನೆ ಮಾಡಲಾಗಿದೆ.