

ಬಾಲಸೋರ್: ಪಾಕಿಸ್ತಾನಿ ಭಯೋತ್ಪಾದಕರ ವಿರುದ್ಧ ಹೋರಾಡಲು ತಾನು ಸೇನೆಗೆ ಸೇರುವುದಾಗಿ ಒಡಿಶಾದ ಬಾಲಸೋರ್ನ 9 ವರ್ಷದ ಬಾಲಕ ತನುಜ್ ಕುಮಾರ್ ಸತ್ಪಥಿ ಗುರುವಾರ ಹೇಳಿದ್ದಾನೆ. ಪಹಲ್ಗಾಮ್ ನರಮೇಧದಲ್ಲಿ ಮೖತಪಟ್ಟ 26 ಮಂದಿಯಲ್ಲಿ ಒಬ್ಬರಾದ ಪ್ರಶಾಂತ್ ಸತ್ಪಥಿಯವರ ಮಗನೇ ಈ ತನುಜ್ ಕುಮಾರ್. ಪ್ರಧಾನಿ ಮೋದಿಯವರ ಭೇಟಿಗೆ ಅವಕಾಶ ಸಿಕ್ಕರೆ, ತನ್ನಂಥ ಮಕ್ಕಳು ತಂದೆ ಕಳೆದುಕೊಳ್ಳದಿರುವಂತೆ ಖಾತರಿಪಡಿಸಲು ಮನವಿ ಮಾಡುವುದಾಗಿ ಅಮ್ಮ ಪ್ರಿಯದರ್ಶಿನಿ ಆಚಾರ್ಯರ ಪಕ್ಕವೇ ಇದ್ದ ಬಾಲಕ ಹೇಳಿದನು. ‘ನನ್ನ ತಂದೆಯ ಸಾವಿಗೆ ಸೇಡು ತೀರಿಸಿಕೊಳ್ಳಲು ಸೇನೆ ಸೇರಲು ನಾನು ನಿರ್ಧರಿಸಿದ್ದೇನೆ’ ಎಂದು ತನುಜ್ ಹೇಳಿದ.
ಆಪರೇಷನ್ ಸಿಂಧೂರ ಹಿನ್ನೆಲೆಯಲ್ಲಿ ಗುರುವಾರ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಹಾಗೂ ಅಲ್ಲಿಂದ ತೆರಳುವ ನಾನಾ ಏರ್ಲೈನ್ಸ್ಗಳ ಸುಮಾರು 90 ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಭಾರತೀಯ ಸೇನಾ ಪಡೆಗಳ ಕಾರ್ಯಾಚರಣೆ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ದೇಶದ ನಾನಾ ಭಾಗಗಳ ಸುಮಾರು 27 ಏರ್ಪೋರ್ಟ್ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಹಾಗಾಗಿ ಅನೇಕ ವಿಮಾನಗಳನ್ನು ರದ್ದುಪಡಿಸಲಾಗಿದೆ. ದೆಹಲಿ ಏರ್ಪೋರ್ಟ್ನಿಂದ ನಿರ್ಗಮಿಸುವ 46 ದೇಶೀಯ ಹಾಗೂ ಆಗಮಿಸುವ 33 ವಿಮಾನಗಳ ಸಂಚಾರ ರದ್ದಾಗಿದೆ. ಅಂತಾರಾಷ್ಟ್ರೀಯ ವಿಮಾನಗಳ 5 ಡಿಪಾರ್ಚರ್ ಹಾಗೂ 6 ಅರೈವಲ್ಗಳು ಕೂಡ ರದ್ದುಗೊಂಡಿವೆ. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆ ನಡುವೆ ಈ ವ್ಯತ್ಯಯ ಉಂಟಾಗಿದೆ.