

ಬೆಂಗಳೂರು: ಮನೆಯಲ್ಲಿ ಆಟವಾಡುತ್ತಿದ್ದ 4 ವರ್ಷದ ಮಗು ಸಂಪ್‌ಗೆ ಬಿದ್ದು ಮೃತಪಟ್ಟಿದೆ.
ಕೆ.ಆರ್.ಪುರ ಸಮೀಪದ ದೇವಸಂದ್ರದ ಮನೆಯೊಂದರಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದೆ. ನೇಪಾಳ ಮೂಲದ ದಂಪತಿಯ ಪುತ್ರ ಸುಬೀನ್ ಖಾಡ್ಕಾ (೪) ಮೃತ ಮಗು. ಕಳೆದ ನಾಲ್ಕು ವರ್ಷಗಳ ಹಿಂದೆ ಯೋಗಿಮಾನ್ ಭಹದ್ದೂರ್ ಖಾಡ್ಕಾ ದಂಪತಿ ನಗರಕ್ಕೆ ಬಂದಿದ್ದು, ದೇವಸಂದ್ರದಲ್ಲಿ ವಾಸವಾಗಿದ್ದರು. ಮಗುವಿನ ತಂದೆ ಕೂಲಿ ಕೆಲಸ ಮಾಡುತ್ತಿದ್ದು, ತಾಯಿ ಮನೆಯಲ್ಲೆ ಇರುತ್ತಿದ್ದರು. ಸೋಮವಾರ ಸಂಜೆ ೫.೪೫ ಕ್ಕೆ ತಾಯಿ ಮಗುವನ್ನು ಮನೆಯಲ್ಲೆ ಬಿಟ್ಟು ಅಂಗಡಿಗೆ ದಿನಸಿ ತರಲು ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಹೊರಗೆ ಬಂದಿರುವ ಮಗು ಮನೆಯ ಹಿಂಭಾಗದಲ್ಲಿ ತೆರೆದಿದ್ದ ಸಂಪ್‌ಗೆ ಬಿದ್ದು ಮೃತಪಟ್ಟಿದೆ.
ಮಗು ಬಿಟ್ಟು ದಿನಸಿ ತರಲು ಹೋಗಿದ್ದ ತಾಯಿ:
ತಾಯಿ ಅಂಗಡಿಯಿಂದ ೧೦ ನಿಮಿಷದ ಬಳಿಕ ಮನೆಗೆ ಬಂದಾಗ ಮಗು ಕಾಣದಿದ್ದಾಗ ಆತಂಕಗೊಂಡು ಮನೆಯೆಲ್ಲಾ ಹುಡುಕಾಟ ನಡೆಸಿ ಬಳಿಕ ನೆರೆ ಮನೆಯವರ ಜತೆ ಹುಡುಕಾಡಿದ್ದಾಗ ತಮ್ಮ ಮನೆಯ ಹಿಂಭಾಗದಲ್ಲಿರುವ ಪದ್ಮ ಎಂಬುವವರ ಮನೆಯಲ್ಲಿರುವ ಹಳೇಯ ಸಂಪ್‌ನಲ್ಲಿ ಮಗು ತೇಲುತ್ತಿತ್ತು. ಕೂಡಲೇ ಮಗುವನ್ನು ಕೆ.ಆರ್.ಪುರ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಮಗು ಮೃತಪಟ್ಟಿರುವುದು ತಿಳಿಯುತ್ತಿದಂತೆ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಪ್ ಮುಚ್ಚದೇ ಇರುವುದೇ ಘಟನೆಗೆ ಕಾರಣ ಎನ್ನಲಾಗಿದೆ. ಈ ಸಂಬಂಧ ಕೆ.ಆರ್.ಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.