'ತ್ರಿಮೂರ್ತಿ'ಗಳ ಭೇಟಿಗೆ ಸಜ್ಜಾದ 38 ಹೆಕ್ಟೇರ್ ಹಸಿರು ಸಾಮ್ರಾಜ್ಯ: 'ಕಿಲಿನ್ ವಿಲ್ಲಾ' ಒಳಗೆ ಏನೆಲ್ಲಾ ಇದೆ ಗೊತ್ತಾ? | Kylin Villa

Kylin Villa
ಚೀನಾದ ಶೆನ್‌ಜೆನ್‌ನಲ್ಲಿರುವ 38 ಹೆಕ್ಟೇರ್ ವಿಸ್ತೀರ್ಣದ ಕಿಲಿನ್ ವಿಲ್ಲಾ
Published on: 

Kylin Villa: ವಿಶ್ವದ 'ತ್ರಿಮೂರ್ತಿ' ನಾಯಕರಾದ ಡೊನಾಲ್ಡ್ ಟ್ರಂಪ್, ಕ್ಸಿ ಜಿನ್‌ಪಿಂಗ್ ಮತ್ತು ವ್ಲಾಡಿಮಿರ್ ಪುಟಿನ್ ಅವರ ಐತಿಹಾಸಿಕ ಭೇಟಿಗೆ ಚೀನಾದ ಪ್ರಶಾಂತ ತಾಣವೊಂದು ಸಜ್ಜಾಗಿದೆ. ಗುವಾಂಗ್‌ಡಾಂಗ್ ಪ್ರಾಂತ್ಯದ ಶೆನ್‌ಜೆನ್‌ನಲ್ಲಿರುವ 38 ಹೆಕ್ಟೇರ್ ವಿಶಾಲವಾದ 'ಕಿಲಿನ್ ವಿಲ್ಲಾ'ದಲ್ಲಿ ಇಂದು ಈ ಅಪರೂಪದ ತ್ರಿಪಕ್ಷೀಯ ಸಭೆ ನಡೆಯಲಿದೆ.

ವಾಯುವ್ಯ ಶೆನ್‌ಜೆನ್‌ನಲ್ಲಿರುವ ಈ ಸರ್ಕಾರಿ ಸ್ವಾಮ್ಯದ ಆಸ್ತಿಯು ಚೀನಾದ ಉನ್ನತ ನಾಯಕರು ಮತ್ತು ವಿದೇಶಿ ಗಣ್ಯರಿಗೆ ಆತಿಥ್ಯ ನೀಡುವುದಕ್ಕೆ ಹೆಸರುವಾಸಿಯಾಗಿದೆ. ಸುಮಾರು ಎರಡು ದಶಕಗಳ ಹಿಂದೆ ಉತ್ತರ ಕೊರಿಯಾದ ಮಾಜಿ ನಾಯಕ ಕಿಮ್ ಜಾಂಗ್-ಇಲ್ ಚೀನಾಕ್ಕೆ ರಹಸ್ಯ ಭೇಟಿ ನೀಡಿದ್ದಾಗ ಇದೇ ವಿಲ್ಲಾದಲ್ಲಿ ತಂಗಿದ್ದರು ಎನ್ನಲಾಗಿದ್ದು, ಈಗ ಮತ್ತೊಮ್ಮೆ ಈ ತಾಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.

ಕಿಲಿನ್ ವಿಲ್ಲಾದ ವಿಶೇಷತೆ ಮತ್ತು ಇತಿಹಾಸ

ಸಮೃದ್ಧಿ ಮತ್ತು ಅದೃಷ್ಟದ ಸಂಕೇತವಾದ ಚೀನಾದ ಪೌರಾಣಿಕ ಜೀವಿ 'ಕಿಲಿನ್' (Qilin) ಹೆಸರನ್ನು ಈ ವಿಲ್ಲಾಗೆ ಇಡಲಾಗಿದೆ. ಕ್ಸಿಲಿ ಸರೋವರದ ಪಕ್ಕದಲ್ಲಿ, ಕಿಲಿನ್ ಪರ್ವತದ ತಪ್ಪಲಿನಲ್ಲಿರುವ ಈ ವಿಶಾಲ ಆವರಣವು ಶೆನ್‌ಜೆನ್ ಬಾವೋನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 30 ನಿಮಿಷಗಳ ದೂರದಲ್ಲಿದೆ. 1997ರಲ್ಲಿ ಆರಂಭವಾದ ಈ ವಿಲ್ಲಾದಲ್ಲಿ ಹಲವಾರು ಅತಿಥಿಗೃಹಗಳು, ಯುರೋಪಿಯನ್ ಶೈಲಿಯ ಬಂಗಲೆಗಳು ಮತ್ತು ದೊಡ್ಡ ಬ್ಯಾಂಕ್ವೆಟ್ ಹಾಲ್‌ಗಳಿವೆ.

ಈ ತಾಣವನ್ನೇ ಆಯ್ಕೆ ಮಾಡಿದ್ದೇಕೆ?

ದಟ್ಟ ಅರಣ್ಯದಿಂದ ಸುತ್ತುವರಿದಿರುವ ಏಕಾಂತ ಪ್ರದೇಶವಾಗಿರುವುದರಿಂದ ಕಿಲಿನ್ ವಿಲ್ಲಾದಲ್ಲಿ ಬಿಗಿ ಭದ್ರತೆ ಒದಗಿಸುವುದು ಸುಲಭ. ವಿಮಾನ ನಿಲ್ದಾಣದ ಸಮೀಪವಿರುವುದರಿಂದ ಟ್ರಂಪ್ ಕೂಡ ಸಭೆ ಮುಗಿದ ತಕ್ಷಣ ವಾಪಸ್ ತೆರಳಲು ಅನುಕೂಲವಾಗಲಿದೆ. ಖಾಸಗಿ ಸ್ಥಳದ ಆಯ್ಕೆಯು ಇದು ಅಧಿಕೃತ ಶೃಂಗಸಭೆಗಿಂತ ಅನೌಪಚಾರಿಕ ಮಾತುಕತೆಯಾಗಿರುವ ಸಾಧ್ಯತೆಯನ್ನು ಸೂಚಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ದಿಕ್ಕು ಬದಲಿಸಿದ 'ಅಕ್ವಾನ್' ಚಂಡಮಾರುತ: ಉತ್ತರ ಆಂಧ್ರದಲ್ಲಿ ಭಾರಿ ಮಳೆ ಮುನ್ಸೂಚನೆ | Akvan Cyclone

ಸಭೆಯ ಹಿನ್ನೆಲೆಯಲ್ಲಿ ವಿಲ್ಲಾಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಮೊದಲಿಗೆ ಟ್ರಂಪ್ ಮತ್ತು ಕ್ಸಿ ಜಿನ್‌ಪಿಂಗ್ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಲಿದ್ದು, ಬಳಿಕ ಪುಟಿನ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸುಮಾರು ಒಂದು ಗಂಟೆ ನಡೆಯಲಿರುವ ಈ ಮಾತುಕತೆಯಲ್ಲಿ ಮಹತ್ವದ ರಾಜತಾಂತ್ರಿಕ ಒಪ್ಪಂದಗಳ ನಿರೀಕ್ಷೆ ಇದೆಯಾದರೂ, ಅಂತಿಮ ಫಲಿತಾಂಶದ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ. ಈ ನಡುವೆ ಕಿಲಿನ್ ವಿಲ್ಲಾ ಜಾಗತಿಕ ರಾಜಕೀಯದ ಗಮನ ಸೆಳೆದಿದೆ.