ಶಾಲೆಯಲ್ಲಿ ಬಿಸಿಯೂಟ ತಯಾರಿಸಿಟ್ಟಿದ್ದ ಪಾತ್ರೆಯೊಳಗೆ ಬಿದ್ದು ದಾರುಣವಾಗಿ ಮೃತಪಟ್ಟ ಮೂರು ವರ್ಷದ ಮಗು...

Dead Child 4 Feb 20
Published on

ಮಿರ್ಜಾಪುರ: ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಿಟ್ಟಿದ್ದ ದೊಡ್ಡದಾದ ಪಾತ್ರೆಯಲ್ಲಿ ಬಿದ್ದು ಮೂರುವರ್ಷದ ಮಗು ಮೃತಪಟ್ಟ ದುರ್ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ.

ಮಿರ್ಜಾಪುರದ ರಾಂಪುರ ಅಟಾರಿ ಗ್ರಾಮದಲ್ಲಿನ ಶಾಲೆಯಲ್ಲಿ ಘಟನೆ ನಡೆದಿದೆ. ಶಾಲೆಗೇ ಹೊಂದಿಕೊಂಡಿರುವ ಅಂಗನವಾಡಿಯ ಮಗು ಇದಾಗಿದ್ದು, ದುರದೃಷ್ಟವಶಾತ್​ ಬಿಸಿ ಆಹಾರ ಇದ್ದ ಪಾತ್ರೆಯಲ್ಲಿ ಬಿದ್ದು ಸಾವನ್ನಪ್ಪಿದೆ.

ಬಿಸಿಯೂಟ ತಯಾರಕರು ಆಗಷ್ಟೇ ಅಡುಗೆ ತಯಾರಿಸಿ ಇಟ್ಟಿದ್ದರು. ಈ ಹೆಣ್ಣುಮಗು ಅಂಗನವಾಡಿಯಿಂದ ನಡೆದುಕೊಂಡು ಹೋಗಿದೆ. ಅಲ್ಲಿಯೇ ಇದ್ದ ಪಾತ್ರೆಗಳು, ಅಡುಗೆ ತಯಾರಕಾ ಸಾಮಗ್ರಿಗಳನ್ನು ಎಡವಿ ಬಿದ್ದಿದೆ ಎಂದು ಹೇಳಲಾಗಿದೆ.

ಅಡುಗೆಯವರು ಕಿವಿಗೆ ಇಯರ್​ ಫೋನ್​ ಹಾಕಿಕೊಂಡು ಕುಳಿತಿದ್ದರಿಂದ ಮಗು ಪಾತ್ರೆಯೊಳಗೆ ಬಿದ್ದಿದ್ದನ್ನು ಅವರು ನೋಡಲಿಲ್ಲ ಎಂದು ಮಗುವಿನ ತಂದೆ ಹೇಳಿದ್ದಾರೆ. ಅಷ್ಟೇ ಅಲ್ಲದೆ ಮಗು ಬಿಸಿ ಆಹಾರದ ಪಾತ್ರೆಯಲ್ಲಿ ಬಿದ್ದಿದ್ದು ಗೊತ್ತಾಗುತ್ತಲೇ ಅಡುಗೆಯವರು ಅಲ್ಲಿಂದ ಓಡಿಹೋಗಿದ್ದಾರೆ ಎಂದೂ ವರದಿಯಾಗಿದೆ.

ಶಾಲೆಯ ಅಡುಗೆಯವರು, ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸ್ಥಳೀಯ ಆಡಳಿತ ಭರವಸೆ ನೀಡಿದೆ. ಅಲ್ಲದೆ ಶಾಲೆಯ ಮುಖ್ಯ ಶಿಕ್ಷಕನನ್ನು ಅಮಾನತು ಮಾಡಿದ್ದಾಗಿ ಜಿಲ್ಲಾಧಿಕಾರಿ ಸುಶೀಲ್​ ಕುಮಾರ್ ತಿಳಿಸಿದ್ದಾರೆ.

ಅಲ್ಲದೆ ಮಗುವಿನ ಸಾವಿನ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳುವುದಾಗಿ ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net