

ಬೆಂಗಳೂರು: ರಾಜ್ಯದಲ್ಲಿ 9823.31 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ(9823.21 crore Rs. Approval for capital investment )ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiha)ನೇತೃತ್ವದ ರಾಜ್ಯ ಉನ್ನತ ಮಟ್ಟದ 64ನೇ ಸಭೆ ಒಪ್ಪಿಗೆ ನೀಡಿದೆ.
ಈ ಹೂಡಿಕೆಯಿಂದ ಸುಮಾರು 5605 ಜನರಿಗೆ ಉದ್ಯೋಗ ಲಭ್ಯತೆ ನಿರೀಕ್ಷಿಸಲಾಗಿದೆ. ಮೂರು ಹೊಸ/ ವಿಸ್ತರಣಾ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು ಹಾಗೂ ಆರು ಹೆಚ್ಚುವರಿ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು ಸೇರಿದಂತೆ ಒಟ್ಟು 9 ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ.
ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಎನ್.ಸೊಲ್ಯೂಷನ್ಸ್ ನ 998 ಕೋಟಿ ರೂ. (ಐಟಿಐಆರ್, ದೇವನಹಳ್ಳಿ), ಸೈಲೆಕ್ಟ್ರಿಕ್ ಸೆಮಿಕಂಡಕ್ಟರ್ಸ್ ಮ್ಯಾನುಫ್ಯಾಕ್ಚರಿಂಗ್‌ನ 3,425. 60 ಕೋಟಿ ರೂ. (ಕೋಚನಹಳ್ಳಿ ಕೈಗಾರಿಕಾ ಪ್ರದೇಶ, ಮೈಸೂರು) ಮತ್ತು ಸನ್ಸೆರಾ ಇಂಜಿನಿಯರಿಂಗ್ ಸಂಸ್ಥೆಯ 2150 ಕೋಟಿ ರೂ. (ಹಾರೋಹಳ್ಳಿ) ಹೂಡಿಕೆ ಯೋಜನೆಗಳು ಹೊಸದಾಗಿವೆ. ಇವುಗಳಿಂದ ಕ್ರಮವಾಗಿ 467, 460 ಮತ್ತು 3,500 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದ್ದಾರೆ.
ಆರು ಯೋಜನೆಗಳು ಹೆಚ್ಚುವರಿ ಬಂಡವಾಳ ಹೂಡಿಕೆಯ ಪ್ರಸ್ತಾವನೆಗಳಾಗಿವೆ. ಇವುಗಳಲ್ಲಿ ಮುಸಾಶಿ ಆಟೋ ಪಾರ್ಟ್ಸ್ (ದೊಡ್ಡಬಳ್ಳಾಪುರ)122.66 ಕೋಟಿ ರೂ., ಜೆಎಸ್‌ಡಬ್ಲ್ಯು ಸಿಮೆಂಟ್ (ತೋರಣಗಲ್, ಬಳ್ಳಾರಿ) 486.82 ಕೋಟಿ ರೂ., ನೈಡೆಕ್ ಇಂಡಸ್ಟ್ರಿಯಲ್ ಆಟೋಮೇಷನ್ (ಬೇಲೂರು, ಧಾರವಾಡ) 200 ಕೋಟಿ ರೂ., ಎಪ್ಸಿಲಾನ್ ಕಾರ್ಬನ್ (ಸಂಡೂರು) 740 ಕೋಟಿ ರೂ., ಕೆ.ಬಿ.ಸ್ಟೀಲ್ಸ್ (ಹೊಸಪೇಟೆ, ವಿಜಯನಗರ) 852.49 ಕೋಟಿ ರೂ. ಮತ್ತು ಸಿಫಿ ಡೇಟಾ ಮ್ಯಾನೇಜ್ಡ್ ಸರ್ವೀಸಸ್ (ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್) 847.74 ಕೋಟಿ ರೂ.ಗಳನ್ನು ರಾಜ್ಯದಲ್ಲಿ ಹೆಚ್ಚುವರಿಯಾಗಿ ಹೂಡಿಕೆ ಮಾಡಲಿವೆ. ಇವುಗಳಿಂದ ಕ್ರಮವಾಗಿ ಮೊದಲ ನಾಲ್ಕು ಕಂಪನಿಗಳಲ್ಲಿ ಮಾತ್ರ 478, 225, 150 ಮತ್ತು 325 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ವಿವರಿಸಿದ್ದಾರೆ.
ಸೆಮಿಕಂಡಕ್ಟರ್ ವಲಯದ ಪ್ರಥಮ ಯೋಜನೆಯು ಮೈಸೂರಿನ ಬಳಿಕ ಕೋಚನಹಳ್ಳಿಯ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್‌ನಲ್ಲಿ ಅಸ್ತಿತ್ವಕ್ಕೆ ಬರಲಿದೆ. ಕೆಐಎಡಿಬಿಯಿಂದ ಜಮೀನು ಪಡೆದುಕೊಳ್ಳುವ ಉದ್ಯಮಿಗಳು/ಕಂಪನಿಗಳು ನಿಗದಿತ ಸಮಯದಲ್ಲಿ ಕೈಗಾರಿಕೆಯನ್ನು ಆರಂಭಿಸಬೇಕು. ಇಲ್ಲದಿದ್ದರೆ ದಂಡ ವಿಧಿಸುವುದು ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮೆ.ಡಿ.ಎನ್.ಸಲ್ಯೂಷನ್ಸ್ ಇಂಡಿಯಾ ಪ್ರೈ.ಲಿ ಸಂಸ್ಥೆಯ 998 ಕೋಟಿ ರೂ.ಗಳ ಹೊಸ ಬಂಡವಾಳ ಹೂಡಿಕೆಯ ಯೋಜನೆಯಿಂದ 467 ಉದ್ಯೋಗ , ಮೆ. ಸೈಲೆಕ್ಟ್ರಿಕ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಷರಿಂಗ್ ಪ್ರೈ.ಲಿ ಸಂಸ್ಥೆಯ 3425.60 ಕೋಟಿ ರೂ. ಹೂಡಿಕೆಯಿಂದ 460 ಉದ್ಯೋಗ ಹಾಗೂ ಮೆ: ಸನ್ಸೆರಾ ಇಂಜಿನಿಯರಿಂಗ್ ಲಿಮಿಟೆಡ್ ಸಂಸ್ಥೆಯ 2150 ಕೋಟಿ ರೂ. ಹೂಡಿಕೆಯಿಂದ 3500 ಉದ್ಯೋಗ ಸೃಷ್ಠಿಯಾಗುತ್ತಿರುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಸಭೆಯಲ್ಲಿ ಸಚಿವರಾದ ಎಂ.ಬಿ. ಪಾಟೀಲ, ಚಲುವರಾಯಸ್ವಾಮಿ, ಪ್ರಿಯಾಂಕ್ ಖರ್ಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕೆಐಎಡಿಬಿ ಸಿಇಒ ಡಾ.ಮಹೇಶ, ವಾಣಿಜ್ಯ ಮತ್ರು ಕೈಗಾರಿಕಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಹಾಜರಿದ್ದರು.
"ಸಕ್ಕರೆ ಕಾರ್ಖಾನೆಗಳು ಉಪ ಉತ್ಪನ್ನಗಳ ಉತ್ಪಾದನೆಯಲ್ಲೂ ರೈತರಿಗೆ ಲಾಭಾಂಶದ ಪಾಲು ನೀಡುವ ಕುರಿತು ಪರಿಶೀಲಿಸಲಾಗುವುದು. ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಈ ಸಂಬಂಧ ಅನುಸರಿಸುತ್ತಿರುವ ನಿಯಮಗಳನ್ನು ಅಧಿಕಾರಿಗಳು ನೋಡಬೇಕು. ಒಟ್ಟಿನಲ್ಲಿ ಕೈಗಾರಿಕೆಗಳು ಸರ್ಕಾರದ ನಿಯಮಗಳಿಗೆ ತಕ್ಕಂತೆಯೇ ಕಾರ್ಯ ನಿರ್ವಹಿಸುವುದನ್ನು ಖಾತ್ರಿ ಪಡಿಸಿಕೊಳ್ಳಲಾಗುವುದು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.