97.78 ಲಕ್ಷ ರೂ. ಉಳಿತಾಯದ ಬಜೆಟ್

HUN-MAR-7-1(CMC BUDGET)
ಹುಣಸೂರು ನಗರಸಭೆಯ 2024-25ನೇ ಸಾಲಿನ ಆಯವ್ಯಯವನ್ನು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಂಡಿಸಿದರು. ವಿ.ಶೋಭಾ, ಎಂ.ಲಕ್ಷ್ಮೀ ಇದ್ದರು.
Published on

ಹುಣಸೂರು : ಹುಣಸೂರು ನಗರಸಭೆಯ 2024-25ನೇ ಸಾಲಿನ 97.78 ಲಕ್ಷ ರೂ.ಗಳ ಉಳಿತಾಯ ಬಜೆಟ್ ಅನ್ನು ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಂಡಿಸಿದರು.

ಗುರುವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಅಯವ್ಯಯ ಮಂಡನಾ ಸಭೆಯಲ್ಲಿ ಬಜೆಟ್ ಮಂಡಿಸಿದ ಅವರು, ಪ್ರಸ್ತುತ ಸಾಲಿಗಾಗಿ ಒಟ್ಟು 24.29 ಕೋಟಿ ರೂ.ಗಳ ಆದಾಯವನ್ನು ನಿರೀಕ್ಷಿಸಲಾಗಿದ್ದು, ಆರಂಭಿಕ ಶಿಲ್ಕು 17.49 ಕೋಟಿ(ಒಟ್ಟು 41.78 ಕೋಟಿ ರೂ.ಗಳು) ಆಗಿದೆ. ನಿರೀಕ್ಷಿತ ಖರ್ಚು 40.80 ಕೋಟಿ ರೂ.ಗಳಾಗಿದ್ದು, 97.78 ಲಕ್ಷ ರೂ.ಗಳ ಆಖೈರು ಶಿಲ್ಕು ಉಳಿಯಲಿದೆ ಎಂದರು.

ಸ್ವಂತ ಸಂಪನ್ಮೂಲಗಳು: ನಗರಸಭೆಯ ಸ್ವಂತ ಸಂಪನ್ಮೂಲಗಳಿಂದ 7.42 ಕೋಟಿ ರೂ.ಗಳ ಆದಾಯ ನಿರೀಕ್ಷಿಸಲಾಗಿದೆ. ಈ ಪೈಕಿ ಪ್ರಮುಖವಾಗಿ ಆಸ್ತಿ ತೆರಿಗೆ 88 ಲಕ್ಷ ರೂ., ಉದ್ದಿಮೆ ಪರವಾನಗಿ 23 ಲಕ್ಷ ರೂ., ಅನುಪಯುಕ್ತ ವಸ್ತುಗಳ ಮಾರಾಟದಿಂದ 86.45 ಲಕ್ಷ ರೂ.ಗಳ ಆದಾಯ ನಿರೀಕ್ಷಿಸಲಾಗಿದೆ. ಸರ್ಕಾರದಿಂದ ಹಂಚಿಕೆಯಾಗುವ ವಿವಿಧ ಅನುದಾನಗಳಿಂದ ಒಟ್ಟು 16.86 ಕೋಟಿ ರೂ.ಗಳ ಆರ್ಥಿಕ ನೆರವನ್ನು ನಿರೀಕ್ಷಿಸಲಾಗಿದ್ದು, ಈ ಪೈಕಿ ಮುಖ್ಯವಾಗಿ ಎಸ್‌ಎಫ್‌ಸಿ ಮುಕ್ತ ನಿಧಿಗಾಗಿ 1 ಕೋಟಿ ರೂ.ಗಳು, 15ನೇ ಹಣಕಾಸು ಆಯೋಗದಿಂದ 4.55 ಕೋಟಿ ರೂ.ಗಳ ಅನುದಾನ, ಎಸ್‌ಎಫ್‌ಸಿ ವಿದ್ಯುತ್ ಮತ್ತು ನೀರು ಸರಬರಾಜಿಗಾಗಿ 4.1 ಕೋಟಿ ರೂ. ಅನುದಾನದ ನಿರೀಕ್ಷೆಯಿದೆ ಎಂದರು.

ಫುಡ್ ಪಾರ್ಕ್‌ಗೆ 1 ಕೋಟಿ ರೂ.ಗಳು: ಖರ್ಚಿನ ಬಾಬ್ತಿನ ಪೈಕಿ ಬಂಡವಾಳ ವೆಚ್ಚದಡಿ 18.31 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದ್ದು, ಈ ಪೈಕಿ ಮುಖ್ಯವಾಗಿ ನಗರದ ಹಳೇ ಸೇತುವೆ ಐಟಿಐ ಕಾಲೇಜು ಬಳಿ 1 ಕೋಟಿ ರೂ. ವೆಚ್ಚದಡಿ ಫುಡ್‌ಪಾರ್ಕ್ ನಿರ್ಮಿಸಲು 1 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಒಳಚರಂಡಿ ಅಭಿವೃದ್ಧಿಗಾಗಿ 1.5 ಕೋಟಿ ರೂ.ಗಳು, ನಗರವ್ಯಾಪ್ತಿಯಲ್ಲಿ ಮಳೆನೀರು ಚರಂಡಿ ಮತ್ತು ರಸ್ತೆ ಅಭಿವೃದ್ಧಿಗಾಗಿ 7 ಕೋಟಿ ರೂ.ಗಳು, ಘನತ್ಯಾಜ್ಯ ನಿರ್ವಹಣೆಗಾಗಿ 2 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೇವೆ, ರಾಜಸ್ವ ವೆಚ್ಚಗಳ ಪೈಕಿ ಸರ್ಕಾರಕ್ಕೆ ಪಾವತಿಸಬೇಕಾದ ಆದಾಯ ತೆರಿಗೆ, ಜಿಎಸ್‌ಟಿ ಮುಂತಾದವುಗಳಿಗಾಗಿ 1.81 ಕೋಟಿ ರೂ.ಗಳು, ಚಾಲಕರ ವೇತನ, ವಾಹನಗಳ ವಿಮೆ, ದುರಸ್ತಿ ಮುಂತಾದವುಗಳಿಗೆ 3.89 ಕೋಟಿ ರೂ.ಗಳು, ವೇತನ ಪಾವತಿಗಾಗಿ 4.30 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net