ಜಿಲ್ಲೆಗಳಲ್ಲಿ 915 ಕಿ.ಮೀಟರ್ ರಾಜ್ಯ ಹೆದ್ದಾರಿ ಅಭಿವೃದ್ಧಿ

Karatagi road nameplete instaled
ಕಾರಟಗಿಯ ಹೊರವಲಯದಲ್ಲಿ ಹೆದ್ದಾರಿ ಬದಿಗಳಲ್ಲಿ ನಾಮಫಲಕ ಅಳವಡಿಸುತ್ತಿರುವುದು.
Published on

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಆರ್ಥಿಕ ಸುಧಾರಣೆಗೆ ನಾಡಿಮಿಡಿತವಾಗಿರುವ ರಾಜ್ಯ ಹೆದ್ದಾರಿಗಳ ಅಗಲೀಕರಣ ಮತ್ತು ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ಮುಂದಾಗಿದೆ.

2024-25ನೇ ಸಾಲಿನ ಬಜೆಟ್ ೋಷಣೆಯಂತೆ ಹೆದ್ದಾರಿ ಸುಧಾರಣಾ ಯೋಜನೆ-4 (ಕೆ-ಶಿಪ್)ಯಲ್ಲಿ 5,736 ಕೋಟಿ ರೂ. ವೆಚ್ಚದಲ್ಲಿ 915 ಕಿ.ಮೀಟರ್ ಅಭಿವೃದ್ಧಿಪಡಿಸುವ ಪ್ರಕ್ರಿಯೆಯನ್ನು ಲೋಕೋಪಯೋಗಿ ಇಲಾಖೆ (ಪಿಡಬ್ಲೂೃಡಿ) ಪ್ರಾರಂಭಿಸಿದೆ.

ಪಿಡಬ್ಲೂೃಡಿ 4 ಪ್ಯಾಕೇಜ್‌ಗಳಲ್ಲಿ ಕಾರ್ಯಗತಗೊಳಿಸಲು ನಿರ್ಧರಿಸಿದೆ. ಈ ಸಲುವಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಮತ್ತು ಹಣಕಾಸು ಸಲಹಾ ಸೇವೆಗಳನ್ನು ಒದಗಿಸಲು ಖಾಸಗಿ ಸಲಹೆಗಾರರನ್ನು ನೇಮಿಸಿಕೊಳ್ಳಲು ಇಲಾಖೆ ಇತ್ತೀಚೆಗೆ ಟೆಂಡರ್ ಆಹ್ವಾನಿಸಿದೆ.

ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ರಾಮನಗರ, ವಿಜಯಪುರ, ಕಲುಬುರಗಿ, ಮಂಡ್ಯ, ಬೆಳಗಾವಿ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ 915 ಕಿ.ಮೀಟರ್ ಹೆದ್ದಾರಿಗಳಿದ್ದು, ಈಗಾಗಲೇ ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ನಿಯೋಗ ರಾಜ್ಯಕ್ಕೆ ಭೇಟಿ ಕೊಟ್ಟು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಯೋಜನೆ ವರದಿ ಪಡೆದಿದೆ. ಕೆ-ಶಿಪ್ ಯೋಜನೆ ಕಾರ್ಯಗತಗೊಳಿಸಲು ಬೇಕಾದ ಹಣಕಾಸು ನೆರವು ನೀಡಲು ಅಂತಿಮಘಟ್ಟ ತಲುಪಿದೆ. ಕೇವಲ ಎಡಿಬಿಯಿಂದ ಗ್ರೀನ್ ಸಿಗ್ನಲ್ ಸಿಗಬೇಕಾಗಿದೆ. ಆ ನಂತರ ಟೆಂಡರ್ ಪ್ರಕ್ರಿಯೆಯ ಮೂಲಕ ಸಲಹೆಗಾರರನ್ನು ಅಂತಿಮಗೊಳಿಸಿದ ನಂತರ, ಯಶಸ್ವಿ ಬಿಡ್ಡರ್ ಸಮೀಕ್ಷೆ ನಡೆಸಿ ಯೋಜನೆಗೆ ಡಿಪಿಆರ್ ಸಿದ್ಧಪಡಿಸುತ್ತಾರೆ ಎಂದು ಲೋಕೋಪಯೋಗಿ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ಮಂಡ್ಯ, ಮೈಸೂರು ಮತ್ತು ಚಾಮರಾಜನಗರದಲ್ಲಿ 266 ಕಿ.ಮೀಟರ್ ರಸ್ತೆಯನ್ನು ಮೊದಲ ಪ್ಯಾಕೇಜ್‌ನಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಮಳವಳ್ಳಿಯಿಂದ ಬಾವಲಿ (ಕೇರಳ ಗಡಿ) ವರೆಗಿನ ರಾಜ್ಯ ಹೆದ್ದಾರಿ-33ರಲ್ಲಿ 141 ಕಿ.ಮೀಟರ್ ಮತ್ತು ರಾಜ್ಯ ಹೆದ್ದಾರಿ- 79ರಲ್ಲಿ ಹನೂರು ಮತ್ತು ಪಾಲಾರ್ (ರಾಮಾಪುರ) ನಡುವೆ 70 ಕಿ.ಮೀಟರ್ ಒಳಗೊಂಡಿದೆ.

2ನೇ ಹಂತದಲ್ಲಿ ಮಡಿಕೇರಿ ಮತ್ತು ಡೋನೆಗಲ್ ನಡುವೆ 95 ಕಿ.ಮೀಟರ್, ಶ್ರೀರಂಗಪಟ್ಟಣ ಮತ್ತು ಚನ್ನರಾಯಪಟ್ಟಣ ನಡುವೆ 63 ಕಿ.ಮೀಟರ್ ಮತ್ತು ಮಾಗಡಿ ಮತ್ತು ಹಣಸನಹಳ್ಳಿ (ತಮಿಳುನಾಡು ಗಡಿ)95 ಕಿ.ಮೀಟರ್ ರಸ್ತೆಯನ್ನು ಕಾರ್ಯಗತಗೊಳಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರ್ಷದ ಅಂತ್ಯಕ್ಕೆ ಕೆಶಿಪ್-3 ಪೂರ್ಣ

ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಮತ್ತು ವಿಶ್ವಬ್ಯಾಂಕ್ ಬಾಹ್ಯ ಸಂಸ್ಥೆಗಳಿಂದ ಹಣಕಾಸಿನ ನೆರವಿನೊಂದಿಗೆ ರಾಜ್ಯದ ರಸ್ತೆಗಳು ಮತ್ತು ಹೆದ್ದಾರಿ ಅಭಿವೃದ್ಧಿಪಡಿಸಲು ಕೆ-ಶಿಪ್ ಯೋಜನೆ ಲೋಕೋಪಯೋಗಿ ಇಲಾಖೆಯಲ್ಲಿ ಪ್ರಮುಖ ಪಾತ್ರವಹಿಸಿದೆ. 2001-08ರ ಅವಧಿಯಲ್ಲಿ ವಿಶ್ವ ಬ್ಯಾಂಕ್ ನೆರವಿನೊಂದಿಗೆ ಕೆ-ಶಿಪ್-1 ಯೋಜನೆ ಪೂರ್ಣಗೊಳಿಸಲಾಗಿದೆ. 2011-19ರಲ್ಲಿ ಕೆ-ಶಿಪ್-2 ಅನ್ನು ಎಡಿಬಿ ಮತ್ತು ವಿಶ್ವಬ್ಯಾಂಕ್‌ನ ಆರ್ಥಿಕ ನೆರವು ಪಡೆದು ಯೋಜನೆ ಕಾರ್ಯಗತಗೊಳಿಸಲಾಗಿದೆ. 2018ರಲ್ಲಿ ಕೆ-ಶಿಪ್-3 ಎಡಿಬಿ ನೆರವಿನೊಂದಿಗೆ ಆರಂಭವಾಗಿದ್ದು, ಈ ವರ್ಷ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಅಭಿವೃದ್ಧಿಗೆ ಸಿದ್ಧವಾಗಿರುವ ರಸ್ತೆಗಳು

ರಸ್ತೆ ಹೆಸರು------ ಎಲ್ಲಿಂದ ಎಲ್ಲಿಗೆ- ಕಿ.ಮೀಟರ್

ಮಳವಳ್ಳಿಯಿಂದ ಬಾವಲಿ -------ಮೈಸೂರು-ಮಂಡ್ಯ 141

ಹುಲ್ಲಹಳ್ಳಿಯಿಂದ ಸಂತೇಮರಹಳ್ಳಿ -----ಮೈಸೂರು-ಚಾಮರಾಜನಗರ 55

ಹನೂರುಯಿಂದ ಪಾಲಾರ್----- ಚಾಮರಾಜನಗರ-ಚಿಕ್ಕಬಳ್ಳಾಪುರ 70

ಮಡಿಕೇರಿಯಿಂದ ಡೊನೆಗಲ್----- ಕೊಡಗು 95

ಶ್ರೀರಂಗಪಟ್ಟಣಯಿಂದ ಬಿಎಂ ರಸ್ತೆ ಜಂಕ್ಷನ್(ಚನ್ನರಾಯಪಟ್ಟಣ)---- ಮಂಡ್ಯ-ಹಾಸನ 63

ಮಾಗಡಿಯಿಂದ ಹುಣಸನಹಳ್ಳಿ (ತಮಿಳುನಾಡು ಗಡಿ)---- ರಾಮನಗರ 95

ಚಡಚಣದಿಂದ ಗಾಣಗಾಪುರ (ಇಂಡಿ,ಅಜ್ಬಲ್‌ಪುರ) ----ವಿಜಯಪುರ-ಕಲುಬುರಗಿ 115

ದಿಂಡಾವರ್‌ಯಿಂದ ನಾಲತವಾಡ ----ವಿಜಯಪುರ 95

ಸಂಕೇಶ್ವರದಿಂದ ಲೋಕಾಪುರಕ್ಕೆ -----ಬೆಳಗಾಂ-ಬಾಗಲಕೋಟೆ 100

ಗಿಣಿಗೇರಾಯಿಂದ ಮುಂಡರಗಿ---- ಕೊಪ್ಪಳ 41

ಮೈದ್ನೇರಿ ಕ್ರಾಸ್‌ನಿಂದ ಕತ್ರಾಲ ಕ್ರಾಸ್ ----ಕೊಪ್ಪಳ 45

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net