

ಕೋಲಾರ: ಬಹು ವರ್ಷಗಳಿಂದ ರೈತರು ಅನುಭವಿಸುತ್ತಿದ್ದ ಪಿ ನಂಬರ್ ಸಮಸ್ಯೆಗೆ ಮುಕ್ತಿ ಕಾಣಿದಲು, ಪೋಡಿ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಶೇ.90 ಪ್ರಕರಣಗಳನ್ನು ತಂತ್ರಾಂಶದಲ್ಲಿ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಿ ನಂಬರ್ ತೆರವು ಮಾಡಬೇಕು ಎಂದು ರೈತರಿಂದ ಮನವಿಗಳು ಬಂದಿದ್ದವು, ಪೋಡಿ ದುರಸ್ತಿಗಾಗಿ 25,810 ಮಂಜೂರುದಾರರ ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಭೂ ಮಂಜೂರಾತಿ ಆಗಿರುವ 6,108 ಸರ್ವೇ ನಂ.ಗಳಲ್ಲಿ 4,073 ಮಂಜೂರಿದಾರರ ವಿವರಗಳನ್ನು ಅನುಬಂಧ 1-5 ರಂತೆ ತಂತ್ರಾಂಶದಲ್ಲಿ ದಾಖಲಿಸಲಾಗಿರುತ್ತದೆ. 4,073 ಮಂಜೂರಿದಾರರ ಪೈಕಿ 463 ಖಾತೆದಾರರಿಗೆ ಪೋಡಿ ದುರಸ್ತಿ ಪ್ರಕ್ರಿಯೆ ಪೂರ್ಣಗೊಳಿಸಿ ಹೊಸ ಸರ್ವೇ ನಂಬರ್ಗಳಲ್ಲಿ ಪಹಣಿ ಇಂಡೀಕರಿಸಿ ಪಹಣಿ ವಿತರಿಸಲಾಗಿರುತ್ತದೆ ಎಂದರು.
ಬಾಕಿ ಇರುವ 3,610 ಮಂಜೂರಿದಾರರ ಬ್ಲಾಕ್ಗಳನ್ನು ಶೀಘ್ರ ಜಮೀನಿನ ಸರ್ವೇ ಇಲಾಖೆಯಿಂದ ಅಳತೆ ಕಾರ್ಯ ನಡೆಸಲಾಗುವುದು. ಪೋಡಿ ದುರಸ್ತಿಯಂತೆ ಹೊಸ ಸರ್ವೇ ನಂಬರ್ಗಳ ಪಹಣಿಗಳನ್ನು ಮುಂದಿನ ಎರಡು ತಿಂಗಳೊಳಗಾಗಿ ವಿತರಿಸಲಾಗುವುದು ಎಂದು ತಿಳಿಸಿದರು.
ಒಟ್ಟು 6,108 ಸರ್ವೇ ನಂಬರ್ಗಳಲ್ಲಿ ಭೂ ಮಂಜೂರಾತಿಯಾಗಿರುವ 17,237 ಮಂಜೂರಿದಾರ ಸಂಬಂಧಿಸಿದಂತೆ ಮೂಲ ಮಂಜೂರಿ ಕಡತದಲ್ಲಿನ ದಾಖಲೆಗಳು ಶಿಥಿಲ, ಗೈರು ವಿಲೇಯಾಗಿರುವುದು ಕಂಡುಬಂದಿರುತ್ತದೆ. ಸದರಿ 17,237 ಪ್ರಕರಣಗಳು ಜಿಲ್ಲಾಮಟ್ಟದ ಗೈರು ವಿಲೇ ಪುನರ್ ನಿಮಾರ್ಣ ಸಮಿತಿ ಹಂತಕ್ಕೆ ವರ್ಗಾವಣೆಯಾಗಿದ್ದು, ಇತ್ಯರ್ಥಪಡಿಸಲು ಈಗಾಗಲೇ ಪ್ರತಿ ತಿಂಗಳ 1 ನೇ ಮತ್ತು 3 ನೇ ಶನಿವಾರದಂದು ಸಮಿತಿಯ ಸಭೆಗಳನ್ನು ನೆಡೆಸಲಾಗುತ್ತಿದೆ ಎಂದು ಹೇಳಿದರು.