ವಸತಿ ಸಮುಚ್ಚಯದಲ್ಲಿ ಅಗ್ನಿ ಅವಘಡ; ಮಗು ಸೇರಿದಂತೆ ನಾಲ್ವರು ಮೃತ್ಯು

DFS
Published on

ನವದೆಹಲಿ: ವಸತಿ ಸಮುಚ್ಚಯ ಒಂದರ ನೆಲಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 9 ತಿಂಗಳ ಮಗು ಸೇರಿದಂತೆ ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯ ಶಹದಾರ ಪ್ರದೇಶದಲ್ಲಿ ನಡೆದಿದೆ.

ಶುಕ್ರವಾರ ಸಂಜೆ 5:22ರ ಸುಮಾರಿಗೆ ಘಟನೆ ನಡೆದಿದ್ದು, ನಾಲ್ವರು ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಅಗ್ನಿಶಾಮಕ ಸೇವೆಗಳ (DFS) ಮುಖ್ಯಸ್ಥ ಅತುಲ್ ಗರ್ಗ್, ವಸತಿ ಸಮುಚ್ಚಯ ಒಂದರ ನೆಲಮಹಡಿಯಲ್ಲಿ ಇರಿಸಲಾಗಿದ್ದ ವೈಪರ್‌ ಹಾಗೂ ರಬ್ಬರ್​ ಕಟ್​ ಮಾಡುವ ಮೆಷಿನ್​ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ದುರಂತ ಸಂಭವಿಸಿದೆ. ಐದು ಅಗ್ನಿಶಾಮಕ ವಾಹನಗಳನ್ನು ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗಿದ್ದು, ಬೆಂಕಿಯನ್ನು ನಂದಿಸಲಾಗಿದೆ.

ಘಟನೆಯಲ್ಲಿ 9 ತಿಂಗಳ ಮಗು ಸೇರಿದಂತೆ ನಾಲ್ವರು ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆರು ಮಂದಿಯನ್ನು ರಕ್ಷಿಸಲಾಗಿದೆ. ಗಾಯಾಳುಗಳನ್ನು GTB ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ನಾಲ್ಕು ಅಂತಸ್ತಿನ ಕಟ್ಟಡದ ನಿರ್ಮಾಣದ ವೇಳೆ ಯಾವುದೇ ಮುಂಜಾಗ್ರತ ಕ್ರಮ ಪಾಲಿಸದೆ ಇರುವುದು ಗಮನಕ್ಕೆ ಬಂದಿದ್ದು, ತನಿಖೆಗೆ ಆದೇಶಿಸಲಾಗಿದೆ. ಅಧಿಕಾರಿಗಳು ಸಲ್ಲಿಸುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಅಗ್ನಿಶಾಮಕ ಸೇವೆಗಳ (DFS) ಮುಖ್ಯಸ್ಥ ಅತುಲ್ ಗರ್ಗ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net