

ಹಿಮಾಚಲ ಪ್ರದೇಶದಾದ್ಯಂತ ಭಾರಿ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತವಾಗುತ್ತಿದೆ. ಭೂಕುಸಿತದ ಪರಿಣಾಮ ಶಿವ ದೇಗುಲವೂ ಕುಸಿದಿದ್ದು, 9 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಘಟನಾ ಸ್ಥಳಕ್ಕೆ ರಾಜ್ಯ ವಿಪತ್ತು ನಿರ್ವಹಣಾ ತಂಡ ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಸಮ್ಮರ್ ಹಿಲ್ ಪ್ರದೇಶದ ಸಮೀಪವಿರುವ ದೇಗುಲ ಕುಸಿದು ಈ ದುರಂತ ಸಂಭವಿಸಿದೆ ಎಂದು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಸಿಎಂ ಭೇಟಿ ನೀಡಿದ್ದು, ರಕ್ಷಣಾ ಕಾರ್ಯವನ್ನು ಗಮನಿಸಿದ್ದಾರೆ. 12ಕ್ಕೂ ಹೆಚ್ಚು ಜನ ದೇಗುಲದ ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ ಎಂದು ಹಿಮಾಚಲ ಪ್ರದೇಶ ಸಿಎಂ ಸುಖ್ವೀಂದರ್ ಸಿಂಗ್ ಸಿಖು ಹೇಳಿದ್ದಾರೆ.
ಶಿಮ್ಲಾದ ಸಮ್ಮರ್‌ಹಿಲ್ ಬಳಿಯ ಶಿವ ದೇವಾಲಯದ ಬಳಿ ಭೂಕುಸಿತ ಸಂಭವಿಸಿದೆ ಇದರಿಂದಾಗಿ ಅನೇಕ ಜನರು ಸಮಾಧಿಯಾಗಿದ್ದಾರೆ. ಕೆಲವರು ದುರಂತದಲ್ಲಿ ಸಾವನ್ನಪ್ಪಿದ್ದಾರೆ. ನಾನು ಘಟನಾ ಸ್ಥಳದಲ್ಲೇ ಇದ್ದೇನೆ. ರಕ್ಷಣಾ ಕಾರ್ಯವು ಸಮರೋಪಾದಿಯಲ್ಲಿ ನಡೆಯುತ್ತಿದೆ.
ಅವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಟ್ವಿಟ್ ಮಾಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ ಘಟನೆ ನಡೆಯುವ ವೇಳೆ ದೇಗುಲದಲ್ಲಿ ಸುಮಾರು 50 ಜನರಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಅವಶೇಷಗಳನ್ನು ತೆರವುಗೊಳಿಸಿ ಕೆಳಗೆ ಸಿಲುಕಿರುವವರನ್ನು ರಕ್ಷಣಾ ಕಾರ್ಯ ಮುಂದುವರೆದಿದೆ.