

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ ಮತ್ತು ವಿರೋಧಿ ಗುಂಪಿನ ನಡುವೆ ಉಂಟಾಗಿರುವ ಗಲಾಟೆಯು ಹಿಂಸಾಚಾರಕ್ಕೆ ತಿರುಗಿರುವ ಪರಿಣಾಮ ಪೊಲೀಸ್ ಸಿಬ್ಬಂದಿ ಸೇರಿ ಸಾವಿಗೀಡಾಗಿದವರ ಸಂಖ್ಯೆ 9ಕ್ಕೆ ಏರಿದೆ.
ಗಲಭೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅದರಲ್ಲೂ ಸುಮಾರು 70 ಮಂದಿ ಗುಂಡೇಟಿನಿಂದ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಪರ-ವಿರೋಧ ಬಣಗಳಿಂದ ದೆಹಲಿಯ ಹಲವು ಭಾಗಗಳಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಹಲವೆಡೆ ಅಂಗಡಿಗಳು ಭಸ್ಮವಾಗಿದ್ದು, ಈಶಾನ್ಯ ದೆಹಲಿಯ ಭಜನ್ಪುರ, ಚಾಂದ್ ಬಾಘ್ ಮತ್ತು ಕರ್ವಾಲ್ ನಗರಗಳಲ್ಲಿ ಜನರು ಕೈಯಲ್ಲಿ ಕೋಲು ಮತ್ತು ಕಬ್ಬಿಣದ ಸಲಾಕೆಗಳನ್ನು ಹಿಡಿದು ಬೀದಿಗೆ ಇಳಿದಿದ್ದಾರೆ.
ನಿನ್ನೆಯಷ್ಟೇ ಉಲ್ಬಣಗೊಂಡ ಹಿಂಸಾಚಾರಕ್ಕೆ ಈವರೆಗೂ 9 ಮಂದಿ ಬಲಿಯಾಗಿದ್ದು, ಸಾಕಷ್ಟು ಸೇನಾ ಪಡೆಗಳನ್ನು ಸ್ಥಳದಲ್ಲಿ ನಿಯೋಜಿಸಿರುವುದಾಗಿ ಗೃಹ ಸಚಿವಾಲಯ ಮಾಹಿತಿ ನೀಡಿದೆ. ವದಂತಿಗಳನ್ನು ಹರಡುವುದನ್ನು ನಿಲ್ಲಿಸುವಂತೆ ಹಾಗೂ ವದಂತಿಗಳಿಗೆ ಕಿವಿಗೊಡದೆ ಶಾಂತಿ ಕಾಪಾಡುವಂತೆ ಗೃಹ ಸಚಿವ ಅಮಿತ್ ಷಾ ಅವರು ಸಿಎಂ ಅರವಿಂದ್ ಕೇಜ್ರಿವಾಲ್ ಜತೆ ನಡೆದ ಸಭೆಯ ಬಳಿಕ ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗಾಯಗೊಂಡ 100 ಮಂದಿಯಲ್ಲಿ 48 ಪೊಲೀಸ್ ಸಿಬ್ಬಂದಿಯಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಿಂಸಾಚಾರದಲ್ಲಿ ಮೃತಪಟ್ಟ ಪೊಲೀಸ್ ಸಿಬ್ಬಂದಿ ಮತ್ತು ಇತರರಿಗೆ ಸಿಎಂ ಕೇಜ್ರಿವಾಲ್ ಸಂತಾಪ ಸೂಚಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮನ ವೇಳೆಯೇ ಕೆಲವರು ಪ್ರಚಾರಕ್ಕಾಗಿ ರಾಷ್ಟ್ರ ರಾಜಧಾನಿಯಲ್ಲಿ ಹಿಂಸಾಚಾರ ಸೃಷ್ಟಿಸಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿದ್ದು, ಸದ್ಯ ಈಶಾನ್ಯ ದೆಹಲಿಯಲ್ಲಿ 144 ಸೆಕ್ಷನ್ ಹೇರಲಾಗಿದೆ. (ಏಜೆನ್ಸೀಸ್)