

ವಾಷಿಂಗ್ಟನ್: ಬೆಂಗಳೂರಿನ ದೇವಾಸ್ ಮಲ್ಟಿಮೀಡಿಯಾ ಕಂಪನಿಗೆ -ಠಿ; 8,947 ಕೋಟಿ (1.20 ಬಿಲಿಯನ್ ಡಾಲರ್) ಪರಿಹಾರ ನೀಡುವಂತೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ವಾಣಿಜ್ಯ ವಿಭಾಗವಾದ ಅಂತರಿಕ್ಷ್ (ಆಂಟ್ರಿಕ್ಸ್) ಸಂಸ್ಥೆಗೆ ಅಮೆರಿಕದ ಕೋರ್ಟ್ ಆದೇಶಿಸಿದೆ. ಉಪಗ್ರಹ ಯೋಜನೆಯ ಒಪ್ಪಂದವೊಂದನ್ನು ರದ್ದುಪಡಿಸಿದ ಪ್ರಕರಣ ಸಂಬಂಧ ದೇವಾಸ್ಗೆ ಬಡ್ಡಿ ಸಹಿತ 1. 20 ಬಿಲಿಯನ್ ಡಾಲರ್ ಪರಿಹಾರ ನೀಡುವಂತೆ ವಾಷಿಂಗ್ಟನ್ ಪಶ್ಚಿಮ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ ಸೂಚಿಸಿದೆ.
2005ರ ಜನವರಿಯಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ ದೇವಾಸ್ಗಾಗಿ ಅಂತರಿಕ್ಷ್ ಉಪಗ್ರಹ ನಿರ್ವಿುಸಿ, ಉಡಾವಣೆ ನಿರ್ವಹಿಸಬೇಕಾಗಿತ್ತು. ಎಸ್ ಬ್ಯಾಂಡ್ ಸ್ಪೆಕ್ಟ್ರಂನ 70 ಮೆಗಾಹರ್ಟ್ಸ್ ತರಂಗಾಂತರವನ್ನು ದೇವಾಸ್ಗೆ ಒದಗಿಸಬೇಕೆನ್ನುವುದೂ ಒಪ್ಪಂದದಲ್ಲಿನ ಅಂಶವಾಗಿತ್ತು. ಆದರೆ 2011ರ ಫೆಬ್ರವರಿಯಲ್ಲಿ ಈ ಒಪ್ಪಂದವನ್ನು ಅಂತರಿಕ್ಷ್ ರದ್ದುಪಡಿಸಿತ್ತು. ಆನಂತರ, ದೇವಾಸ್ ಸುಪ್ರೀಂಕೋರ್ಟ್ ಸಹಿತ ಭಾರತದ ಅನೇಕ ವೇದಿಕೆಗಳಲ್ಲಿ ಹೋರಾಟ ನಡೆಸಿತ್ತು.
ತಪ್ಪು ತೀರ್ಮಾನ: ಅಮೆರಿಕದ ವಾಷಿಂಗ್ಟನ್ ಪಶ್ಚಿಮ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲೂ ಕೂಡ ದೇವಾಸ್ ಮಲ್ಟಿಮೀಡಿಯಾ ಒಂದು ಕೇಸ್ ದಾಖಲಿಸಿತ್ತು. ದೇವಾಸ್-ಅಂತರಿಕ್ಷ್ ಒಪ್ಪಂದವನ್ನು ರದ್ದುಪಡಿಸಿದ್ದು ತಪು್ಪ ಎಂದು ಮೂರು ಪ್ರತ್ಯೇಕ ನ್ಯಾಯಮಂಡಳಿಗಳು ಹಾಗೂ ಒಂಬತ್ತು ಸಂಧಾನಕಾರರು ಹೇಳಿದ್ದರು ಎಂಬುದು ದೇವಾಸ್ ವಾದವಾಗಿತ್ತು. ಇದು ಅಮೆರಿಕದ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣವೊಡ್ಡಿ ಪ್ರಕರಣವನ್ನು ವಜಾ ಮಾಡುವಂತೆ 2018ರ ನವೆಂಬರ್ನಲ್ಲಿ ಅಂತರಿಕ್ಷ್ ಕೋರಿತ್ತು. ಆದರೆ, ವಾಷಿಂಗ್ಟನ್ ಪಶ್ಚಿಮ ಜಿಲ್ಲೆ ಸಹಿತ ಅಮೆರಿಕದಾದ್ಯಂತ ಅಂತರಿಕ್ಷ್ ಸಂಸ್ಥೆ ವ್ಯವಹಾರ ನಡೆಸುವುದರಿಂದ ಕೋರ್ಟ್ಗೆ ವಿಚಾರಣೆ ವ್ಯಾಪ್ತಿ ಇದೆಯೆಂದು ದೇವಾಸ್ ವಾದಿಸಿತ್ತು. ಇದನ್ನು ಮಾನ್ಯ ಮಾಡಿದ ವಾಷಿಂಗ್ಟನ್ ಕೋರ್ಟ್, ಪ್ರಕರಣದ ವಿಚಾರಣೆಗೆ ಒಂದು ವರ್ಷ ತಡೆ ನೀಡಿತ್ತು. 2020ರ ಏಪ್ರಿಲ್ 15ರೊಳಗೆ ಯಥಾಸ್ಥಿತಿ ವರದಿ (ಸ್ಟೇಟಸ್ ರಿಪೋರ್ಟ್) ಸಲ್ಲಿಸುವಂತೆ ಎರಡೂ ಸಂಸ್ಥೆಗಳಿಗೆ ಸೂಚಿಸಿತ್ತು. ಜುಲೈ 16ರಂದು ವರದಿಯನ್ನು ಸಲ್ಲಿಸಲಾಗಿತ್ತು.