869 ನಕಲಿ ಇ-ಪೆಹಚಾನ್ ಕಾರ್ಡ್ ಸೃಷ್ಟಿ

Principal Arrest
Published on

ಬೆಂಗಳೂರು: ನಕಲಿ ಕಂಪನಿಗಳ ಹೆಸರಿನಲ್ಲಿ ಎಂಪ್ಲೈಯಿಸ್ ಸ್ಟೇಟ್ ಇನ್ಸೂರೆನ್ಸ್ ಕಾರ್ಪೋರೆಷನ್ (ಇಎಸ್‌ಐ) ಇ-ಪೆಹಚಾನ್ ದಂಧೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಶ್ರೀಧರ್ ಶ್ರೀಧರ್, ಅದೇ ಆಸ್ಪತ್ರೆಯ ಕ್ಯಾಂಟೀನ್ ಮಾಲೀಕ ರಮೇಶ್, ಎಂ.ಎಸ್. ರಾಮಯ್ಯ ಆಸ್ಪತ್ರೆಯ ಮಾಜಿ ನೌಕರ ಶಿವಲಿಂಗ ಎಂಬುವರು ಬಂಧನಕ್ಕೆ ಒಳಗಾಗಿದ್ದರು. ಇದೀಗ ಎಂ.ಎಸ್. ರಾಮಯ್ಯ ಆಸ್ಪತ್ರೆಯ ಮತ್ತೊಬ್ಬ ನೌಕರ ಚಂದ್ರು ಎಂಬಾತನ್ನು ಬಂಧಿಸಲಾಗಿದೆ. ಈ ಗ್ಯಾಂಗ್ 869 ನಕಲಿ ಇಎಸ್‌ಐ ಕಾರ್ಡ್ ಸೃಷ್ಟಿಸಿರುವುದು ಸಿಸಿಬಿ ತನಿಖೆಯಲ್ಲಿ ಬೆಂಕಿಗೆ ಬಂದಿದೆ. ಮತ್ತಿಬ್ಬರು ಆರೋಪಿಗಳಾದ ಶ್ವೇತಾ, ಶಶಿಕಲಾ ಎಂಬುವರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಬಂಧಿತರಿಂದ ನಕಲಿ ಕಂಪನಿಗಳ, ವಿವಿಧ ಆಸ್ಪತ್ರೆಯ ವೈದ್ಯರ ಸೀಲ್‌ಗಳು, 4 ಲ್ಯಾಪ್‌ಟಾಪ್‌ಗಳು, 59,500 ರೂ. ನಗದು, ನಕಲಿ ಇ-ಪೆಹಚಾನ್ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಕೋವಿಡ್ ಬಳಿಕ ಆರೋಪಿಗಳು ಈ ದಂಧೆ ಶುರು ಮಾಡಿದ್ದರು. ರಾಜಾಜಿನಗರ ಇಎಸ್‌ಐ ಆಸ್ಪತ್ರೆಗೆ ಬರುವ ರೋಗಿಗಳ ಬಳಿಕ ಇ-ಪೆಹಚಾನ್ ಕಾರ್ಡ್ ಇಲ್ಲದೆ ಇದ್ದಾಗ ಅಂತವರನ್ನು ಟಾರ್ಗೆಟ್ ಮಾಡಿ ಸೆಕ್ಯೂರಿಟಿ ಗಾರ್ಡ್ ಶ್ರೀಧರ್ ಸಂಪರ್ಕ ಮಾಡುತ್ತಿದ್ದ.

ಬಳಿಕ ಭೌತಿಕವಾಗಿ ಅಸ್ತಿತ್ವದಲ್ಲಿ ಇರದ ಕಂಪನಿಗಳನ್ನು ಸರ್ಕಾರಿ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡುತ್ತಿದ್ದರು. ಸಾರ್ವಜನಿಕರು /ರೋಗಿಗಳಿಂದ ಹಣ ಪಡೆದು ಆ ನಕಲಿ ಕಂಪನಿಗಳಿಗೆ ಅವರನ್ನು ನೌಕರರೆಂದು ತೋರಿಸಿ ಇಎಸ್‌ಐ ಕಾರ್ಡ್ ಕೊಡುತ್ತಿದ್ದರು.

ಪ್ರತಿಯಾಗಿ ಅವರಿಂದ 10 ಸಾವಿರದಿಂದ 2 ಲಕ್ಷ ರೂ. ಪಡೆದುಕೊಳ್ಳುತ್ತಿದ್ದರು. ಕಾರ್ಡ್ ನವೀಕರಣ ಎಂದು ಪ್ರತಿ ತಿಂಗಳು 500 ರೂ. ಪಡೆದುಕೊಂಡು 280 ರೂ. ಪಾವತಿಸಿ ಉಳಿದ 220 ರೂ. ಲಪಟಾಯಿಸುತ್ತಿದ್ದರು.

ಆರೋಪಿಗಳ ಪೈಕಿ ಶಶಿಕಲಾ 2ವರ್ಷಗಳಿಂದ ತನ್ನ ಮನೆಯಲ್ಲಿಯೇ ನಕಲಿ ಇಎಸ್‌ಐ ಕಾರ್ಡ್‌ಗಳನ್ನು ಸೃಷ್ಟಿಸುತ್ತಿದ್ದ ಮಾಹಿತಿ ತನಿಖೆ ವೇಳೆ ಕಂಡು ಬಂದಿದೆ. ಅಲ್ಲದೆ, ವೈದ್ಯರ ಮತ್ತು ಸರ್ಕಾರ ಕೆಲ ದಾಖಲೆ ಪತ್ರಗಳ ಸೃಷ್ಟಿಸುವುದು, ನಕಲಿ ಸೀಲ್‌ಗಳನ್ನು ತಯಾರಿಸುವ ಉಸ್ತುವಾರಿಯನ್ನು ಈಕೆ ಹೊಂದಿದ್ದರು. ಶ್ರೀಧರ್ ಹೆಸರಿನಲ್ಲಿ 5 ನಕಲಿ ಕಂಪನಿ, ರಮೇಶ್ ಹೆಸರಿನಲ್ಲಿ 7 ಮತ್ತು ಶಿವಲಿಂಗ್ ಹೆಸರಿನಲ್ಲಿ 3 ನಕಲಿ ಕಂಪನಿಗಳನ್ನು ಸೃಷ್ಟಿಸಿದ್ದರು.

ಈ ಕಂಪನಿಗಳ ಹೆಸರಿನಲ್ಲಿ ಇ-ಪೆಹಚಾನ್ ಕಾರ್ಡ್ ಮಾಡಿಸುತ್ತಿದ್ದರು. ಇನ್ನೂ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ನೌಕರನಾಗಿದ್ದ ಚಂದ್ರು, ಇ-ಪೆಹಚಾನ್ ಕಾರ್ಡ್ ಪಡೆದಿರುವ ರೋಗಿಗಳಿಗೆ ವಿಮಾ ಸೌಲಭ್ಯ ಕೊಡಿಸುವಲ್ಲಿ ತೊಡಗಿಕೊಂಡಿದ್ದ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net