ಶೇಕಡ 85 ಬಿತ್ತನೆ ಕಾರ್ಯ ಪೂರ್ಣ; ಉತ್ತರ ಒಳನಾಡಿನ 5 ಜಿಲ್ಲೆಗಳಲ್ಲಿ ಅಧಿಕ ಬಿತ್ತನೆ ಗುರಿ ಸಾಧನೆ

Bitthane story
Published on

| ಸತೀಶ್ ಕಂದಗಲ್​ಪುರ ಬೆಂಗಳೂರು

ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದು, ಮುಂಗಾರು ಹಂಗಾಮಿನಲ್ಲಿ ಆಗಸ್ಟ್ ಮೊದಲ ವಾರದ ಅಂತ್ಯಕ್ಕೆ ವಾರ್ಷಿಕ ಗುರಿಯ ಶೇ.85 ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. 2021-22ನೇ ಸಾಲಿನಲ್ಲಿ ಸಮರ್ಪಕ ಹಂಚಿಕೆಯಾದ ಪೂರ್ವಮುಂಗಾರು ಮಳೆಯನ್ನು ಅಪೇಕ್ಷಿಸಿ ಒಟ್ಟು 77 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಕೃಷಿ ಬೆಳೆಗಳ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಪ್ರಸ್ತಾಪಿಸಿತ್ತು. ಇದರಿಂದ 135.48 ಲಕ್ಷ ಟನ್ ಆಹಾರ ಧಾನ್ಯಗಳು ಮತ್ತು 15.23 ಲಕ್ಷ ಟನ್ ಎಣ್ಣೆ ಕಾಳುಗಳ ಉತ್ಪಾದನಾ ಗುರಿ ಹೊಂದಲಾಗಿತ್ತು. ಈಗಾಗಲೇ 65.21 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ.

4 ಜಿಲ್ಲೆಗಳಲ್ಲಿ ಶೇ.100 ಸಾಧನೆ: ಕೊಪ್ಪಳದಲ್ಲಿ 2.48 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇಟ್ಟುಕೊಂಡಿದ್ದು, ಈವರೆಗೆ 2.98 ಲಕ್ಷ ಹೆಕ್ಟೇರ್ ಬಿತ್ತನೆ ಮಾಡುವ ಮೂಲಕ ಶೇ.118 ಗುರಿ ಸಾಧಿಸಲಾಗಿದೆ. ಧಾರವಾಡ ಶೇ.115.76 (2.73 ಲ.ಹೆಕ್ಟೇರ್) ಹಾವೇರಿ ಶೇ.112.74 (3.13 ಲಕ್ಷ ಹೆಕ್ಟೇರ್) ಹಾಗೂ ಗದಗ ಶೇ.101.75 (2.83 ಲಕ್ಷ ಹೆಕ್ಟೇರ್) ಬಿತ್ತನೆ ಕಾರ್ಯದಲ್ಲಿ ಪ್ರಗತಿ ಕಂಡುಬಂದಿದೆ. ಉಡುಪಿ ಶೇ.102.07 (0.36 ಲಕ್ಷ ಹೆಕ್ಟೇರ್) ಮತ್ತು ಬೀದರ್ ಜಿಲ್ಲೆಯಲ್ಲಿ ಶೇ.100.38 (3.71 ಲಕ್ಷ ಹೆಕ್ಟೇರ್) ಬಿತ್ತನೆ ಪೂರ್ಣಗೊಂಡಿದೆ. ಇನ್ನು ಕಪು್ಪ ಮಣ್ಣು ಹೊಂದಿದ ಉತ್ತರ ಕರ್ನಾಟಕದ 5 ಜಿಲ್ಲೆಗಳಲ್ಲಿ ಬಿತ್ತನೆ ಪ್ರಮಾಣ ಹೆಚ್ಚಾಗಿರುವುರಿಂದ ಆಹಾರ, ಕಾಳು ಮತ್ತು ವಾಣಿಜ್ಯ ಬೆಳೆಗಳಲ್ಲಿ ಹೆಚ್ಚಿನ ಉತ್ಪಾದನೆಯನ್ನು ನಿರೀಕ್ಷಿಸಲಾಗಿದೆ.

53 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ 6 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳ ಬೇಡಿಕೆ ಅಂದಾಜಿಸಲಾಗಿತ್ತು. ಈವರೆಗೆ ರೈತ ಸಂಪರ್ಕ ಕೇಂದ್ರಗಳಲ್ಲಿ 3.67 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿದೆ. ಉಳಿದಂತೆ 53,402.98 ಕ್ವಿಂಟಾಲ್ ಬಿತ್ತನೆ ಬೀಜಗಳ ದಾಸ್ತಾನು ರಾಜ್ಯದ ಉಗ್ರಾಣ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿದೆ. 26.47 ಲಕ್ಷ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ಬೇಡಿಕೆ ಅಂದಾಜಿಸಲಾಗಿತ್ತು. ಈವರೆಗೆ 16.71 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರಗಳನ್ನು ಸರಬರಾಜು ಮಾಡಲಾಗಿದೆ. 9 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net