ಮುಳುಗಿತು ಆಸ್ಸಾಂನ ಕಾಜಿರಂಗ್​ ರಾಷ್ಟ್ರೀಯ ಉದ್ಯಾನವನ; 100ಕ್ಕೂ ಹೆಚ್ಚು ಪ್ರಾಣಿಗಳು ಸಾವು

Animals
Published on

ದಿಸ್ಪುರ: ಮಾನ್ಸೂನ್​ ಮಳೆಯ ಅಬ್ಬರಕ್ಕೆ ಆಸ್ಸಾಂ ತತ್ತರಿಸಿದೆ. ಪ್ರವಾಹದಿಂದ ಅಪಾರ ಪ್ರಮಾಣದಲ್ಲಿ ಸಾವು-ನೋವು ಉಂಟಾಗುತ್ತಿದೆ.

ಆಸ್ಸಾಂನ ಕಾಜಿರಂಗ್​ ರಾಷ್ಟ್ರೀಯ ಉದ್ಯಾನವನದ ಶೇ.85ರಷ್ಟು ಭಾಗ ನೀರಿನಲ್ಲಿ ಮುಳುಗಿಹೋಗಿದೆ. 100ಕ್ಕೂ ಹೆಚ್ಚು ಪ್ರಾಣಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿವೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಆಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್​ ಸೊರೊವಾಲ್​ ಅವರಿಗೆ ಕರೆ ಮಾಡಿ ರಾಜ್ಯದಲ್ಲಿ ಇರುವ ಪ್ರವಾಹ ಪರಿಸ್ಥಿತಿಯ ಬಗ್ಗೆ ವರದಿ ಕೇಳಿದ್ದಾರೆ. ಅಷ್ಟೇ ಅಲ್ಲ ಕೊವಿಡ್​-19 ಸ್ಥಿತಿಗತಿ, ತಿನಸುಕಿಯಾ ಜಿಲ್ಲೆಯ ಬಾಘ್​​ಜನ್ ಬಳಿ ಇರುವ ಆಯಿಲ್ ಇಂಡಿಯಾ ಲಿಮಿಟೆಡ್​ನ ತೈಲ ಬಾವಿಯಲ್ಲಿ ಕಾಣಿಸಿಕೊಂಡ ಬೆಂಕಿಯ ಬಗ್ಗೆಯೂ ವಿಚಾರಿಸಿದ್ದಾರೆ ಎಂದು ವರದಿಯಾಗಿದೆ.

ಆಸ್ಸಾಂನ ಪ್ರವಾಹಕ್ಕೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಮುಕ್ಕಾಲು ಭಾಗ ಮುಳುಗಿದ್ದು, ಪರಿಣಾಮವಾಗಿ 9 ಖಡ್ಗಮೃಗಗಳು, 80ಕ್ಕೂ ಹೆಚ್ಚು ಜಿಂಕೆಗಳು ಸೇರಿ ಸುಮಾರು 100 ಪ್ರಾಣಿಗಳು ಮೃತಪಟ್ಟಿವೆ. 130ಕ್ಕೂ ಹೆಚ್ಚು ಪ್ರಾಣಿಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಉದ್ಯಾನವನದ ಆಡಳಿತ ತಿಳಿಸಿದೆ. ಹಾಗೇ ಪ್ರಾಣಿಗಳ ರಕ್ಷಣೆಗಾಗಿ ಸುಮಾರು 32 ಕಿ.ಮೀ.ಉದ್ದದ ಕೃತಕ ಗುಡ್ಡಗಾಡು ಪ್ರದೇಶ  ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಈ ಪ್ರಸ್ತಾವನೆಯನ್ನು ರಾಜ್ಯಸರ್ಕಾರ ಕೇಂದ್ರ ಸರ್ಕಾರದ ಎದುರು ಇಟ್ಟಿತ್ತು. ಅದಕ್ಕೆ ಕೇಂದ್ರ ಅಸ್ತು ಎಂದಿದೆ.

ರಾಜ್ಯದ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಎಲ್ಲ ರೀತಿಯ ಅಗತ್ಯ ನೆರವನ್ನೂ ನೀಡುವುದಾಗಿ ಪ್ರಧಾನಿ ಮೋದಿಯವರು ಭರವಸೆ ನೀಡಿದ್ದಾರೆಂದು ಆಸ್ಸಾಂ ಮುಖ್ಯಮಂತ್ರಿ ಟ್ವೀಟ್​ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net