

ತೆಲಂಗಾಣ: ಏ.7ರ ನಂತರ ತೆಲಂಗಾಣ ಕರೊನಾ ವೈರಸ್ ಮುಕ್ತವಾಗುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಈ ಹಿಂದೆ ಹೇಳಿದ್ದರು. ಆದರೆ ಅವರ ಲೆಕ್ಕಾಚಾರವನ್ನೆಲ್ಲ ಬುಡಮೇಲು ಮಾಡಿದ್ದು ತಬ್ಲಿಘಿ ಜಮಾತ್ ಧಾರ್ಮಿಕ ಸಮಾವೇಶ.
ಸದ್ಯ ತೆಲಂಗಾಣದಲ್ಲಿ ಇರುವ ಕರೊನಾ ಸೋಂಕಿತರದಲ್ಲಿ ಶೇ.85ರಷ್ಟು ಮಂದಿ ದೆಹಲಿಯ ನಿಜಾಮುದ್ದೀನ್ ಮರ್ಖಜ್ನಲ್ಲಿ ನಡೆದಿದ್ದ ತಬ್ಲಿಘಿ ಜಮಾತ್ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡವರು ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ.
ತೆಲಂಗಾಣ ಆರೋಗ್ಯ ಸಚಿವ ಇಟಾಲ ರಾಜೇಂದ್ರ ಅವರು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ತೆಲಂಗಾಣದಿಂದ ವರದಿಯಾದ ಕರೊನಾ ಸೋಂಕಿತರಲ್ಲಿ ಶೇ.85 ಮಂದಿ ದೆಹಲಿ ನಿಜಾಮುದ್ದೀನ್ ಮರ್ಖಜ್ನಿಂದ ಬಂದವರು ಎಂದು ಮಾಹಿತಿ ನೀಡಿದ್ದಾರೆ.
ಅವರ ಆರೋಗ್ಯದಲ್ಲಿ ಚೇತರಿಕೆ ಕಂಡರೆ ರಾಜ್ಯದಲ್ಲಿ ಕರೊನಾ ಇಳಿಮುಖವಾಗಲಿದೆ. ಸೋಂಕು ಪ್ರಸರಣವಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ತೆಲಂಗಾಣದಲ್ಲಿ ಒಟ್ಟು 8500 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಅವರಲ್ಲಿ 471 ಮಂದಿಯಲ್ಲಿ ಪಾಸಿಟಿವ್ ವರದಿ ಬಂದಿದೆ. 12 ಮಂದಿ ಮೃತಪಟ್ಟಿದ್ದಾರೆ. ಹಾಗೇ 45 ಜನ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ ಎಂದು ಇಟಾಲ ರಾಜೇಂದ್ರ ತಿಳಿಸಿದ್ದಾರೆ. (ಏಜೆನ್ಸೀಸ್)