

| ಮೃತ್ಯುಂಜಯ ಕಪಗಲ್ ಬೆಂಗಳೂರು
ಮಹಿಳಾ ಉದ್ಯಮಿಗಳಿಗೆ ವಿಭಾಗ ಮಟ್ಟದ ವಾರ್ಷಿಕ ಮೇಳ, ಇ-ಮಾರುಕಟ್ಟೆ ಸೌಲಭ್ಯ, ವರದಾ-ಬೇಡ್ತಿ ನದಿಗಳ ಜೋಡಣೆ, ಸಿರಿಧಾನ್ಯಗಳಿಗೆ ವೈಜ್ಞಾನಿಕ ಮಾರುಕಟ್ಟೆ, ಏತ ನೀರಾವರಿ ಯೋಜನೆಗಳ ವ್ಯವಸ್ಥಿತ ನಿರ್ವಹಣೆ ಹಾಗೂ ಕಾರ್ಯಾಚರಣೆಗೆ ಕಾರ್ಯನೀತಿ ಸೇರಿ 82 ಯೋಜನೆಗಳು ಇನ್ನೂ ಜಾರಿಯಾಗಿಲ್ಲ. ಅಲ್ಲದೆ, ವಿವಿಧ ಕಾರಣಗಳಿಗಾಗಿ 7 ಯೋಜನೆಗಳನ್ನು ಕೈಬಿಡಲಾಗಿದೆ.
ಪ್ರಸಕ್ತ ಆರ್ಥಿಕ ವರ್ಷ (2021-22)ದ ಬಜೆಟ್ನಲ್ಲಿ ಘೋಷಿಸಿದ ಯೋಜನೆಗಳ ಸ್ಥಿತಿಯಿದು. ಅರ್ಧ ಹಣಕಾಸು ವರ್ಷ ಮುಗಿದಿದ್ದರೂ ಯೋಜನೆಗಳ ಅನುಷ್ಠಾನ ತೆವಳುತ್ತಾ ಸಾಗಿದೆ. ಸತತ ಎರಡು ವರ್ಷ ಕರೊನಾ ಉಪಟಳ, ಪದೇಪದೆ ಲಾಕ್ಡೌನ್ ದುಷ್ಪರಿಣಾಮವು ರಾಜ್ಯದ ಆರ್ಥಿಕತೆಗೆ ಹೊಡೆತ ನೀಡಿದ್ದು, ಅದರಿಂದ ಪೂರ್ಣ ಪ್ರಮಾಣದಲ್ಲಿ ಹೊರಬರಲು ಸಾಧ್ಯವಾಗಿಲ್ಲ. ಬಜೆಟ್ನಲ್ಲಿ ನಿರೀಕ್ಷಿಸಿದ ಆದಾಯ ಸಂಗ್ರಹಣೆ ಗುರಿ ಮುಟ್ಟುವುದು ಸದ್ಯಕ್ಕೆ ಕಷ್ಟ ಸಾಧ್ಯ. ಆದರೆ, ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ ಪರಿಸ್ಥಿತಿ ಸುಧಾರಿಸಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 2.11 ಲಕ್ಷ ಕೋಟಿ ರೂ. ಆದಾಯ ಸಂಗ್ರಹ ಗುರಿಯಿದ್ದು, 2021ರ ಸೆಪ್ಟೆಂಬರ್ ಅಂತ್ಯದವರೆಗೆ ಶೇ.45 ಹಣ ಬೊಕ್ಕಸಕ್ಕೆ ಸೇರಿದೆ.
ವಸ್ತುಸ್ಥಿತಿಗೆ ಕೈಗನ್ನಡಿ: ಹೊಸ ಹಾಗೂ ಮಾರ್ಪಡಿತ ಒಳಗೊಂಡು 192, ಮುಂದುವರಿದ 94 ಸೇರಿ 266 ಯೋಜನೆಗಳನ್ನು ಮುಂಗಡಪತ್ರದಲ್ಲಿ ಪ್ರಕಟಿಸಲಾಗಿದೆ. ಈ ಪೈಕಿ 177 ಯೋಜನೆಗಳ ಜಾರಿಗಾಗಿ ಆದೇಶ ಹೊರಡಿಸಿರುವುದು ವಸ್ತುಸ್ಥಿತಿಗೆ ಕೈನ್ನಡಿಯಾಗಿದೆ. ಯೋಜನೆಗಳ ಅನುಷ್ಠಾನಕ್ಕೆ ಪೂರಕವಾಗಿ ಯೋಜನೆ ಇಲಾಖೆ 102 ಕಡತಗಳನ್ನು ಸ್ವೀಕರಿಸಿ, 101ಕ್ಕೆ, ಆರ್ಥಿಕ ಇಲಾಖೆ ಸ್ವೀಕರಿಸಿದ 96 ಕಡತಗಳಲ್ಲಿ 84ಕ್ಕೆ ಅನುಮೋದನೆ ನೀಡಿದೆ ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಪ್ರಗತಿ ಅಬಾಧಿತ: ಬದ್ಧತಾ ವೆಚ್ಚಗಳ ಪೈಕಿ ವೇತನ, ಪಿಂಚಣಿ, ಸಾಲದ ಕಂತುಗಳು ಹಾಗೂ ಬಡ್ಡಿ ಮರು ಪಾವತಿ, ಸಾಮಾಜಿಕ ಭದ್ರತಾ ಯೋಜನೆಗಳ ಪೂರ್ಣ ಪ್ರಮಾಣದ ಪ್ರಗತಿ ಅಬಾಧಿತವಾಗಿದೆ. ಪ್ರಸ್ತುತ ಆರ್ಥಿಕ ವರ್ಷದ ಒಟ್ಟು ಬಜೆಟ್ ಗಾತ್ರ 2,46,267 ಕೋಟಿ ರೂ.ಗಳಾಗಿದ್ದು, ವೇತನ ಮತ್ತು ಪಿಂಚಣಿಗಾಗಿ 81 ಸಾವಿರ ಕೋಟಿ ರೂ. ಅಧಿಕ ವೆಚ್ಚವಾಗಲಿದೆ. ತುರ್ತು ಅಗತ್ಯ ಹಾಗೂ ಕಾಲಮಿತಿಯೊಳಗೆ ಕಡ್ಡಾಯ ಜಾರಿಗೆ ತರಬೇಕಾದ ಕಾರ್ಯಕ್ರಮಗಳಿಗೆ ಅನುವಾಗಲೆಂದು ಆರ್ಬಿಐ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಈಗಾಗಲೆ 4,000 ಕೋಟಿ ರೂ. ಸಾಲ ಎತ್ತುವಳಿಯಾಗಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ಹೇಳಿವೆ.
ವಿನಿಯೋಗವೂ ಮಂದ: ಘೋಷಿಸಿದ ವಿವಿಧ ಅಭಿವೃದ್ಧಿ ಯೋಜನೆಗಳು, ಮುಂದುವರಿದ ಕಾರ್ಯಕ್ರಮಗಳಿಗೆ 2,16,730.84 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ. ಇದರಲ್ಲಿ ಸೆಪ್ಟೆಂಬರ್ವರೆಗೆ 77,883.77 ಕೋಟಿ ರೂ. ವೆಚ್ಚವಾಗಿದ್ದು, ಶೇ.35.94 ಪ್ರಗತಿ ಸಾಧಿಸಲಾಗಿದೆ. ಬಿಡುಗಡೆಯಾಗಿದ್ದರಲ್ಲಿ ಇನ್ನೂ 21,331.65 ಕೋಟಿ ರೂ. ಖರ್ಚಾಗಿಲ್ಲ. ವಿಸõತ ಯೋಜನಾ ವರದಿ ತಯಾರಿ, ಆಡಳಿತ, ಆರ್ಥಿಕ ಮತ್ತು ತಾಂತ್ರಿಕ ಅನುಮೋದನೆ ಇತ್ಯಾದಿ ಕಾರಣಗಳಿಗೆ ಅನುದಾನ ವಿನಿಯೋಗವೂ ಮಂದಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಬಜೆಟ್ ಯೋಜನೆಗಳ ಜಾರಿಯಲ್ಲಿ ಇಂಧನ ಇಲಾಖೆ ಶೇ.50 ಪ್ರಗತಿ ಸಾಧಿಸಿದ್ದರೆ, ಪಶು ಸಂಗೋಪನೆ, ಉನ್ನತ ಶಿಕ್ಷಣ, ನಗರಾಭಿವೃದ್ಧಿ, ಗೃಹ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗಳ ಸಾಧನೆ ಶೇ.40ರ ಆಸುಪಾಸಿನಲ್ಲಿದೆ. ಜಲಸಂಪನ್ಮೂಲ, ಕೃಷಿ, ವಸತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳು ಶೇ.20 ಪ್ರಗತಿ ಕೂಡ ಕಂಡಿಲ್ಲ. ಶೇ.30ರಿಂದ 40ರೊಳಗೆ ಸಾಧನೆ ಮಾಡಿದ ಪಟ್ಟಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಣ್ಣ ನೀರಾವರಿ, ಲೋಕೋಪಯೋಗಿ, ಸಮಾಜ ಕಲ್ಯಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳಿವೆ.