3 ತಿಂಗಳಲ್ಲಿ 8,000 ಕೋಟಿ ರೂ. ಸಾಲ: ಕರೊನಾದಿಂದ ತೆರಿಗೆ ಸಂಗ್ರಹ ಕುಸಿತ, ಸರ್ಕಾರಕ್ಕೆ ಹೊಡೆತ

Vidhana Soudha
Published on

ಬೆಂಗಳೂರು: ಕರೊನಾದಿಂದಾಗಿ ತೆರಿಗೆ ಸಂಗ್ರಹಣೆ ಕುಸಿದಿದ್ದು, ಅದರಿಂದ ಉಂಟಾಗಿರುವ ಆರ್ಥಿಕ ಸಂಕಷ್ಟ ಸರಿದೂಗಿಸಲಿಕೊಳ್ಳಲು ಮೊದಲ ತ್ರೖೆಮಾಸಿಕದಲ್ಲಿ 8,000 ಕೋಟಿ ರೂ. ಸಾಲವನ್ನು ಆರ್​ಬಿಐನಿಂದ ರಾಜ್ಯ ಸರ್ಕಾರ ಪಡೆದಿದೆ.

ರಾಜ್ಯ ಅಭಿವೃದ್ಧಿ ಸಾಲವನ್ನು ಆರ್​ಬಿಐನಿಂದ ವಿವಿಧ ಬಡ್ಡಿ ದರದಲ್ಲಿ 3 ತಿಂಗಳಿನಲ್ಲಿ 7 ಬಾರಿ ಪಡೆದಿದ್ದು, ಆರ್ಥಿಕ ವರ್ಷಾರಂಭದಲ್ಲಿಯೇ ಇಷ್ಟು ಪ್ರಮಾಣದ ಸಾಲ ಪಡೆದಿರುವುದು ಇದೇ ಮೊದಲು ಎಂದು ಹಣಕಾಸು ಇಲಾಖೆ ಮೂಲಗಳು ಹೇಳುತ್ತವೆ.

ರಾಜ್ಯದ ಸ್ವಂತ ತೆರಿಗೆ ಪ್ರತಿ ತಿಂಗಳು 9,333 ಕೋಟಿ ರೂ. ಸಂಗ್ರಹವಾಗಬೇಕು. ಆದರೆ, ಈಗಿನ ಸಂಗ್ರಹ ಸರಾಸರಿ 6,268 ಕೋಟಿ ರೂ. ಮಾತ್ರ. ಇದರಿಂದಾಗಿ 3 ತಿಂಗಳ ಅವಧಿಯಲ್ಲಿ ಸುಮಾರು 9,000 ಕೋಟಿ ರೂ. ನಷ್ಟ ಸಂಭವಿಸಿದೆ.

ಆರ್ಥಿಕ ವರ್ಷಾರಂಭದ ಏಪ್ರಿಲ್ 7ಕ್ಕೆ ಮೊದಲ ಬಾರಿ 1,000 ಕೋಟಿ ರೂ. ಅನ್ನು ಸರ್ಕಾರ ಸಾಲವಾಗಿ ಪಡೆದಿದೆ. ಅಲ್ಲಿಂದ 7 ಬಾರಿ 5ರಿಂದ 11 ವರ್ಷಗಳ ಮರು ಪಾವತಿಯ ಅವಧಿ ಹಾಗೂ ಶೇ. 5.7ರಿಂದ 7.93 ಬಡ್ಡಿ ದರದಲ್ಲಿ ಸಾಲ ಪಡೆಯಲಾಗಿದೆ. ಕಡಿಮೆ ಬಡ್ಡಿ ಹಾಗೂ ಆಯವ್ಯಯದಲ್ಲಿ ವಿಧಿಸಿಕೊಂಡಿರುವ ಮಿತಿಯೊಳಗೆ ಸಾಲ ಮಾಡಲಾಗಿದೆ ಎಂದು ಹಣಕಾಸು ಇಲಾಖೆ ಮೂಲಗಳು ತಿಳಿಸಿವೆ.

ತೆರಿಗೆ ಸಂಗ್ರಹಣೆ ಕಡಿಮೆಯಾಗಿರುವ ಪರಿಣಾಮ ಸರ್ಕಾರದ ಮೇಲೆ ಉಂಟಾಗಿರುವ ಆರ್ಥಿಕ ಹೊರೆ ತಪ್ಪಿಸಿಕೊಳ್ಳಲು ಸಾಲದ ಹೊರತು ಬೇರೆ ಮಾರ್ಗವೇ ಇಲ್ಲ. ಆದ್ದರಿಂದಲೇ ಆರ್​ಬಿಐನಿಂದ ಸಾಲ ಮಾಡಿದ್ದು, ಬೇರೆ ಕಡೆ ಸಾಲಕ್ಕೆ ಹೋಗಿಲ್ಲ. ಸರ್ಕಾರಿ ನೌಕರರ ವೇತನ, ಪಿಂಚಣಿ, ವಿವಿಧ ಸಹಾಯಧನ, ಕರೊನಾಕ್ಕೆ ಔಷಧ ಹಾಗೂ ಚಿಕಿತ್ಸಾ ಉಪಕರಣಗಳ ಖರೀದಿ ಹೀಗೆ ವೆಚ್ಚ ಹೆಚ್ಚುತ್ತಿದ್ದು, ಸಾಲ ಮಾಡಲೇಬೇಕಾದ ಅನಿವಾರ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net