ಜಯನಗರ ಪಾಲಿಕೆ ಆರೋಗ್ಯ ಕೇಂದ್ರದಲ್ಲಿ 80 ಟ್ಯಾಬ್ ಕಳ್ಳತನ

bbmp office
Published on

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಮತ್ತು ಕಿರಿಯ ಮಹಿಳಾ ಆರೋಗ್ಯಾಧಿಕಾರಿಗಳಿಗೆ ವಿತರಿಸಲು ಬಿಬಿಎಂಪಿ ಖರೀದಿಸಿದ್ದ ಮೌಲ್ಯ 24.80 ಲಕ್ಷ ರೂ. ಮೌಲ್ಯದ 80 ಟ್ಯಾಬ್‌ಗಳು ಕಳ್ಳತನವಾಗಿವೆ.

ಈ ಕುರಿತು ಜಯನಗರ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಎನ್. ಪ್ರಮೋದ್, ಸಿದ್ದಾಪುರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಯನಗರ ಆರೋಗ್ಯ ಕೇಂದ್ರ ದಕ್ಷಿಣ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಮತ್ತು ಕಿರಿಯ ಮಹಿಳಾ ಆರೋಗ್ಯಾಧಿಕಾರಿಗಳಿಗೆ ನೀಡಲು ಇಲಾಖೆಯಿಂದ ಲೆನೆವ ಕಂಪನಿಯಿಂದ 240 ಟ್ಯಾಬ್‌ಗಳನ್ನು ಖರೀದಿಸಿದ್ದರು. ಇವುಗಳನ್ನು ಜಯನಗರ ಆರೋಗ್ಯ ಕೇಂದ್ರ ದಕ್ಷಿಣ ವಲಯದಲ್ಲಿ ತಾತ್ಕಾಲಿಕ ಗೋದಾಮಿನಲ್ಲಿ ಸಂಗ್ರಹಿಸಲಾಗಿತ್ತು.

240 ಟ್ಯಾಬ್‌ಗಳ ಪೈಕಿ 100 ಟ್ಯಾಬ್‌ಗಳನ್ನು ಹಂಚಿಕೆ ಮಾಡಿದ್ದು, ಉಳಿದವುಗಳನ್ನು ಜು. 7ರ ಮಧ್ಯಾಹ್ನ ಗೋದಾಮಿನಲ್ಲಿ ಸಂಗ್ರಹಿಸಿದ್ದರು. ಮಾರನೇ ದಿನ ಬೆಳಗ್ಗೆ 10.30ಕ್ಕೆ ಉಳಿದ ಟ್ಯಾಬ್‌ಗಳನ್ನು ಹಂಚಿಕೆ ಮಾಡಲು ಗೋದಾಮಿಗೆ ಹೋಗಿ ನೋಡಿದಾಗ 80 ಟ್ಯಾಬ್ ಮತ್ತು 2 ಬ್ಯಾಟರಿಗಳು ಕಳವಾಗಿದ್ದವು. ಉಳಿದ 60 ಟ್ಯಾಬ್‌ಗಳು ಅಲ್ಲಿಯೇ ಇದ್ದವು. ಸರ್ಕಾರದ ವತಿಯಿಂದ ಪೂರೈಕೆಯಾಗಿದ್ದ 80 ಟ್ಯಾಬ್‌ಗಳನ್ನು ಅಪರಿಚಿತ ವ್ಯಕ್ತಿಗಳು ಕಳವು ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆಸ್ಪತ್ರೆಯ ಸಿಸಿ ಕ್ಯಾಮರಾ ಮತ್ತು ಅಕ್ಕಪಕ್ಕದ ಕ್ಯಾಮರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಪರಿಚಿತ ವ್ಯಕ್ತಿಗಳ ಕೈವಾಡ ಇರುವುದು ಗೊತ್ತಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net