

ನವದೆಹಲಿ: ದೇಶದಲ್ಲಿ ಪಿಡುಗಾಗಿ ಹಬ್ಬುತ್ತಿರುವ ಸೈಬರ್ ಅಪರಾಧಗಳಿಗೆ ಕಡಿವಾಣ ಹೇರಲು ಸಂಕಲ್ಪ ಮಾಡಿರುವ ಕೇಂದ್ರ ಸರ್ಕಾರ, ಅದಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದುವರೆಗೆ ಅದು 80 ಲಕ್ಷಕ್ಕೂ ಅಧಿಕ ಸಿಮ್ ಕಾರ್ಡ್ಗಳನ್ನು ನಿಷ್ಕ್ರಿಯಗೊಳಿಸಿದೆ ಮತ್ತು ಲಕ್ಷಾಂತರ ಮೊಬೈಲ್ ಸಂಖ್ಯೆಗಳನ್ನು ಬ್ಲಾಕ್ ಮಾಡಿದೆ.
ಸೈಬರ್ ಅಪರಾಧಗಳು ಮತ್ತು ವಂಚನೆಗಳು ತುಂಬಿರುವ ಜಗತ್ತಿನಲ್ಲಿ ಬಳಕೆದಾರರು ಸುರಕ್ಷಿತವಾಗಿ ರಲು ಇದು ನೆರವಾಗಲಿದೆ. ಹುಸಿ ದಾಖಲೆಪತ್ರಗಳನ್ನು ಹಾಜರುಪಡಿಸಿ ಪಡೆದ ಸಿಮ್ ಕಾರ್ಡ್ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ದೂರಸಂಪರ್ಕ ಇಲಾಖೆ (ಡಿಒಟಿ), ಕೃತಕ ಬುದ್ಧಿಮತ್ತೆ (ಎಐ) ಸಾಧನಗಳನ್ನು ಬಳಸಿ ನಕಲಿ ಸಿಮ್ ಕಾರ್ಡ್ಗಳನ್ನು ಗುರುತಿಸಿದೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಕೆಯಾಗದಂತೆ ಅಂಥ ಸಿಮ್ಗಳನ್ನು ನಿಷ್ಕ್ರಿಯಗೊಳಿಸಿದೆ.
ನಕಲಿ ಸಿಮ್ಳಲ್ಲದೆ, ಸೈಬರ್ ಅಪರಾಧಗಳಲ್ಲಿ ನೇರವಾಗಿ ಒಳಗೊಂಡಿರುವ 6.78 ಲಕ್ಷ ಮೊಬೈಲ್ ಸಂಖ್ಯೆಗಳನ್ನೂ ಸರ್ಕಾರ ಬ್ಲಾಕ್ ಮಾಡಿದೆ. ಡಿಜಿಟಲ್ ವಂಚನೆ ವಿರುದ್ಧದ ವಿಶಾಲ ಕಾರ್ಯಾಚರಣೆಯ ಭಾಗವಾಗಿ ಸರ್ಕಾರ ಈ ಕ್ರಮಗಳನ್ನು ಕೈಗೊಂಡಿದೆ. ಜನರಿಗೆ ಸುರಕ್ಷಿತ ದೂರಸಂಪರ್ಕ ಸೇವೆಗಳನ್ನು ಒದಗಿಸುವುದಕ್ಕೆ ಸರ್ಕಾರದ ಬದ್ಧತೆಯನ್ನು ಇದು ತೋರಿಸುತ್ತದೆ. ನಕಲಿ ದಾಖಲೆಪತ್ರಗಳನ್ನು ಬಳಸಿ ಮೊಬೈಲ್ ನಂಬರ್ಗಳನ್ನು ಪತ್ತೆ ಮಾಡಲು ಡಿಒಟಿ ಎಐ ಆಧಾರಿತ ಸಾಧನಗಳನ್ನು ಬಳಸಿಕೊಂಡಿದೆ. ಇದರಿಂದ 78.33 ಲಕ್ಷ ನಕಲಿ ಮೊಬೈಲ್ ಸಂಖ್ಯೆಗಳನ್ನು ಗುರುತಿಸಲು ಸಾಧ್ಯವಾಗಿದ್ದು ಈಗ ಅವುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಇಲಾಖೆ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಮಾಹಿತಿಗಳನ್ನು ಹಂಚಿಕೊಂಡಿದೆ.
ಹಣಕಾಸು ವಂಚನೆ ಮತ್ತು ಡಿಜಿಟಲ್ ಹಗರಣ ಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಅನೇಕ ಅಂತಾರಾಷ್ಟ್ರೀಯ ವಾಟ್ಸಾಪ್ ಸಂಖ್ಯೆಗಳ ವಿರುದ್ಧವೂ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.
ಸೈಬರ್ಕ್ರೖೆಂ ಹೆಲ್ಪ್ಲೈನ್ ಸಂಖ್ಯೆ 1930, ದೂರುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದರಿಂದ 10 ಲಕ್ಷ ಜನರ 3,500 ಕೋಟಿ ರೂ.ಗಳನ್ನು ರಕ್ಷಿಸಲು ಸಾಧ್ಯವಾಗಿದೆ.