

ಚಿತ್ರದುರ್ಗ: ನಗರದ ಸದಾನಂದಯ್ಯ ಲೇಔಟ್ ತ್ರಿಶೂಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಶ್ರೀ ಜೋಳ ಸಿದ್ಧಿವಿನಾಯಕ ಹಾಗೂ ಶ್ರೀ ಹುಲಿದೋಣಿ ಸಂಗಮೇಶ್ವರ ದೇವಾಲಯಗಳ ಲೋಕಾರ್ಪಣೆ ಹಾಗೂ ಪ್ರತಿಷ್ಠಾಪನಾ ಮಹೋತ್ಸವ ಫೆ.8ರಿಂದ 10ರವರೆಗೆ ನಡೆಯಲಿದೆ.
8ರಂದು ಬೆಳಗ್ಗೆ 8ಕ್ಕೆ ಕಳಸದೊಂದಿಗೆ ದೇವರಮೂರ್ತಿಗಳಿಗೆ ಶ್ರೀ ಕ್ಷೇತ್ರ ಕೂಡಲಹಳ್ಳಿ ಸಂಗಮೇಶ್ವರ ಸನ್ನಿಧಾನ, ವೇದಾವತಿ ಮತ್ತು ಸುವರ್ಣಮುಖಿ ನದಿಗಳ ಸಂಗಮ ಸ್ಥಾನದಲ್ಲಿ ಗಂಗಾಪೂಜೆ ನೆರವೇರಿಸಲಾಗುವುದು.
ಮಧ್ಯಾಹ್ನ 3ಕ್ಕೆ ರೈಲ್ವೆ ಸ್ಟೇಷನ್ ಬಳಿಯ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಿಂದ ತ್ರಿಶೂಲಾಂಜನೇಯಸ್ವಾಮಿ ದೇವಾಲಯ ದವರೆಗೆ ದೇವರಮೂರ್ತಿಗಳ ಭವ್ಯ ಮೆರವಣಿಗೆ ನಡೆಯಲಿದೆ.
9ರಂದು ಬೆಳಗ್ಗೆ 8ಕ್ಕೆ ಗಣಪತಿ, ಪಂಚಕಳಸ, ಉಮಾಮಹೇಶ್ವರ, ನವಗ್ರಹ ಪೂಜೆ, ಹೋಮ, ಸಂಜೆ 6 ಕ್ಕೆ ಶ್ರೀ ಜೋಳಸಿದ್ಧಿವಿನಾಯಕ, ಶ್ರೀ ಸಂಗಮೇಶ್ವರ ಹಾಗೂ ಶ್ರೀ ನಂದಿ ವಿಗ್ರಹಗಳ ಸ್ಥಾಪನೆ, ಸಂಜೆ 7ಕ್ಕೆ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
10 ರಂದು ಬೆಳಗ್ಗೆ 4.35ರಿಂದ 6ರವರೆಗೆ ದೇವರ ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ಬೆಳಗ್ಗೆ 9ರಿಂದ 10.30ರವರೆಗೆ ಕಳಸಾರೋಹಣ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 12ಕ್ಕೆ ಧಾರ್ಮಿಕ ಸಮಾರಂಭ ನಡೆಯಲಿದೆ.
ಕೊಟ್ಟೂರು ಕಟ್ಟಿಮನೆ ಹಿರೇಮಠದ ಶ್ರೀ ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಸದ್ಗುರು ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಉದ್ಯಮಿ ಮಾಗನೂರು ಚನ್ನಬಸವನಗೌಡ್ರು, ಇತಿಹಾಸ ಸಂಶೋಧಕ ಬಿ. ರಾಜಶೇಖರಪ್ಪ ಆಗಮಿಸಲಿದ್ದಾರೆ. ನಗರಸಭೆ ಸದಸ್ಯ ವೆಂಕಟೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 12.30ರಿಂದ ಅನ್ನಸಂತರ್ಪಣೆ ಇರುತ್ತದೆ ಎಂದು ದೇವಾಲಯ ಸಮಿತಿ ಕಾರ್ಯದರ್ಶಿ ಜಿ.ಎಸ್. ಸಂಪತ್‌ಕುಮಾರ್ ತಿಳಿಸಿದ್ದಾರೆ.