

ಕೋಲಾರ: ಅಕ್ರಮವಾಗಿ ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ 8 ಮಂದಿಯನ್ನು ಬಂಧಿಸಿ, 20,580 ಕೆಜಿ ಗಾಂಜಾವನ್ನು ನಗರದ ಗಲ್ಪೇಟೆ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಟಮಕ ಕೈಗಾರಿಕಾ ಪ್ರದೇಶದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಗಾಂಜಾ ಸಾಗಿಸುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಗಲ್ಪೇಟೆ ವೃತ್ತ ನಿರೀಕ್ಷಕ ಲೋಕೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಕಾರು ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ.
ಹರಿಯಾಣದ ಮೊಹಮ್ಮದ್ ಆಜಾದ್ (45), ವಾರಿಸ್ ಬಿನ್ (30), ರಾಜು (32) ಮುಬಾರಕ್ (32), ಹಸೀನ್ (20), ಜಾವಿದ್ (26), ರಾಹಿಲ್ (28) ರಾಜಸ್ಥಾನದ ಮೊಹಮ್ಮದ್ ಅಪ್ಸರ್ (30) ಅವರನ್ನು ಬಂಧಿಸಿ ನ್ಯಾಯಾಲಯ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನು ಪ್ರಮುಖ ಆರೋಪಿಗಳಾದ ಕೋಲಾರ ನಗರದ ಬ್ಯಾಮತ್ ಬಿ ದರ್ಗಾ ನಿವಾಸಿ ನಿಜಾಮುದ್ಧೀನ್ ಮತ್ತು ಮುಬಾರಕ್ ತಲೆಮರಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
ವಾಹನದಲ್ಲಿ ಹೊರರಾಜ್ಯಗಳ ನೋಂದಣೆ ಸಂಖ್ಯೆ ನಂಬರ್ ಪ್ಲೇಟ್ ಆಧಾರದ ಮೇರೆಗೆ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಹೊರರಾಜ್ಯಗಳಲ್ಲಿ ಹಸುಗಳ ಕಳವು ಮಾಡುವುದು ಹಾಗೂ ಗಾಂಜಾ ಸಾಗಾಟ, ಮಾರಾಟ ಸಮಯದಲ್ಲಿ ನಂಬರ್ ಪ್ಲೇಟ್ ಬದಲಾಯಿಸಿ ಕೃತ್ಯ ಎಸಗುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿವೈಎಸ್ಪಿ ಎಚ್.ಎಂ.ನಾಗ್ತೆ, ಸಿಪಿಐ ಎಂ.ಜೆ.ಲೋಕೇಶ್, ಪಿಎಸ್ಐ ವಿಠ್ಠಲ್ ವೈ.ತಳವಾರ್ ಸೇರಿ ಸಿಬ್ಬಂದಿ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಶ್ಲಾಘಿಸಿದ್ದಾರೆ.