ದಿನಕ್ಕೆ 8-9 ಗಂಟೆ ಮಾತ್ರ ಕೆಲಸ ಸೂಕ್ತ; ಇಲ್ಲದಿದ್ದರೆ ಉತ್ಪಾದಕತೆ ಕುಂಠಿತ

ವಿಜಯವಾಣಿ (5)
Published on
  • ಇಲ್ಲದಿದ್ದರೆ ಉತ್ಪಾದಕತೆ ಕುಂಠಿತ
  • ಸೆರಮ್ ಸಿಇಒ ಪೂನಾವಾಲಾ ಅಭಿಮತ

ಮುಂಬೈ: ಮನುಷ್ಯರು ದಿನಕ್ಕೆ 8ರಿಂದ 9 ಗಂಟೆ ಮಾತ್ರ ಕೆಲಸ ಮಾಡಬಹುದು. ಅದಕ್ಕಿಂತ ಹೆಚ್ಚಾದರೆ ಅವರ ಕೆಲಸದ ಗುಣಮಟ್ಟ ಮತ್ತು ಉತ್ಪಾದಕತೆ (ಪ್ರೊಡಕ್ಟಿವಿಟಿ) ಕುಂಠಿತಗೊಳ್ಳುತ್ತದೆ ಎಂದು ಸೆರಮ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅದಾರ್ ಪೂನಾವಾಲಾ ಹೇಳಿದ್ದಾರೆ. ‘ಯಾವಾಗಲಾದರೂ ಒಮ್ಮೆ ವಾರಕ್ಕೆ 70 ಅಥವಾ 90 ಗಂಟೆ ಕೆಲಸ ಮಾಡಬಹುದು. ನಾನು ಮತ್ತು ನನ್ನ ಸಿಬ್ಬಂದಿ ಕೂಡ ಮಾಡುತ್ತಾರೆ. ಆದರೆ ಪ್ರತಿದಿನವೂ ಹೆಚ್ಚು ಹೊತ್ತು ಕೆಲಸ ಮಾಡುವುದು ಸಾಧ್ಯವಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

‘ನಾನು ಕನಿಷ್ಠ 8 ಗಂಟೆ ಕೆಲಸ ಮಾಡುತ್ತೇನೆ. ಅಗತ್ಯ ಬಿದ್ದರೆ ವಾರಾಂತ್ಯದಲ್ಲೂ ಕೆಲಸ ಮಾಡುತ್ತೇನೆ. ಕೋವಿಡ್ ಸಮಯದಲ್ಲಿ ದಿನಕ್ಕೆ 16 ಗಂಟೆಗಳ ಕಾಲ ಕೆಲಸ ಮಾಡಿದ್ದೇನೆ. ಬೆಳಗ್ಗೆ ಕಚೇರಿಗೆ ಹೋದವನು ರಾತ್ರಿ 11 ಗಂಟೆಗೆ ಮನೆಗೆ ಬರುತ್ತಿದ್ದೆ. ಅದೆಲ್ಲವೂ ನಾವು ಬದುಕಿನ ಯಾವ ಹಂತದಲ್ಲಿದ್ದೇವೆ ಎಂಬುದನ್ನು ಅವಲಂಬಿಸಿರುತ್ತದೆ. ಬಿಜಿನೆಸ್ ಬೆಳೆಸುವಾಗ ಕಠಿಣ ಶ್ರಮ, ಹೆಚ್ಚುವರಿ ಸಮಯ ಅಗತ್ಯವಾಗುತ್ತದೆ. ಹೆಚ್ಚಿನ ಅವಧಿ ಕೆಲಸ ಮಾಡುವುದಕ್ಕಿಂತ ಗುಣಮಟ್ಟದ ಕೆಲಸ ಒಳ್ಳೆಯದು’ ಎಂದರು.

ಲಾರ್ಸೆನ್ ಆಂಡ್ ಟೂಬ್ರೊ ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ ಇತ್ತೀಚೆಗೆ ‘ಎಲ್ಲರೂ ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು’ ಎಂದು ಹೇಳಿದ್ದರು. ಅದಕ್ಕೆ ಮುನ್ನ ಇನ್​ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ, ‘ಎಲ್ಲರೂ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು’ ಎಂದು ಹೇಳಿದ್ದರು. ಈ ಹೇಳಿಕೆಗಳ ಹಿನ್ನೆಲೆಯಲ್ಲಿ ಕೆಲವು ತಿಂಗಳುಗಳಿಂದ ದೇಶಾದ್ಯಂತ ಕಚೇರಿ ಕಾರ್ಯಾವಧಿ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.

ಬೆಳಗ್ಗೆ 6.30ರಿಂದ ರಾತ್ರಿ 8.30ರವರೆಗೆ40 ವರ್ಷ ಕೆಲಸ ಮಾಡಿದ್ದೇನೆ!

ಇನ್​ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಸೋಮವಾರ ಮಾತ ನಾಡಿ, ‘ನಾನು ಬೆಳಗ್ಗೆ 6.30ಕ್ಕೆ ಕಚೇರಿಗೆ ಹೋಗಿ ರಾತ್ರಿ 8.30ಕ್ಕೆ ಮನೆಗೆ ಬರುತ್ತಿದ್ದೆ. ಹೀಗೆ 40 ವರ್ಷ ದುಡಿದಿದ್ದೇನೆ. ಇದೆಲ್ಲವೂ ಅವರವರ ವೈಯಕ್ತಿಕ ವಿಷಯ. ಒಬ್ಬರು ಇನ್ನೊಬ್ಬರ ಮೇಲೆ ಹೇರುವಂಥದ್ದಲ್ಲ. ನಾನು ಸಮಾಧಿ ಸೇರುವಾಗಲೂ ನನ್ನ ಅಭಿಪ್ರಾಯ ನನ್ನೊಂದಿಗೆ ಇರುತ್ತದೆ’ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net