ಬೆಡ್ ಖರೀದಿಸುವ ನೆಪದಲ್ಲಿ 8.35 ಲಕ್ಷ ಕನ್ನ

Mumbai man
Published on

ಬೆಂಗಳೂರು: ಒಎಲ್‌ಎಕ್ಸ್‌ನಲ್ಲಿ ಮಾರಾಟಕ್ಕೆ ಇಟ್ಟಿದ್ದ ಡಬಲ್ ಬೆಡ್ ವಿತ್ ಮ್ಯಾಟ್ರಸ್‌ನ್ನು ಖರೀದಿಸುವ ನೆಪದಲ್ಲಿ ಜಾಹೀರಾತು ನೀಡಿದ ವ್ಯಕ್ತಿಯಿಂದ 8.35 ಲಕ್ಷ ರೂ. ಪಡೆದು ಸೈಬರ್ ಕಳ್ಳರು ವಂಚಿಸಿದ್ದಾರೆ.

ವೈಟ್‌ಫೀಲ್ಡ್ ನಿವಾಸಿ ಜಿ. ಆದಿತ್ಯ ಎಂಬಾತ ವೈಟ್‌ಫೀಲ್ಡ್ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ಟೋಬರ್ 8ರಂದು ಆದಿತ್ಯ, ಒಎಲ್‌ಎಕ್ಸ್‌ನಲ್ಲಿ ಡಬಲ್ ಬೆಡ್ ವಿತ್ ಮ್ಯಾಟ್ರಸ್‌ನ್ನು 3 ಸಾವಿರ ರೂ.ಗೆ ಮಾರಾಟಕ್ಕೆ ಇಟ್ಟಿದ್ದರು. ಮಾರನೇ ದಿನ ರಾಜೇಶ್ ಕುಮಾರ್ ಎಂಬಾತ ಕರೆ ಮಾಡಿ ನಾನು ಶಿವಾಜಿನಗರದಲ್ಲಿ ಇರುವ ಸ್ಟಾರ್ ರ್ನಿಚರ್ ಅಂಗಡಿಯಿಂದ ಮಾತನಾಡುತ್ತಿದ್ದೆನೆ. ನಿಮ್ಮ ಡಬಲ್ ಬೆಡ್ ವಿತ್ ಮ್ಯಾಟ್ರಸ್ ಖರೀದಿಸಲು ಇಚ್ಛಿಸಿದ್ದೆನೆ. ಆದರೆ, ನಾನು ಯುಪಿಎ ಮತ್ತು ನಗದು ರೂಪದಲ್ಲಿ ವಹಿವಾಟು ಮಾಡುವುದಿಲ್ಲ. ಕೇವಲ ಪಿಓಎಸ್ ವರ್ಗಾವಣೆ ಮಾತ್ರ ಬಳಸುತ್ತೆನೆ ಎಂದು ಹೇಳಿದ್ದಾನೆ. ಇದಕ್ಕೆ ಆದಿತ್ಯ ಒಪ್ಪಿಕೊಂಡಾಗ ಮೊದಲು ಡೆಬಿಟ್ ಕಾರ್ಡ್‌ನಿಂದ 500 ರೂ. ವರ್ಗಾವಣೆ ಮಾಡಿದರೆ ನಿಮ್ಮ ಖಾತೆಗೆ ಸಾವಿರ ರೂ. ವಾಪಸ್ ಬರಲಿದೆ ಎಂದು ಆರೋಪಿ ನಂಬಿಸಿದ್ದ. ಇದಕ್ಕೆ ಒಪ್ಪಿದ ಆದಿತ್ಯ, 500 ರೂ. ವರ್ಗಾವಣೆ ಮಾಡಿದಾಗ ಅವರ ಖಾತೆಗೆ 1 ಸಾವಿರ ರೂ. ಜಮೆ ಆಗಿರುತ್ತದೆ.

ಇದಾದ ಮೇಲೆ ಆದಿತ್ಯ ಕಡೆಯಿಂದ ಆರೋಪಿ ರಾಜೇಶ್ ಕುಮಾರ್ ಹಂತ ಹಂತವಾಗಿ 8.35 ಲಕ್ಷ ರೂ. ವರ್ಗಾವಣೆ ಮಾಡಿಕೊಂಡಿದ್ದಾನೆ. ಒಮ್ಮೆಯೂ ವಾಪಸ್ ಅವರ ಖಾತೆಗೆ ಜಮೆ ಆಗಿಲ್ಲ. ಇದನ್ನು ಪ್ರಶ್ನಿಸಿದಾಗ ಈ ಬಾರಿ ಆಗಲಿದೆ. ತಾಂತ್ರಿಕ ಸಮಸ್ಯೆ ಆಗಿದೆ ಎಂದು ಹೇಳಿ ಹಣ ಲಪಟಾಯಿಸಿ ಸಂಪರ್ಕ ಕಡಿತ ಮಾಡಿಕೊಂಡಿದ್ದಾನೆ. ನೊಂದ ಆದಿತ್ಯ ಅವರು ವಂಚನೆಗೆ ಒಳಗಾಗಿರುವುದು ಗೊತ್ತಾಗಿ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net