7ರಿಂದ ಇಂದ್ರಧನುಷ್ ಲಸಿಕಾಕರಣ ಕಾರ್ಯಕ್ರಮ; ಡಿಎಚ್‌ಒ ಡಾ.ಸಲೀಂ ಮಾಹಿತಿ

Dr Saleem DHO Hospet
ಡಿಎಚ್‌ಒ ಡಾ.ಸಲೀಂ
Published on

ಹೊಸಪೇಟೆ: ಕೇಂದ್ರ ಸರ್ಕಾರದ ಇಂದ್ರಧನುಷ್ 5.0 ಲಸಿಕಾಕರಣ ಕಾರ್ಯಕ್ರಮವನ್ನು ಆ.7ರಿಂದ ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಲೀಂ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ತಗ್ಗಿಸಲು ಹಾಗೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಲಸಿಕಾಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹುಟ್ಟಿನಿಂದ 5 ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿಯರಿಗೆ ಲಸಿಕೆ ನೀಡಿ ತೀವ್ರತರ ಕಾಯಿಲೆಗಳನ್ನು ಹತೋಟಿಗೆ ತರಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ ನಾಯಕ ಮಾತನಾಡಿ, ಆ.7ರಿಂದ 12 ರವರೆಗೆ, ಸೆಪ್ಟೆಂಬರ್ 11 ರಿಂದ 16 ಮತ್ತು ಅಕ್ಷೋಬರ್ 9 ರಿಂದ 14ವರೆಗೆ ಮೂರು ಹಂತದಲ್ಲಿ ಲಸಿಕಾಕರಣ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಜಿಲ್ಲೆಯಲ್ಲಿ 5 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರ ಸಮೀಕ್ಷೆ ನಡೆಸಿ ಮಾಹಿತಿ ಪಡೆಯಲಾಗಿದೆ.

ಒಟ್ಟಾರೆ 4624 ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ತಾಲೂಕು ಮಟ್ಟದ ಅಧಿಕಾರಿಗಳಿಗೆ ಜಿಲ್ಲಾ ಮಟ್ಟದ ಟಾಸ್ಕ್‌ಫೋರ್ಸ್ ಸಭೆಯ ನಿರ್ದೇಶನ ನೀಡಲಾಗಿದೆ ಎಂದು ವಿವರಿಸಿದರು.

12 ವಿವಿಧ ರೋಗಗಳ ತಡೆಗೆ ಲಸಿಕೆ

ಮಕ್ಕಳಲ್ಲಿ ಕಾಣಿಸಿಕೊಳ್ಳುವ ದಡಾರ ರುಬೆಲ್ಲಾ ಸೇರಿದಂತೆ ಗಂಟಲುಮಾರಿ, ನಾಯಿಕೆಮ್ಮು, ಡಿಪ್ಟೀರಿಯಾ, ಹೆಪಟೈಟಿಸ್, ಹಿಬ್, ಧನುರ್ವಾಯು, ಬಾಲಕ್ಷಯ ರೋಗ, ನಿಮೊಕಾಕಲ್ ನಿಮೋನಿಯಾ, ರೂಟಾ ವೈರಸ್ ಹಾಗೂ ಮಿದುಳು ಜ್ವರ ಬಾಧಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮೂರು ಡೋಸ್‌ಗಳನ್ನು ನೀಡಲಾಗುತ್ತದೆ.

ಸರ್ಕಾರಿ ಆರೋಗ್ಯ ಕೇಂದ್ರ, ಉಪಕೇಂದ್ರ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಅಲ್ಲದೆ ಕೋ-ವಿನ್ ಮಾದರಿಯಲ್ಲಿ ಈ ಲಸಿಕೆಗೂ ನೋಂದಣಿ ಹಾಗೂ ಪ್ರಮಾಣ ಪತ್ರ ಪಡೆಯಲು ಅವಕಾಶ ಇದ್ದು, ಆಶಾ ಕಾರ್ಯಕರ್ತೆಯರ ಸಹಾಯದಿಂದ ಯು-ವಿನ್ ಪೋರ್ಟಲ್ ಮೂಲಕ ನೊಂದಣಿ ಮಾಡಿಕೊಳ್ಳಬಹುದು ಎಂದು ಡಿಎಚ್‌ಒ ಸಲೀಂ ತಿಳಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ, ಹೂವಿನಹಡಗಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಅರುಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net