7ರಂದು ಬೆಂಗಳೂರು ತಲುಪಲಿರುವ ಕೆಆರ್‌ಎಸ್ ಪಕ್ಷದ ಪಾದಯಾತ್ರೆ

7ರಂದು ಬೆಂಗಳೂರು ತಲುಪಲಿರುವ ಕೆಆರ್‌ಎಸ್ ಪಕ್ಷದ ಪಾದಯಾತ್ರೆ
Published on

   ಹಾಸನ: ಅತ್ಯಾಚಾರಕ್ಕೆ ಒಳಗಾಗಿ ದಾರುಣವಾಗಿ ಕೊಲೆಯಾದ ಸೌಜನ್ಯಾ ಪ್ರಕರಣದಲ್ಲಿ ಇಲ್ಲಿಯವರೆಗೂ ಯಾರಿಗೂ ಶಿಕ್ಷೆ ಆಗಿಲ್ಲ. ಈಕೆಯ ಮೇಲಿನ ದೌರ್ಜನ್ಯ ಖಂಡಿಸಿ ಕೆಆರ್‌ಎಸ್ ಪಕ್ಷವು ಆ.26ರಂದು ಬೆಳ್ತಂಗಡಿಯಿಂದ ಪಾದಯಾತ್ರೆ ಆರಂಭಿಸಿದ್ದು, ಸೆ.7ರಂದು ಬೆಂಗಳೂರು ತಲುಪಿ 8ರಂದು  ವಿಧಾನಸೌಧ ತಲುಪಲಿದೆ ಎಂದು ಪಕ್ಷದ ರಾಜ್ಯ ಸಂಚಾಲಕ ಎಸ್. ಮೂರ್ತಿ ತಿಳಿಸಿದರು.

ಪ್ರಕರಣದ ಪೊಲೀಸರ ತನಿಖಾ ರೀತಿಯ ಬಗ್ಗೆ ಸಾರ್ವಜನಿಕರು ತೀವ್ರ ಬೇಸರ ಹೊಂದಿದ್ದಾರೆ. ಈಗಿನ ವ್ಯವಸ್ಥೆಯಲ್ಲಿ ಬಡವರಿಗೆ ಮತ್ತು ದುರ್ಬಲರಿಗೆ ನ್ಯಾಯ ಸಿಗುವುದಿಲ್ಲ ಎನ್ನುವ ಅಭಿಪ್ರಾಯಕ್ಕೆ ಬಂದಿದ್ದಾರೆ. ಈ ಇಡೀ ಪ್ರಕರಣದ ಬಗ್ಗೆ ಬೆಳ್ತಂಗಡಿ, ಸುಳ್ಯ, ಪುತ್ತೂರು, ಮಂಗಳೂರು ಸೇರಿದಂತೆ ರಾಜ್ಯದ ಕರಾವಳಿ ಪ್ರದೇಶದಲ್ಲಿ ಮತ್ತು ರಾಜ್ಯದ ಇತರೆಡೆಯೂ ಸಂಘ-ಸಂಸ್ಥೆಗಳಿಂದ, ಸಾಮಾಜಿಕ ಹೋರಾಟಗಾರರಿಂದ ಪ್ರತಿಭಟನೆ ಮತ್ತು ಧರಣಿ ನಡೆಯುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಜನಸಾಮಾನ್ಯರು ನೋವು ಮತ್ತು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ದಿನೇದಿನೆ ರಾಜ್ಯದಲ್ಲಿ ಜನರು ವ್ಯವಸ್ಥೆಯ ಬಗ್ಗೆ ಭ್ರಮನಿರಸನ ಹೊಂದುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ಹೊರಹಾಕಿದರು.

ಕರ್ನಾಟಕ ರಾಜ್ಯ ಸಮಿತಿ ಪಕ್ಷದ ವತಿಯಿಂದ ಪಕ್ಷದ ಅಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಆ.26ರಂದು ಬೆಳ್ತಂಗಡಿಯಿಂದ ಪಾದಯಾತ್ರೆ ಆರಂಭಿಸಲಾಗಿದೆ. ಸುಮಾರು 330 ಕಿಲೋಮೀಟರ್‌ಗಳ ಈ ಪಾದಯಾತ್ರೆಯಲ್ಲಿ ಕೆಆರ್‌ಎಸ್ ಪಕ್ಷವು ಕರ್ನಾಟಕ ರಾಜ್ಯ ಸರ್ಕಾರಕ್ಕೆ ರಾಜ್ಯದ ಜನತೆಯ ಪರವಾಗಿ ಹಕ್ಕೊತ್ತಾಯಗಳನ್ನು ಮಂಡಿಸುತ್ತಿದೆ. ಸೌಜನ್ಯಾ ಹತ್ಯೆಯ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ತಕ್ಷಣವೇ ಮರುತನಿಖೆ ನಡೆಸಲು ಕ್ರಮಕೈಗೊಳ್ಳಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಪೊಲೀಸ್ ತನಿಖಾ ತಂಡ ರಚಿಸಿ ಪರ್ಯಾಯವಾಗಿ ಈಗಾಗಲೇ ತನಿಖೆ ಮಾಡಿರುವ ತನಿಖಾಧಿಕಾರಿಗಳನ್ನೂ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ 40000 ಮಹಿಳೆಯರು ನಾಪತ್ತೆ ಆಗಿದ್ದಾರೆ ಎಂದು ಇತ್ತೀಚೆಗೆ ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ. ಮಕ್ಕಳು ಹಾಗೂ ಮಹಿಳೆಯರ ಅಪಹರಣ, ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳ ತನಿಖೆಗೆ ರಾಜ್ಯದ ಸಿಐಡಿ ಇಲಾಖೆ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ/ ಇಲಾಖೆಯನ್ನು ಸೃಜಿಸಬೇಕು. ಈ ರೀತಿಯ ಎಲ್ಲಾ ಪ್ರಕರಣಗಳು ಈ ಇಲಾಖೆಯ ವ್ಯಾಪ್ತಿಗೆ ಬರಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ರಮೇಶ್ ಬೂವನಹಳ್ಳಿ, ಕಾರ್ಯದರ್ಶಿ ಸಂತೋಷ್ ಕುಮಾರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net