

ಬೆಂಗಳೂರು: ಕ್ರಿಸ್‌ಮಸ್ ರಜೆಗಾಗಿ ಚಿಕ್ಕಮ್ಮನ ಮನೆಗೆ ಬಂದಿದ್ದ ಅಪ್ರಾಪ್ತ ಬಾಲಕಿಗೆ ನಾಯಿ ಮರಿ ತೋರಿಸುವ ನೆಪದಲ್ಲಿ ಕರೆದು ಲೈಂಗಿಕ ಕಿರುಕುಳ ನೀಡಿದ್ದ 77 ವರ್ಷದ ವೃದ್ಧನಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿ ಎ್ಟಿಎಸ್‌ಸಿ 1ನೇ ನ್ಯಾಯಾಲಯ ತೀರ್ಪು ನೀಡಿದೆ.
ಎನ್.ಎಸ್. ಪಾಳ್ಯದ ಕೃಷ್ಣಮೂರ್ತಿ ಶಿಕ್ಷೆಗೆ ಒಳಗಾದ ವೃದ್ಧ. ಪೋಕ್ಸೊ ಕಾಯ್ದೆಯಡಿ 5 ವರ್ಷ ಸಾಧಾರಣ ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶ ಎನ್.ಎಂ. ರಮೇಶ್ ತೀರ್ಪು ಪ್ರಕಟಿಸಿದ್ದಾರೆ. ಅಪರಾಧಿಗೆ ವಿಧಿಸಿದ ದಂಡದ ಮೊತ್ತ ಮತ್ತು ಡಿಎಲ್‌ಎಸ್‌ಎಯಿಂದ 50 ಸಾವಿರ ರೂ. ಅನ್ನು ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು ಸೂಚನೆ ನೀಡಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಕೃಷ್ಣವೇಣಿ ವಾದ ಮಂಡಿಸಿದ್ದರು.
2020ರ ಡಿಸೆಂಬರ್‌ನಲ್ಲಿ 11 ವರ್ಷದ ಬಾಲಕಿ, ಕ್ರಿಸ್‌ಮಸ್ ರಜೆ ಹಿನ್ನೆಲೆ ಚಿಕ್ಕಮ್ಮನ ಮನೆಗೆ ಬಂದಿದ್ದಳು. ಅದೇ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಕೃಷ್ಣಮೂರ್ತಿ, ನಾಯಿ ಮರಿಯನ್ನು ವಾಕ್ ಮಾಡಿಸಲು ಪಾರ್ಕಿಂಗ್‌ಗೆ ಕರೆದುಕೊಂಡು ಬಂದಾಗ, ಸಂತ್ರಸ್ತೆ ನಾಯಿಯನ್ನು ಆಟವಾಡಿಸಲು ಬರುತ್ತಿದ್ದಳು. ಈ ಸಮಯವನ್ನೇ ದುರುಪಯೋಗಪಡಿಸಿಕೊಂಡ ಕೃಷ್ಣಮೂರ್ತಿ, ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ.
ಈ ಬಗ್ಗೆ ಪಾಲಕರ ಬಳಿ ಬಾಲಕಿ ಹೇಳಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಇದಕ್ಕೂ ಮೊದಲು ಸಂತ್ರಸ್ತೆಯ ಚಿಕ್ಕಮ್ಮನ ಮಗಳಿಗೂ ಇದೇ ರೀತಿ ಕೆಲ ತಿಂಗಳಿಂದ ಕಿರುಕುಳ ಕೊಡುತ್ತಿದ್ದ ವಿಷಯ ಬೆಳಕಿಗೆ ಬಂದಿತ್ತು. ಈ ಕುರಿತು ಮೈಕೋ ಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೃಷ್ಣಮೂರ್ತಿಯನ್ನು ಬಂಧಿಸಿ ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.