

ನವೀನ್ ಬಿಲ್ಗುಣಿ ಶಿವಮೊಗ್ಗ
ಜನರನ್ನು ಬಾಧಿಸುತ್ತಿರುವ ಸಾಂಕ್ರಾಮಿಕ ಕಾಯಿಲೆಗಳಲ್ಲಿ ಕ್ಷಯರೋಗ (ಟಿಬಿ) ಕೂಡ ಒಂದು. ಜ್ವರ, ಶೀತ ಮತ್ತು ಕೆಮ್ಮು ಒಂದು ವಾರಕ್ಕಿಂತ ಹೆಚ್ಚು ಸಮಯ ಇದ್ದರೆ ಕ್ಷಯರೋಗ ಪೀಡಿತರಾಗುವ ಸಾಧ್ಯತೆ ಹೆಚ್ಚು. ಆದರೆ ಕ್ಷಯರೋಗ ನಿಯಂತ್ರಣದಲ್ಲಿ ರಾಜ್ಯಕ್ಕೆ ಶಿವಮೊಗ್ಗ ಜಿಲ್ಲೆಯೇ ಟಾಪ್. ಮಲೆನಾಡಿನಲ್ಲಿ 77 ಗ್ರಾಮ ಪಂಚಾಯಿತಿಗಳನ್ನು ಆರೋಗ್ಯ ಇಲಾಖೆಯು ಕ್ಷಯಮುಕ್ತವೆಂದು ಘೋಷಿಸಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಸಹಯೋಗದೊಂದಿಗೆ ಶನಿವಾರದಿಂದ 100 ದಿನಗಳ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದೆ. 271 ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಿರುವ ಜಿಲ್ಲೆಯಲ್ಲಿ ಈಗಾಗಲೇ 77 ಗ್ರಾಪಂಗಳು ಕ್ಷಯಮುಕ್ತವಾಗಿವೆ. ಈಗ ಉಳಿದ 194 ಗ್ರಾಪಂಗಳನ್ನೂ ರೋಗಮುಕ್ತವಾಗಿಸಲು ಪಣತೊಟ್ಟಿದೆ.
ಪ್ರತಿ ಒಂದು ಲಕ್ಷ ಜನರಲ್ಲಿ 140 ಕ್ಷಯರೋಗ ಪ್ರಕರಣಗಳು ಪತ್ತೆಯಾಗುತ್ತಿದ್ದು ಜಿಲ್ಲಾದ್ಯಂತ 1,300 ಕ್ಷಯರೋಗಿಗಳು ಪತ್ತೆಯಾಗಿದ್ದಾರೆ. ಶಿವಮೊಗ್ಗ, ಶಿಕಾರಿಪುರ, ಭದ್ರಾವತಿ ಮತ್ತು ಸೊರಬ ತಾಲೂಕಿನಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ. ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿಯಲ್ಲಿ ಕಡಿಮೆ ಪ್ರಕರಣಗಳು ದಾಖಲಾಗಿವೆ. ಕ್ಷಯರೋಗದಿಂದ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಮಾಸಿಕ 500 ರೂ.ಗಳನ್ನು ಪೌಷ್ಟಿಕ ಆಹಾರ ಖರೀದಿಗೆ ಡಿಬಿಟಿ ಮುಖಾಂತರ ಸರ್ಕಾರ ನೀಡುತ್ತಿದೆ. ನಿಕ್ಷಯ್ ಮಿತ್ರದಿಂದ ಪೌಷ್ಟಿಕ ಆಹಾರ ಪೂರೈಕೆ ಆಗುತ್ತದೆ.
ಉತ್ತರ ಕರ್ನಾಟಕದಲ್ಲಿ ಹೆಚ್ಚು ಪ್ರಕರಣ: ರಾಜ್ಯದಲ್ಲಿ ಕ್ಷಯರೋಗವನ್ನು ನಿಯಂತ್ರಣಕ್ಕೆ ತರುವ ಜಿಲ್ಲೆಗಳ ಪೈಕಿ ಶಿವಮೊಗ್ಗ ಅಗ್ರಸ್ಥಾನದಲ್ಲಿದೆ. ಪಕ್ಕದ ಹಾವೇರಿ ಜಿಲ್ಲೆ ನಂತರದ ಸ್ಥಾನದಲ್ಲಿದೆ. ಬೀದರ್, ಬಳ್ಳಾರಿ ಮತ್ತು ಯಾದಗಿರಿ ಜಿಲ್ಲೆಗಳು ಕೊನೆಯ ಸ್ಥಾನಗಳನ್ನು ಪಡೆದುಕೊಂಡಿವೆ. ಮೈಸೂರು ಕರ್ನಾಟಕ ಮತ್ತು ಮಧ್ಯ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಹೆಚ್ಚಾಗಿ ಕ್ಷಯರೋಗ ಪ್ರಕರಣಗಳು ಕಂಡುಬರುತ್ತಿವೆ.
ಮರಣ ಪ್ರಮಾಣ ಶೇ.6ರಷ್ಟು: ಕ್ಷಯರೋಗ ಬಾಧಿತರು ತ್ವರಿತವಾಗಿ ಚಿಕಿತ್ಸೆ ಪಡೆಯುವುದು ಉತ್ತಮ. ಇಲ್ಲವಾದರೆ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ. ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರವು ಶೇ.92ರಷ್ಟು ರೋಗಿಗಳನ್ನು ತಪಾಸಣೆಗೆ ಒಳಪಡಿಸಲಿದೆ. ಕ್ಷಯರೋಗ ಬಾಧಿಸಿದ ಮೇಲೆ ಗುಣಮುಖ ಆಗುವವರ ಪ್ರಮಾಣ ಶೇ.89ರಷ್ಟಿದೆ. ಆದರೆ ನಿರ್ಲಕ್ಷೃದಿಂದ ಮರಣ ಹೊಂದಿರುವವರ ಪ್ರಮಾಣ ಶೇ.6ರಷ್ಟು ಇರಲಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
ಮಾ.24ವರೆಗೆ ಜಾಗೃತಿ: ಕೇಂದ್ರ ಸರ್ಕಾರ ಕ್ಷಯರೋಗ ಮುಕ್ತ ಭಾರತವನ್ನಾಗಿಸಲು ಗುರಿ ಹೊಂದಿದೆ. ಅದರ ಭಾಗವಾಗಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರವು ಶಿವಮೊಗ್ಗ ಜಿಲ್ಲೆಯಲ್ಲೂ ಡಿ.7ರಿಂದ 2025ರ ಮಾ.24ರವರೆಗೆ 100 ದಿನ ಕ್ಷಯರೋಗ ಕುರಿತು ಅರಿವು ಕಾರ್ಯಕ್ರಮ ಹಮ್ಮಿಕೊಂಡಿದೆ. ರೋಗಿಗಳ ಶೀಘ್ರ ಪತ್ತೆ, ಗುಣಪಡಿಸುವಿಕೆ, ಸಾರ್ವಜನಿಕರಲ್ಲಿ ರೋಗ ಲಕ್ಷಣಗಳ ಬಗ್ಗೆ ಜಾಗೃತಿ, ಕಾಯಿಲೆ ಹರಡುವುದನ್ನು ಶೇ.80ರಷ್ಟು ತಡೆಯುವುದು, ಮರಣ ಪ್ರಮಾಣವನ್ನು ಶೇ.90ರಷ್ಟು ಕಡಿಮೆ ಮಾಡುವುದು, ರೋಗಿಗಳ ಟಿಬಿ ಪರೀಕ್ಷೆ ಮತ್ತು ಚಿಕಿತ್ಸೆಗೆ ತಗುಲುವ ವೆಚ್ಚ ಶೂನ್ಯ ಮಾಡುವುದು ಅಭಿಯಾನದ ಉದ್ದೇಶ.
ಕ್ಷಯಮುಕ್ತ ಗ್ರಾಪಂ ಆಯ್ಕೆ ಹೇಗೆ? ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರವು ಗ್ರಾಪಂಗಳಿಗೆ ಭೇಟಿ ನೀಡುತ್ತದೆ. ಗ್ರಾಪಂ ಕಚೇರಿ ಇರುವ ಗ್ರಾಮ ಒಳಗೊಂಡಂತೆ ಸುತ್ತಮುತ್ತ ಹಳ್ಳಿಗಳಲ್ಲಿ ಸರ್ವೇ ಮಾಡಲಿದೆ. ಗ್ರಾಪಂ ವ್ಯಾಪ್ತಿಯ ಯಾವುದೇ ಗ್ರಾಮದಲ್ಲಿ ರೋಗ ಬಾಧಿತರು ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಇಡೀ ಗ್ರಾಪಂವನ್ನು ಕ್ಷಯರೋಗ ಮುಕ್ತ ಎಂದು ಘೋಷಿಸಲಾಗುತ್ತದೆ. ಕೆಲವೆಡೆ ಸರ್ವೇ ನಡೆದ ಬಳಿಕ ಜನರಲ್ಲಿ ರೋಗ ಪತ್ತೆಯಾದರೆ ಇಡೀ ಗ್ರಾಪಂ ಅನ್ನು ಪಟ್ಟಿಯಿಂದ ಕೈಬಿಡಲಾಗುತ್ತದೆ.
ಶಿವಮೊಗ್ಗ ಜಿಲ್ಲೆಯು ಕ್ಷಯರೋಗ ನಿಯಂತ್ರಣದಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಪ್ರಸ್ತುತ ಜಿಲ್ಲೆಯಲ್ಲಿ 1,300 ಪ್ರಕರಣಗಳಿದ್ದು 77 ಗ್ರಾಪಂಗಳನ್ನು ಕ್ಷಯಮುಕ್ತವೆಂದು ಘೋಷಿಸಲಾಗಿದೆ. 100 ದಿನಗಳ ಅಭಿಯಾನ ಶುರುವಾಗಿದೆ. ಕ್ಷಯಮುಕ್ತ ಜಿಲ್ಲೆಯನ್ನಾಗಿ ಮಾಡುವುದು ನಮ್ಮ ಗುರಿ. ರೋಗ ನಿಯಂತ್ರಣ ಸಂಬಂಧ ಅರಿವು ಮೂಡಲಾಗುತ್ತಿದೆ. - ಡಾ. ಬಿ.ಪಿ.ನಾಗೇಶ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ