ಗುತ್ತಿಗೆದಾರರ ಬಳಿ 750 ಕೋಟಿ ರೂ. ಅಕ್ರಮ ಸಂಪತ್ತು ಪತ್ತೆ!; 4 ಕೋಟಿ ರೂ. ನಗದು, 8 ಕೋಟಿ ಮೌಲ್ಯದ ಚಿನ್ನ ಜಪ್ತಿ..

IT raid
Published on

ಬೆಂಗಳೂರು: ಪ್ರಭಾವಿ ರಾಜಕಾರಣಿಯೊಬ್ಬರ ಆಪ್ತರಾಗಿರುವ ನೀರಾವರಿ ಹಾಗೂ ಹೆದ್ದಾರಿ ಯೋಜನೆಗಳ ಗುತ್ತಿಗೆದಾರರ ಬಳಿ ಬರೋಬ್ಬರಿ 750 ಕೋಟಿ ರೂ. ಮೌಲ್ಯದ ಅಕ್ರಮ ಸಂಪತ್ತನ್ನು ಐಟಿ ಇಲಾಖೆ ಪತ್ತೆ ಮಾಡಿದೆ. ಇದರಲ್ಲಿ 487 ಕೋಟಿ ಮೌಲ್ಯದ ಅಘೋಷಿತ ಆಸ್ತಿ ಹೊಂದಿರುವುದಾಗಿ ಗುತ್ತಿಗೆದಾರರು ತಪ್ಪೊಪ್ಪಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಕರ್ನಾಟಕ-ಗೋವಾ ವಿಭಾಗದ ಐಟಿ ಅಧಿಕಾರಿಗಳು ಅ.7ರಂದು ಮೂರು ಕ್ಲಾಸ್-1 ಗುತ್ತಿಗೆ ಕಂಪನಿಗಳಿಗೆ ಸೇರಿದ 4 ರಾಜ್ಯಗಳ 47 ಕಡೆ ದಾಳಿ ನಡೆಸಿದ್ದರು. ಆ ವೇಳೆ ಪತ್ತೆಯಾದ ದಾಖಲೆಗಳಿಲ್ಲದ 4.69 ಕೋಟಿ ರೂ. ನಗದು, 8.67 ಕೋಟಿ ಮೌಲ್ಯದ ಚಿನ್ನಾಭರಣ, 29.83 ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು. ದಾಳಿಗೊಳಗಾದ ಗುತ್ತಿಗೆದಾರರ ಬಳಿ 750 ಕೋಟಿ ರೂ. ಅಘೋಷಿತ ಆಸ್ತಿ ಪತ್ತೆಯಾಗಿದೆ. ಆದರೆ 487 ಕೋಟಿ ರೂ. ಮಾತ್ರ ಅಘೋಷಿತ ಆಸ್ತಿ ಎಂದು ಗುತ್ತಿಗೆದಾರರು ಒಪ್ಪಿಕೊಂಡಿದ್ದಾರೆ. ನಕಲಿಯಾಗಿ ಕಾರ್ವಿುಕ ವೆಚ್ಚ, ಉಪ-ಗುತ್ತಿಗೆ ಮಾಡಿರುವುದಕ್ಕೆ ಸಾಕ್ಷ್ಯಗಳು ಸಿಕ್ಕಿವೆ. ವಿಚಾರಣೆ ವೇಳೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿರುವುದನ್ನು ಐಟಿ ಅಧಿಕಾರಿಗಳ ಮುಂದೆ ಸಬ್ ಕಾಂಟ್ರಾಕ್ಟರ್​ಗಳು ಒಪ್ಪಿಕೊಂಡಿದ್ದಾರೆ. ದಾಳಿಗೊಳಗಾದ ಗುತ್ತಿಗೆದಾರರು ನೀರಾವರಿ ಮತ್ತು ಹೆದ್ದಾರಿ ಯೋಜನೆಗಳ ಕಾಮಗಾರಿಗೆ ಕೋಟ್ಯಂತರ ರೂ. ಗುತ್ತಿಗೆ ಪಡೆದಿದ್ದರು. ಇವುಗಳಲ್ಲಿ ಅಕ್ರಮ ಎಸಗಿರುವುದು ಐಟಿ ತನಿಖೆಯಲ್ಲಿ ದೃಢಪಟ್ಟಿದೆ. ಕಾಂಟ್ರಾಕ್ಟರ್​ಗಳು ಸುಳ್ಳು ದಾಖಲೆಗಳ ಮೂಲಕ ತಾವು ಹೊಂದಿರುವ ಹಣದ ಮೂಲವನ್ನು ಮರೆ ಮಾಚಿದ್ದಾರೆ. ಕಾರ್ವಿುಕರ ನಿರ್ವಹಣೆ, ಬೋಗಸ್ ಉಪ-ಗುತ್ತಿಗೆಯ ವೆಚ್ಚ ಸೇರಿ ಇನ್ನಿತರ ಕಾರ್ಯಗಳಿಗೆ ದೊಡ್ಡ ಮೊತ್ತದ ಹಣ ವಿನಿಯೋಗಿಸಿರುವುದಾಗಿ ಸುಳ್ಳು ಲೆಕ್ಕ ತೋರಿಸಿದ್ದಾರೆ.

ದಾಳಿಗೊಳಗಾದ ಒಂದು ಗುತ್ತಿಗೆ ಕಂಪನಿ 40 ನಕಲಿ ವ್ಯಕ್ತಿಗಳ ಹೆಸರಲ್ಲಿ ಉಪಗುತ್ತಿಗೆ ವೆಚ್ಚ ಸೃಷ್ಟಿ ಮಾಡಿದೆ. ಈ ಮೂಲಕ ಗುತ್ತಿಗೆ ನಿರ್ಮಾಣ ವ್ಯವಹಾರಕ್ಕೆ ಸಂಬಂಧವಿಲ್ಲದ ನಕಲಿ ಉಪ-ಗುತ್ತಿಗೆ ವೆಚ್ಚಗಳನ್ನು ದಾಖಲೆಯಲ್ಲಿ ನಮೂದಿಸಿ ತೆರಿಗೆ ವಂಚಿಸಿದೆ. ಮತ್ತೊಂದು ಗುತ್ತಿಗೆ ಕಂಪನಿಯು ಕಾರ್ವಿುಕರ ನಿರ್ವಹಣಾ ವೆಚ್ಚಕ್ಕಾಗಿ 382 ಕೋಟಿ ರೂ. ವ್ಯಯಿಸಿರುವುದಾಗಿ ಸುಳ್ಳು ದಾಖಲೆ ಸೃಷ್ಟಿಸಿದೆ. ಅಸ್ತಿತ್ವದಲ್ಲೇ ಇಲ್ಲದ ಬೋಗಸ್ ಕಂಪನಿಯಿಂದ 105 ಕೋಟಿ ರೂ. ತೆಗೆದುಕೊಂಡು ಕಾಮಗಾರಿ ವೇಳೆ ಕಾರ್ವಿುಕರ ನಿರ್ವಹಣೆಗೆ ಖರ್ಚು ಮಾಡಿರುವುದಾಗಿ ದಾಖಲೆಗಳಲ್ಲಿ ತೋರಿಸಲಾಗಿದೆ. ಗುತ್ತಿಗೆದಾರರು ಕೋಟ್ಯಂತರ ರೂ. ತೆರಿಗೆ ವಂಚಿಸಿರುವುದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಜಪ್ತಿ ಮಾಡಲಾಗಿದೆ. ಮೂರು ಗುತ್ತಿಗೆ ಕಂಪನಿಗಳು ಕೆಲಸ ಮಾಡಿದ್ದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಕೋಟ್ಯಂತರ ರೂ. ಲಾಭ ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ಐಟಿ ಪ್ರಕಟಣೆಯಲ್ಲಿ ತಿಳಿಸಿದೆ.

ದಾಳಿಗೊಳಗಾದ ಗುತ್ತಿಗೆದಾರರು ಯಾರು?: ಪ್ರಭಾವಿ ರಾಜಕಾರಣಿ ಆಪ್ತ ಉಮೇಶ್ ಅವರ ಭಾಷ್ಯಂ ಸರ್ಕಲ್​ನಲ್ಲಿರುವ ಮನೆ, ಗುತ್ತಿಗೆದಾರರಾದ ಡಿ.ವೈ.ಉಪ್ಪಾರ್, ಸೋಮಶೇಖರ್, ಜಯಶೀಲ ಶೆಟ್ಟಿ, ಶ್ರೀನಿವಾಸ್, ರಾಹುಲ್ ಎಂಟರ್​ಪ್ರೖೆಸಸ್ ಮಾಲೀಕ ಅರವಿಂದ್, ಲಕ್ಷ್ಮೀಕಾಂತ್, ಚಾರ್ಟೆಡ್ ಅಕೌಂಟೆಂಟ್ ಅಮಲಾ ನಿವಾಸ ಮತ್ತು ಕಚೇರಿಗಳ ಮೇಲೆ ಐಟಿ ದಾಳಿ ನಡೆಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net