

ಬೆಂಗಳೂರು: ಖಾಸಗಿ ವ್ಯಕ್ತಿ ತನ್ನ ಫೇಸ್ ಬುಕ್ ಖಾತೆಯಲ್ಲಿ ಬಂದ ನಕಲಿ ಜಾಹೀರಾತು ನೋಡಿ ಷೇರು ಮಾರ್ಕೆಟ್‌ನಲ್ಲಿ 75.90 ಲಕ್ಷ ರೂ. ಹೂಡಿಕೆ ಮಾಡಿ ಮೋಸಕ್ಕೆ ಒಳಗಾಗಿದ್ದಾರೆ.
ಕನ್ನಿಂಗ್‌ಹ್ಯಾಂ ರಸ್ತೆಯಲ್ಲಿ ನೆಲೆಸಿರುವ ಖಾಸಗಿ ಕಂಪನಿ ಉದ್ಯೋಗಿ ಮೋಸಕ್ಕೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಕೇಂದ್ರ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೇಸ್ ಬುಕ್ ನ ಜಾಹೀರಾತಿನಲ್ಲಿ ಷೇರು ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭಾಂಶ ಸಿಗಲಿದೆ ಎಂದು ಉಲ್ಲೇಖಿಸಲಾಗಿತ್ತು. ಇದನ್ನು ಗಮನಿಸಿದ ಖಾಸಗಿ ಕಂಪನಿ ಉದ್ಯೋಗಿ, ಲಿಂಕ್ ಮೇಲೆ ಕ್ಲಿಕ್ ಮಾಡಿ ಹಂತ ಹಂತವಾಗಿ 75.90 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ.
ಒಂದು ಹಂತದಲ್ಲಿ ಲಾಭಾಂಶ ಹಿಂಪಡೆಯಲು ಸಾಧ್ಯವಾಗದೆ ಇದ್ದಾಗ ದೂರುದಾರನಿಗೆ ಮೋಸಕ್ಕೆ ಒಳಗಾಗಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.