ಸಮಯ ಕಳೆಯಲು ಶೇ.72 ಮಕ್ಕಳು ಆನ್‌ಲೈನ್ ಬಳಕೆ

Children Brain
Published on

ಬೆಂಗಳೂರು: ಕೋವಿಡ್-19ರ ನಂತರ ಮಕ್ಕಳಲ್ಲಿ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಆನ್‌ಲೈನ್ ಬಳಕೆ ಹೆಚ್ಚಾಗಿದೆ. ಪರಿಣಾಮ ಪಾಲಕರ ಪ್ರಕಾರ ಶೇ.42 ಮಕ್ಕಳು ಆನ್‌ಲೈನ್ ಸ್ನೇಹಿತರಿಂದ ಲೈಂಗಿಕ ದಬ್ಬಾಳಿಕೆಗೆ ಒಳಗಾಗುತ್ತಿದ್ದು, ಶೇ.43 ಬೆದರಿಕೆ ಒಡ್ಡುತ್ತಿದ್ದಾರೆ. ಶೇ.1 ಮಕ್ಕಳು ಅಪರಿಚಿತ ವ್ಯಕ್ತಿಯೊಂದಿಗೆ ಖಾಸಗಿ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ ಎಂಬ ಆಘಾತಕಾರಿ ವರದಿ ಬಹಿರಂಗವಾಗಿದೆ.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಚೈಲ್ಡ್ ಫಂಡ್ ಇಂಡಿಯಾ ರಾಜ್ಯದಲ್ಲಿ ಮಕ್ಕಳ ಆನ್‌ಲೈನ್ ಅಪಾಯಗಳ ಕುರಿತು ವಿಶೇಷ ಅಧ್ಯಯನ ನಡೆಸಿತ್ತು. ಶುಕ್ರವಾರ ವಿಕಾಸಸೌಧದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಬಿಡುಗಡೆ ಮಾಡಿದರು. ಈ ವೇಳೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಕೆ. ನಾಗಣ್ಣಗೌಡ ಮತ್ತಿತರರು ಇದ್ದರು.

ಸರ್ಚ್ ಇಂಜಿನ್ ಬಳಕೆ ಹೆಚ್ಚು:

8ರಿಂದ 11 ವರ್ಷದ ಶೇ.87 ಮಕ್ಕಳು ಆನ್‌ಲೈನ್ ಬಳಸುತ್ತಿದ್ದರೆ, 15-18 ವರ್ಷದವರಲ್ಲಿ ಶೇ.99 ಹುಡುಗರು ಮತ್ತು ಶೇ.100 ಹುಡುಗಿಯರು ಬಳಸುತ್ತಿದ್ದಾರೆ. 15 ರಿಂದ 18 ವರ್ಷದ ಶೇ.72 ಮಕ್ಕಳು ಶಾಲಾ-ಕಾಲೇಜು ತರಗತಿ ಮುಗಿದ ಮೇಲೆ ಮೈದಾನಕ್ಕೆ ಹೋಗದೆ ಆನ್‌ಲೈನ್ ಬಳಕೆ ಮಾಡುತ್ತಾರೆ. ಆನ್‌ಲೈನ್ ತರಗತಿಗಾಗಿ ಶೇ.49, ಸಹಪಾಠಿಗಳ ಜತೆಗೆ ಸಂಪರ್ಕಕ್ಕಾಗಿ ಶೇ.27, ಹೊಸಬರ ಸಂಪರ್ಕ ಸಾಧಿಸಲು ಶೇ.8 ಬಳಕೆ ಮಾಡಲಾಗುತ್ತಿದೆ. ಅಧ್ಯಯನದ ಪ್ರಕಾರ 12 ರಿಂದ 14 ವರ್ಷದೊಳಗಿನ ಮಕ್ಕಳಲ್ಲಿ ಶೇ.97 ಯೂಟ್ಯೂಬ್ ಬಳಕೆ ಮಾಡುತ್ತಾರೆ. ಶೇ.92 ಮಕ್ಕಳು ವಾಟ್ಸ್‌ಆ್ಯಪ್‌ಗಳಲ್ಲಿ ತೊಡಗಿದ್ದಾರೆ. ಶೇ.73 ಮಕ್ಕಳು ಸರ್ಚ್ ಇಂಜಿನ್‌ಗಳನ್ನು ಬಳಕೆ ಮಾಡುವುದು ಬೆಳಕಿಗೆ ಬಂದಿದೆ. 8 ರಿಂದ 11 ವರ್ಷದೊಳಗಿನ ಶೇ.90 ಮಕ್ಕಳು ಯೂಟ್ಯೂಬ್ ಬಳಸುತ್ತಾರೆ. ಶೇ.73 ಮಕ್ಕಳು ವಾಟ್ಸ್‌ಆ್ಯಪ್, ಶೇ.48 ಸರ್ಚ್ ಇಂಜಿನ್ ಬಳಸುತ್ತಿದ್ದಾರೆ. ವಿದ್ಯಾರ್ಥಿಗಳು ಜಾಲತಾಣಗಳಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಆನ್‌ಲೈನ್ ವೇದಿಕೆಗಳು, ಗೇಮಿಂಗ್, ಚಾಟ್ ರೂಂಗಳಲ್ಲಿ ಮಕ್ಕಳನ್ನು ಸೈಬರ್ ಕ್ರಿಮಿನಲ್ಸ್‌ಗಳು ಶೋಷಣೆ ಮಾಡುತ್ತಿದ್ದಾರೆ.

ಅಪರಿಚಿತರೊಂದಿಗೆ ಸ್ನೇಹ

15-18 ವರ್ಷದ ಶೇ.16 ಮಕ್ಕಳು ಆನ್‌ಲೈನ್‌ನಲ್ಲಿ ಅಪರಿಚಿತರ ಜತೆಗೆ ಸ್ನೇಹ ಬೆಳೆಸಿದ್ದಾರೆ. ಶೇ.10 ಮಕ್ಕಳು ವೈಯಕ್ತಿಕ ಭೇಟಿಯಾಗಿರುವುದಾಗಿ ಉತ್ತರಿಸಿದ್ದಾರೆ. ಇದರಲ್ಲಿ ಶೇ.4 ಹೆಣ್ಣು ಮತ್ತು ಶೇ.17 ಪುರುಷರು ಇದ್ದಾರೆ. ಅದರಲ್ಲಿಯೂ ನಗರದಲ್ಲಿ ಶೇ.9 ಮತ್ತು ಗ್ರಾಮೀಣದ ಶೇ.12 ಮಕ್ಕಳು ಇದ್ದಾರೆ.

ಎಲ್ಲೆಲ್ಲಿ ಸರ್ವೇ?

ಬೆಂಗಳೂರು ನಗರ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ರಾಯಚೂರಿನಲ್ಲಿ 900 ಮಕ್ಕಳನ್ನು ಸರ್ವೇ ನಡೆಸಲಾಗಿದೆ. ಮೊಬೈಲ್, ಲ್ಯಾಪ್‌ಟಾಪ್ ಅನ್ನು ಗ್ರಾಮೀಣ ಮಕ್ಕಳು ಶೇ.97, ನಗರದ ಶೇ.93 ಮಕ್ಕಳು ಬಳಸುತ್ತಿದ್ದಾರೆ. ಪಾಲಕರ ೆನ್ ಅನ್ನು 8-11 ವಯಸ್ಸಿನವರಲ್ಲಿ ಶೇ.96 ಮಕ್ಕಳು ಬಳಸಿದರೆ, 15-18ನೇ ವಯಸ್ಸಿನ ಶೇ.71 ಮಕ್ಕಳು ಬಳಸುತ್ತಿದ್ದಾರೆ. ಶೇ.26 ಮಂದಿ ಪಾಲಕರ ನಿಗಾದಲ್ಲಿ ಮೊಬೈಲ್ ಬಳಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net