ರಾಜ್ಯದಲ್ಲಿ 718 ವಿದೇಶ ಅಕ್ರಮ ನಿವಾಸಿಗಳು: ವೀಸಾ ಪಡೆದು 8,862 ವಿದೇಶಿಗರು ಆಗಮನ; ನುಸುಳಿ ಬರುವರ ಸಂಖ್ಯೆ ಲೆಕ್ಕಕ್ಕಿಲ್ಲ

Infiltration
Published on

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ರಾಜ್ಯದಲ್ಲಿ ಅಕ್ರಮ ನಿವಾಸಿಗಳ ಹಾವಳಿ ಹೆಚ್ಚಾಗಿದ್ದು, ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವಾಗಿದೆ. ವಿದೇಶಿ ಪ್ರಜೆಗಳ ನೋಂದಣಿ ಕೇಂದ್ರ (ಎಫ್​ಆರ್​ಆರ್​ಒ) ಮಾಹಿತಿ ಪ್ರಕಾರ 8,862 ವಿದೇಶಿಗರು ಪಾಸ್​ಪೋರ್ಟ್ ಮತ್ತು ವೀಸಾ ಪಡೆದು ರಾಜ್ಯದಲ್ಲಿ ನೆಲೆಸಿದ್ದಾರೆ. ವೀಸಾ ಅವಧಿ ಮುಗಿದ ಮೇಲೂ 718 ವಿದೇಶಿಗರು ಅಕ್ರಮವಾಗಿ ವಾಸವಾಗಿರುವುದು ಬಹಿರಂಗವಾಗಿದೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಅಕ್ರಮ ನಿವಾಸಿಗಳು ದೊಡ್ಡ ಪ್ರಮಾಣದಲ್ಲಿ ನೆಲೆಯೂರಿದ್ದಾರೆ. ಭಾರತದ ಗಡಿಭಾಗದಲ್ಲಿ ಏಜೆಂಟ್​ಗಳ ಸಹಾಯದಿಂದ ಅಕ್ರಮವಾಗಿ ನುಸುಳಿ ದೇಶದ ಒಳಗೆ ಬಂದ ಸಾವಿರಾರು ಮಂದಿ ನಕಲಿ ಐಡಿ ಕಾರ್ಡ್​ಗಳನ್ನು ಸೃಷ್ಟಿಸಿಕೊಂಡು ನೆಲೆಸಿರುವುದಾಗಿ ಶಂಕಿಸಲಾಗಿದೆ.

ಎಫ್​ಆರ್​ಆರ್​ಒ ಅಧಿಕೃತ ಮಾಹಿತಿ ಪ್ರಕಾರ 8,862 ವಿದೇಶಿಗರು ರಾಜ್ಯದಲ್ಲಿ ಆಶ್ರಯ ಪಡೆದಿದ್ದು, ಬಹುತೇಕರು ವಿದ್ಯಾರ್ಥಿಗಳು (4890) ಆಗಿದ್ದಾರೆ. ಇವರು ತಮ್ಮ ವೀಸಾ ಅವಧಿ ಮುಗಿದ ಮೇಲೆ ನವೀಕರಣ ಮಾಡಿಕೊಳ್ಳಬೇಕು ಇಲ್ಲವಾದರೆ ತವರು ದೇಶಕ್ಕೆ ವಾಪಸ್ ಆಗಬೇಕಾಗುತ್ತದೆ. ಆದರೆ ಕೆಲವರು ಇಲ್ಲಿಯೇ ನೆಲೆಸಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇಂತವರ ಪಟ್ಟಿಯಲ್ಲಿ ನೈಜೀರಿಯಾ, ಆಫ್ರಿಕನ್ ಪ್ರಜೆಗಳು ಅಧಿಕವಾಗಿದ್ದಾರೆ. ಪೊಲೀಸ್ ಇಲಾಖೆ ಪ್ರಕಾರ ಬೆಂಗಳೂರು ನಗರದಲ್ಲಿ 451 ವಿದೇಶಿಗರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ರಾಜ್ಯದಲ್ಲಿ 501 ಮಂದಿ ವಿರುದ್ಧ ಎಫ್​ಐಆರ್ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಮಾದಕ ದ್ರವ್ಯ ಸಾಗಾಟ, ಸೇವನೆ, ವೇಶ್ಯಾವಾಟಿಕೆ, ಸೈಬರ್ ಕ್ರೖೆಂ, ಡ್ರಗ್ಸ್ ಸೇವಿಸಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವುದು, ನಕಲಿ ವಸ್ತುಗಳ ಸಾಗಾಟ ದಂಧೆಯಲ್ಲಿಯೂ ತೊಡಗಿದ್ದಾರೆ.

ನಕಲಿ ದಾಖಲೆ ಸೃಷ್ಟಿ: ಪಶ್ಚಿಮ ಬಂಗಾಳ, ನೇಪಾಳದ ಗಡಿಭಾಗದಿಂದ ಹೆಚ್ಚಾಗಿ ನುಸುಳುಕೋರರು ಬರುತ್ತಿದ್ದು, ಸರ್ಕಾರಗಳು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಏಜೆಂಟ್​ಗಳೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೊಡುತ್ತಾರೆ. ಅಕ್ರಮ ನಿವಾಸಿಗಳನ್ನು ಗಡಿಪಾರು ಮಾಡುವ ವಿಚಾರದಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಸಹಕಾರ ಕೊಡುವುದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net