

ಕೋಲಾರ: ವಾಯುಭಾರ ಕುಸಿತದ ಪರಿಣಾಮ ಸುರಿಯುತ್ತಿರುವ ಮಳೆಯಿಂದಾಗಿ ಎಪಿಎಂಸಿ ಮಾರುಕಟ್ಟೆಗೆ ಟೊಮ್ಯಾಟೊ ಆವಕ ಕಡಿಮೆಯಾಗಿದೆ. ಗುಣಮಟ್ಟದ ಟೊಮ್ಯಾಟೊ ಧಾರಣೆ ಗರಿಷ್ಠ 15 ಕೆಜಿ ಬಾಕ್ಸ್ 650ರಿಂದ 700 ರೂ.ಗೆ ಏರಿಕೆಯಾಗಿದೆ.
ಕೋಲಾರ ಎಪಿಎಂಸಿಗೆ ವಾರಕ್ಕೂ ಮೊದಲು ಸರಾಸರಿ 12,500 ಕ್ವಿಂಟಾಲ್ ಆವಕ ಆಗುತ್ತಿತ್ತು. ಜಡಿಮಳೆ ಕಾರಣದಿಂದ ಗಿಜಿಗುಡುತ್ತಿದ್ದ ಮಾರುಕಟ್ಟೆಯಲ್ಲಿ ನೀರಸ ವಾತಾವರಣ ಕಂಡುಬರುತ್ತಿದೆ. ಶುಕ್ರವಾರ 5827 ಕ್ವಿಂಟಾಲ್ ಆವಕವಾಗಿದ್ದರೆ ಶನಿವಾರ ಆವಕವಾದ 9788 ಕ್ವಿಂಟಾಲ್‌ನಲ್ಲಿ ಗುಣಮಟ್ಟದ ಟೊಮ್ಯಾಟೊ ಪ್ರಮಾಣ ಕಡಿಮೆ ಇತ್ತು.
ಕಾರಣಗಳು ಹಲವು: ಮಳೆಯಿಂದಾಗಿ ಟೊಮ್ಯಾಟೊ ಹಣ್ಣು ಬಿಡಿಸಲು ಕೂಲಿಯಾಳುಗಳ ಸಮಸ್ಯೆ ಎದುರಾಗಿದೆ. ಹಣ್ಣು ನೀರು ಹೀರಿಕೊಂಡು ಗುಣಮಟ್ಟ ಕಳೆದುಕೊಂಡು ಉದುರಲಾರಂಭಿಸಿದೆ. ಎರಡು ವಾರಗಳಿಂದೀಚೆಗೆ ಕೀಟ, ರೋಗಬಾಧೆ ಹೆಚ್ಚಾಗಿ ಇಳುವರಿ ಕುಸಿದಿದೆ. ಚೆನ್ನಾಗಿದ್ದುದನ್ನು ಬಿಡಿಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವಷ್ಟರಲ್ಲೇ ನೀರು ಬಿಟ್ಟುಕೊಂಡು ಹಾಳಾಗುತ್ತಿದೆ.
ಧಾರಣೆ ಚೇತರಿಕೆ: ಮಹಾರಾಷ್ಟ್ರದಲ್ಲಿ ಟೊಮ್ಯಾಟೊ ಹಾನಿಗೀಡಾಗಿದೆ. ರಾಜ್ಯದಲ್ಲೂ ಗುಣಮಟ್ಟದ ಹಣ್ಣು ಸಿಗುತ್ತಿಲ್ಲ. ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಒಡಿಶಾ, ಕೇರಳ, ಛತ್ತೀಸ್‌ಘಡ್ ಸೇರಿ ವಿವಿಧ ರಾಜ್ಯಗಳಿಂದ ಬೇಡಿಕೆ ಹೆಚ್ಚಾಗಿ ಧಾರಣೆಯಲ್ಲೂ ಚೇತರಿಯಾಗಿದೆ. ಆವಕದಲ್ಲಿ ಶೇ.70 ಭಾಗ ತಮಿಳುನಾಡಿಗೆ ಹೋಗುತ್ತಿದ್ದರೆ, ಗುಣಮಟ್ಟದ ಮಾಲು ಪಶ್ಚಿಮಬಂಗಾಳ ಸೇರಿ ಇನ್ನಿತರ ರಾಜ್ಯಗಳಿಗೆ ರವಾನೆಯಾಗುತ್ತಿದೆ.
ಸ್ಥಿರ ಧಾರಣೆ ನಿರೀಕ್ಷೆ: ಟೊಮ್ಯಾಟೊ ಏರು ಹಂಗಾಮದಲ್ಲೂ ನಿರೀಕ್ಷಿತ ಧಾರಣೆ ಸಿಕ್ಕಿರಲಿಲ್ಲ. ರೋಗಬಾಧೆಯಿಂದ ಎರಡು ಬೆಳೆಯೂ ಕೈಕೊಟ್ಟಿದ್ದರಿಂದ ಶೇ.30 ಮಾತ್ರ ಇಳುವರಿ ಬಂದಿತ್ತು. ಅಳಿದುಳಿದ ಟೊಮ್ಯಾಟೊಗೆ ಬೆಲೆ ಇದ್ದರೂ ಜಡಿ ಮಳೆಯಿಂದಾಗಿ ಗುಣಮಟ್ಟವಿಲ್ಲ. ಮೂರನೇ ಬೆಳೆ ಬೆಳೆಯಲು ರೈತನಿಗೆ ಆರ್ಥಿಕ ಸಂಕಷ್ಟ. ನಾಟಿ ಮಾಡಿದರೂ ಇಳುವರಿ ಬರಲು ಕೆಲ ತಿಂಗಳು ಹಿಡಿಯುತ್ತದೆ. ನೆರೆಯ ರಾಜ್ಯಗಳಲ್ಲೂ ಟೊಮ್ಯಾಟೊ ಫಸಲು ಕಡಿಮೆ ಇರುವುದರಿಂದ ಕೆಲ ವಾರಗಳವರೆಗೆ ಉತ್ತಮ ಧಾರಣೆ ನಿರೀಕ್ಷೆ ಮಾಡಬಹುದಾಗಿದೆ ಎನ್ನುತ್ತಾರೆ ಕೃಷಿ ಮಾರುಕಟ್ಟೆ ಅಧಿಕಾರಿಗಳು.
ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ 12,000 ಕ್ವಿಂಟಾಲ್ ಟೊಮ್ಯಾಟೊ ಆವಕ ಆಗುತ್ತಿತ್ತು. ಜಡಿ ಮಳೆಯಿಂದ ಕುಸಿತ ಕಂಡಿದೆ. ಎರಡು ತಿಂಗಳಿಂದ ವಿವಿಧೆಡೆ ಮಳೆ ಜಾಸ್ತಿಯಾಗಿ ಬಹುಪಾಲು ಟೊಮ್ಯಾಟೊ ಹಾನಿಗೀಡಾಗಿರುವುದರಿಂದ ಬೇಡಿಕೆ ಹೆಚ್ಚಳವಾಗಿ ಧಾರಣೆಯಲ್ಲೂ ಏರಿಕೆ ಕಂಡಿದೆ. ಟಿ.ಎಸ್.ರವಿಕುಮಾರ್, ಎಪಿಎಂಸಿ ಕಾರ್ಯದರ್ಶಿ, ಕೋಲಾರ ದಿನದ 24 ಗಂಟೆಯೂ ಜಡಿಮಳೆಯಿಂದಾಗಿ ಟೊಮ್ಯಾಟೊ ಸೇರಿ ಇತರ ತರಕಾರಿ ಬೆಳೆಗಳು ರೋಗಕ್ಕೆ ತುತ್ತಾಗಿ ಕಾಯಿಗಳು ಕೆಳಗೆ ಉದುರುತ್ತಿವೆ. ಇದರಿಂದ ನಷ್ಟ ಅನುಭವಿಸುವಂತಾಗಿದೆ. ಟೊಮ್ಯಾಟೊ ಧಾರಣೆ ಏರಿಕೆಯಾಗುತ್ತಿದ್ದರೂ ಫಸಲು ಇಲ್ಲ. ಮಂಜುನಾಥ್, ರೈತ ಕಾಕಿನೆತ್ತ, ಕೋಲಾರ