700ಕ್ಕೂ ಹೆಚ್ಚು ಮಂದಿಯ ಜೀವ ಹೋಯ್ತು ಡೊನಾಲ್ಡ್ ಟ್ರಂಪ್​ ಚುನಾವಣಾ ರ‍್ಯಾಲಿಯಿಂದ...

Trump Rally
Published on

ಕರೊನಾ ವೈರಸ್​ ಅತ್ಯಂತ ಹೆಚ್ಚಾಗಿ ಬಾಧಿಸಿದ ರಾಷ್ಟ್ರಗಳಲ್ಲಿ ಅಮೆರಿಕ ಅಗ್ರಸ್ಥಾನದಲ್ಲಿದೆ. ಇದುವರೆಗೆ 8.7 ದಶಲಕ್ಷಕ್ಕೂ ಅಧಿಕ ಮಂದಿ ಕರೊನಾ ಸೋಂಕಿಗೆ ಒಳಗಾಗಿದ್ದಾರೆ, 225,000 ಜನರು ವೈರಸ್​ಗೆ ಬಲಿಯಾಗಿದ್ದಾರೆ.

ಆದರೆ ಈಗೊಂದು ಆತಂಕಕಾರಿ ವಿಚಾರವನ್ನು ಅಧ್ಯಯನವೊಂದು ತಿಳಿಸಿದೆ. ಅಮೆರಿಕದಲ್ಲಿ ಡೊನಾಲ್ಡ್​ ಟ್ರಂಪ್​ ಅವರ ಅಧ್ಯಕ್ಷೀಯ ಚುನಾವಣಾ ರ‍್ಯಾಲಿಯಿಂದಲೇ ಸೋಂಕಿನ ತೀವ್ರತೆ ಹೆಚ್ಚಾಗಿದೆ. ಟ್ರಂಪ್​ ನಡೆಸಿದ ಒಟ್ಟು 18 ರ‍್ಯಾಲಿಗಳಿಂದ 30,000ಕ್ಕೂ ಅಧಿಕ ಜನರು ಸೋಂಕಿಗೆ ಒಳಗಾಗಿದ್ದಾರೆ, ಡೊನಾಲ್ಡ್​ ಟ್ರಂಪ್​ ಅವರ ಪ್ರಚಾರಸಭೆಯಲ್ಲಿ ಭಾಗವಹಿಸಿ ವೈರಸ್​ ತಗುಲಿಸಿಕೊಂಡ 700ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

ಯುಎಸ್​ನ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯವು ‘COVID-19 ಪ್ರಸರಣದ ಮೇಲೆ ದೊಡ್ಡ ಗುಂಪು, ಸಭೆಗಳು ಬೀರುವ ಪರಿಣಾಮಗಳು: ಟ್ರಂಪ್ ರ‍್ಯಾಲಿಗಳ ಪ್ರಕರಣ’ ಎಂಬ ಹೆಸರಿನಡಿ ಅಧ್ಯಯನ ಕೈಗೊಂಡಿತ್ತು.

ಎಲ್ಲೆಲ್ಲಿ ಟ್ರಂಪ್ ಬೃಹತ್​ ರ‍್ಯಾಲಿಗಳನ್ನು ಆಯೋಜಿಸಿದ್ದರೋ ಅಲ್ಲೆಲ್ಲ ಕೊವಿಡ್​-19 ಪ್ರಸರಣದ ಪ್ರಮಾಣ ಅಧಿಕವಾಗಿದೆ. ಸಾವಿನ ಸಂಖ್ಯೆಯೂ ಹೆಚ್ಚಿದೆ ಎಂದು ವರದಿ ನೀಡಿದೆ. ಮಾರ್ಚ್​ದಲ್ಲಿ ಕರೊನಾ ಶುರುವಾಗಿದ್ದು, ಡೊನಾಲ್ಡ್​ ಟ್ರಂಪ್​ ಜೂನ್​ 20ರಿಂದ ಸೆಪ್ಟೆಂಬರ್​ 22ರವರೆಗೆ 18 ಚುನಾವಣಾ ರ‍್ಯಾಲಿಗಳನ್ನು ನಡೆಸಿದ್ದಾರೆ.

ದೊಡ್ಡ ಸಂಖ್ಯೆಯಲ್ಲಿ ಗುಂಪುಗೂಡುವುದು, ಸಾಮಾಜಿಕ ಅಂತರ ನಿಯಮ, ಸ್ವಚ್ಛತಾ ನಿಯಮಗಳನ್ನು ಪಾಲನೆ ಮಾಡದೆ ಇದ್ದರೆ ಕರೊನಾ ಭೀಕರತೆ ಹೆಚ್ಚಾಗಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದ್ದರೂ ಅಮೆರಿಕ ಅಧ್ಯಕ್ಷ ಎಡವಿದ್ದಾರೆ. ಅದೆಷ್ಟೋ ಸಲ ಮಾಸ್ಕ್ ಧರಿಸದೆಯೇ ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net