

ಮುಂಬೈ: ಈ 70 ವರ್ಷದ ಮುದುಕನಿಗೆ ಮತ್ತೆ ಮದುವೆಯಾಗುವ ಆಸೆ ಬಂತು. ಆದರೆ ಆ ಆಸೆಯೇ ಅವರ ಬದುಕಿಗೆ ಮುಳ್ಳಾಯ್ತು..!
ಇದು ಒಂದು ವರ್ಷದ ಹಿಂದಿನ ಘಟನೆ. ಆದರೆ ಇತ್ತೀಚೆಗಷ್ಟೇ ಬೆಳಕಿಗೆ ಬಂದಿದೆ. ಮುಂಬೈನ ಬೋರಿವಾಲಿ ನಿವಾಸಿಯಾಗಿರುವ ಈ ವೃದ್ಧನ ಪತ್ನಿ 2018ರಲ್ಲಿ ಮೃತಪಟ್ಟರು. ಒಂದು ದಿನ ಅವರ ಸ್ನೇಹಿತರೆಲ್ಲ ಸೇರಿ, ಇನ್ನೊಂದು ಮದುವೆಯಾಗುವಂತೆ ಸಲಹೆ ನೀಡಿದರು. ಗೆಳೆಯರ ಮಾತಿನಿಂದ ಆಸೆ ಬಂದು, ಮದುವೆಯಾಗಲು ಹೆಣ್ಣನ್ನೂ ನೋಡಿಯಾಯ್ತು. ಆದರೆ ಆ ಭಾವಿ ಪತ್ನಿ ವೃದ್ಧನಿಗೆ 28 ಲಕ್ಷ ರೂ.ವಂಚಿಸಿ, ಪರಾರಿಯಾದಳು. ಅದೇ ಕೊರಗಲ್ಲಿ ಕಳೆಯುತ್ತಿದ್ದ ವೃದ್ಧನಿಗೆ ಇತ್ತೀಚೆಗೆ ಹಾರ್ಟ್ ಅಟ್ಯಾಕ್ ಆಗಿದೆ.
ವಂಚನೆ ನಡೆದಿದ್ದು 2019ರ ಆಗಸ್ಟ್ನಲ್ಲಿ. ವೃದ್ಧನಿಗೆ ಮದುವೆಯಾಗುವಂತೆ ಸಲಹೆ ಕೊಟ್ಟಿದ್ದ ಗೆಳೆಯರೇ ಒಬ್ಬಳು 21 ವರ್ಷದ, ವಿಚ್ಛೇದಿತ ಯುವತಿಯನ್ನು ಪರಿಚಯಿಸಿದರು. ವೃದ್ಧನ ಮಗಳ ವಯಸ್ಸಿನ ಈ ಯುವತಿಯೇ ಆತನ ಕೈಹಿಡಿಯುವ ಹೆಣ್ಣು ಎಂದು ನಿಶ್ಚಿತವಾಯಿತು. ಹಾಗೇ ಅವಳೂ ಕೂಡ, ನಾನು ನನ್ನ ಅಪ್ಪ, ಅಮ್ಮ, ಸಹೋದರನೊಂದಿಗೆ ಮುಂಬೈಗೆ ಬರುತ್ತೇನೆ. ಮದುವೆ ಮಾತುಕತೆ ಅಂತಿಮಗೊಳಿಸೋಣ ಎಂದು ಮುದುಕನ ಬಳಿ ಹೇಳಿದ್ದಳು.
ಅದರಂತೆ, ಆಕೆಯ ಇಡೀ ಕುಟುಂಬ ಮುಂಬೈಗೆ ಆಗಮಿಸಿತು. ಬಂದು, ಈ 70ರ ವೃದ್ಧನ ಮನೆಯಲ್ಲೇ ಉಳಿದುಕೊಂಡರು. ವೃದ್ಧನಂತೂ ಆಕೆಯನ್ನು ಮದುವೆಯಾಗಲು ತುದಿಗಾಲಿನಲ್ಲಿಯೇ ನಿಂತಿದ್ದ, ಆಕೆಯನ್ನು ಸಂಪೂರ್ಣ ನಂಬಿ, ಇಡೀ ಮನೆಯ ಕೀಲಿಯನ್ನೇ ಅವಳಿಗೆ ಕೊಟ್ಟಿಬಿಟ್ಟಿದ್ದ. ಅವರಿಬ್ಬರೂ ರಾಜಸ್ಥಾನದ ಜೈಪುರದಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಲು ನಿಶ್ಚಯ ಮಾಡಿದ್ದರು. ಇದನ್ನೂ ಓದಿ: ಬ್ರೇಕ್ಅಪ್ ಎಂದಿದ್ದಕ್ಕೆ ಸಿಟ್ಟಾದ, ಮನೆಗೆ ನುಗ್ಗಿ ಹುಡುಗಿಗೆ ಇರಿದೇ ಬಿಟ್ಟ
2019ರ ಆಗಸ್ಟ್ 8ರಂದು ವೃದ್ಧ, ಯುವತಿ ಮತ್ತವಳ ಕುಟುಂಬದವರು ಜೈಪುರಕ್ಕೆ ಹೋದರು. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಗೆ ಬೇಕಾದ ಎಲ್ಲ ದಾಖಲೆಗಳನ್ನೂ ನೀಡಿದರು. ಆದರೆ ಅವರಿಗೆ ಆಗಸ್ಟ್ 30ರಂದು ಮದುವೆ ದಿನವನ್ನು ನೀಡಲಾಯಿತು. ಹಾಗಾಗಿ 70ರ ವೃದ್ಧ ಮುಂಬೈಗೆ ವಾಪಸ್ ಹೋಗಲು ನಿಶ್ಚಯಿಸಿದರು. ತಿಂಗಳಗಟ್ಟಲೆ ಜೈಪುರಲ್ಲಿ ವಾಸವಾಗಿರಲು ಅವರಿಗೆ ಇಷ್ಟವಿರಲಿಲ್ಲ.
ಆದರೆ ಮನೆಗೆ ಬಂದ ವೃದ್ಧನಿಗೆ ಭರ್ಜರಿ ಶಾಕ್ ಕಾದಿತ್ತು. ಅವರ ಹಣ, ಪ್ರಮುಖ ದಾಖಲೆಗಳು, ಅತ್ಯಮೂಲ್ಯ ವಸ್ತುಗಳೆಲ್ಲ ಕಾಣೆಯಾಗಿದ್ದವು. ಚಿನ್ನ, ಬೆಳ್ಳಿ ಆಭರಣಗಳೆಲ್ಲ ಕಳವಾಗಿದ್ದವು. ವೃದ್ಧ ಕೂಡಲೇ ಯುವತಿ ಮತ್ತು ಅವರ ಕುಟುಂಬದವರನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಎಲ್ಲರೂ ನಾಟ್ ರೀಚೇಬಲ್ ಆಗಿದ್ದರು.
ಜೈಪುರಕ್ಕೆ ಹೋಗಿ ಯುವತಿಗಾಗಿ ಹುಡುಕಿದರೆ, ಅವರ್ಯಾರೂ ಅಲ್ಲಿರಲಿಲ್ಲ. ಮತ್ತೆ ಸಬ್ರಿಜಿಸ್ಟ್ರಾರ್ ಕಚೇರಿಗೆ ಹೋಗಿ, ಮದುವೆಗೆ ಕೊಟ್ಟಿದ್ದ ದಾಖಲೆಗಳನ್ನೆಲ್ಲ ವಾಪಸ್ ಪಡೆದರು. ಆದರೆ ಜೈಪುರದಲ್ಲಿ ಇದ್ದಾಗಲೇ ಅವರಿಗೆ ಹಾರ್ಟ್ ಅಟ್ಯಾಕ್ ಆಗಿತ್ತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮುಂಬೈಗೆ ಬಂದಿದ್ದರೂ ಇತ್ತೀಚೆಗೆ ಮತ್ತಷ್ಟು ಆರೋಗ್ಯ ಹದಗೆಟ್ಟಿತ್ತು. ನಂತರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತಾನು ಮೋಸ ಹೋದ ಘಟನೆಯನ್ನು ವಿವರಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲಿಸರು ಯುವತಿಯ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. (ಏಜೆನ್ಸೀಸ್)