ವೈರಾಗ್ಯಮೂರ್ತಿ ಶ್ರೀ ಭಾರತೀತೀರ್ಥರು: ಮಾರ್ಚ್​ 30ರಂದು 70ನೇ ವರ್ಧಂತಿ

sri bharathi thritha 18 mar 20
Published on

‘ಧರ್ಮ ಅವನತಿ ಹೊಂದಿ ಅಧರ್ಮ ವೃದ್ಧಿಯಾದಾಗ ಧರ್ಮಸ್ಥಾಪನೆಗಾಗಿ ನಾನು ಅವತರಿಸುತ್ತೇನೆ’ (ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ | ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ || ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ | ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ || ಭ.ಗೀ.: 4.7-8) ಎಂದು ಶ್ರೀಕೃಷ್ಣಪರಮಾತ್ಮ ಭಗವದ್ಗೀತೆಯಲ್ಲಿ ಹೇಳಿರುವನು.

ಜಗದ್ಗುರು ಶ್ರೀ ಆದಿಶಂಕರಾಚಾರ್ಯರ ಅವತಾರಕಾಲದಲ್ಲಿ ಅಧರ್ವಿುಗಳ ಹಾವಳಿ ಹೆಚ್ಚಾಗಿತ್ತು. ಸನಾತನ ಧರ್ಮರಕ್ಷಣೆ, ಸತ್ಸಂಪ್ರದಾಯ, ಆಚಾರ ವಿಚಾರಗಳ ಮುಂದುವರಿಕೆಗಾಗಿ ಶಂಕರಾಚಾರ್ಯರು ಭಾರತದ ಪುರಿ, ದ್ವಾರಕಾ, ಬದರಿ ಮತ್ತು ಶೃಂಗೇರಿಗಳಲ್ಲಿ ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸಿದರು. ಇದರಲ್ಲಿ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾಪೀಠವು ಪ್ರಧಾನ ಮತ್ತು ಅವಿಚ್ಛಿನ್ನ ಪೀಠವಾಗಿದೆ. 1200 ವರ್ಷಗಳು ಕಳೆದರೂ ಯಾವುದೇ ಕಳಂಕವಿಲ್ಲದೆ ತಮ್ಮ ಧ್ಯೇಯವನ್ನು ಸಫಲಗೊಳಿಸಿಕೊಂಡು ಉಳಿದ ಮಠಗಳಿಗೆ ಈ ಗುರುಪೀಠ ಆದರ್ಶಪ್ರಾಯವಾಗಿದೆ.

ಶಂಕರಾಚಾರ್ಯರ ಮೊದಲ ಶಿಷ್ಯರಾದ ಶ್ರೀ ಸುರೇಶ್ವರಾಚಾರ್ಯರು ಈ ಪೀಠದ ಮೊದಲ ಜಗದ್ಗುರುಗಳು. ಇಲ್ಲಿನ ಸಾಕಷ್ಟು ಆಚಾರ್ಯರು ಯತಿಶ್ರೇಷ್ಠರು, ಮಹಾತಪಸ್ವಿಗಳು, ವೇದೋಪನಿಷತ್, ಶಾಸ್ತ್ರಗಳಲ್ಲಿ ಪಾರಂಗತರಾದವರೂ ಹೌದು. ಈ ಪೀಠವು 35ನೇ ಜಗದ್ಗುರುಗಳಾದ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು 1989ರ ಸೆಪ್ಟೆಂಬರ್ 21ರಂದು ಭೌತಿಕ ದೇಹವನ್ನು ತ್ಯಜಿಸಿದರು. 1989ರ ಅಕ್ಟೋಬರ್ 19ರಂದು ಅಂದರೆ ಶುಕ್ಲ ಸಂವತ್ಸರದ ಆಶ್ವಯುಜ ಕೃಷ್ಣ ಪಂಚಮಿಯಂದು ನಡೆದ ಮಹೋತ್ಸವದಲ್ಲಿ ದಕ್ಷಿಣಾಮ್ನಾಯ ಶೃಂಗೇರಿ ಶ್ರೀಶಾರದಾ ಪೀಠದ 36ನೇ ಜಗದ್ಗುರುಗಳಾಗಿ ಶೀ ಭಾರತೀತೀರ್ಥ ಮಹಾಸ್ವಾಮಿಗಳು ಪಟ್ಟಾಭಿಷಿಕ್ತರಾದರು.

ಜಗದ್ಗುರುಗಳ ಪೂರ್ವಾಶ್ರಮ: ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಅಲುಗಮಲ್ಲೇಪಾಡು ಗ್ರಾಮದ ವಿದ್ವಾಂಸ ಮನೆತನದ ತಂಗಿರಾಲ ವೆಂಕಟೇಶ್ವರ ಅವಧಾನಿ ಮತ್ತು ಅನಂತಲಕ್ಷಮ್ಮ ದಂಪತಿಯ ಪುತ್ರರಾಗಿ 1951ರ ಏಪ್ರೀಲ್ 11ರಂದು ಜನಿಸಿದರು. ಮಹಾಸ್ವಾಮಿಗಳ ಪೂರ್ವಾಶ್ರಮದ ಹೆಸರು ಸೀತಾರಾಮಾಂಜನೇಯಲು. ಬಾಲಕನಾಗಿರುವಾಗಲೇ ಶಿವಾಲಯಗಳ ಭೇಟಿ, ಶಿವನಾಮೋಚ್ಚಾರಣೆ ಮಾಡುತ್ತಿದ್ದ ಮಗನಿಗೆ ತಂದೆಯವರೇ ರಾಮಾಯಣ, ಮಹಾಭಾರತ, ಪುರಾಣಶ್ಲೋಕಗಳನ್ನು ಹೇಳಿಕೊಡುತ್ತಿದ್ದರು. ಬಾಲಕನ ಏಳನೇ ವಯಸ್ಸಿಗೆ ಬ್ರಹ್ಮೋಪದೇಶ ನೆರವೇರಿತು. ತಂದೆಯವರಿಂದಲೇ ವೇದಮಂತ್ರ ಕಲಿತರು.

ಶ್ರೀ ಅಭಿನವ ವಿದ್ಯಾತೀರ್ಥರ ಭೇಟಿ: ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ಆಂಧ್ರಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ ಅವರ ದರ್ಶನಕ್ಕೆ ಸೀತಾರಾಮಾಂಜನೇಯಲು ಬಂದರು. ಜಗದ್ಗುರುಗಳ ಬಳಿ ಸಂಸ್ಕೃತದಲ್ಲಿ ಉತ್ತರಿಸಿ ಅವರ ಅನುಗ್ರಹಕ್ಕೆ ಪಾತ್ರರಾದರು. ಜಗದ್ಗುರುಗಳು ಚಾತುರ್ವಸ್ಯವ್ರತ ಮುಗಿಸಿ ಮಠಕ್ಕೆ ಹಿಂದಿರುಗುತ್ತಿದ್ದಾಗ ತಮ್ಮನ್ನು ಶಿಷ್ಯನನ್ನಾಗಿ ಸ್ವೀಕರಿಸಬೇಕೆಂದು ಸೀತಾರಾಮಾಂಜನೇಯಲು ವಿನಂತಿಸಿದರು. ಬಾಲಕನ ತೇಜಸ್ಸು, ವೈರಾಗ್ಯವನ್ನು ಗಮನಿಸಿದ ಸ್ವಾಮಿಗಳು ಸಮ್ಮತಿಸಿದರು. ಹೀಗೆ ಸೀತಾರಾಮಾಂಜನೇಯಲು ಜಗದ್ಗುರುಗಳ ಶಿಷ್ಯರಾದರು.

ಶೃಂಗೇರಿಗೆ ಮರಳಿದ ಮೇಲೆ ಗುರುಗಳ ಆದೇಶದಂತೆ ತರ್ಕ, ವೇದಾಂತ, ವ್ಯಾಕರಣ ಇತ್ಯಾದಿಗಳನ್ನು ಅಭ್ಯಸಿಸಿದರು. ಶ್ರೀ ಅಭಿನವ ವಿದ್ಯಾತೀರ್ಥರು 1974ರ ನವೆಂಬರ್ 11ರಂದು ಸೀತಾರಾಮಾಂಜನೇಯಲು ಅವರನ್ನು ಉತ್ತರಾಧಿಕಾರಿಯನ್ನಾಗಿ ಸ್ವೀಕರಿಸಿ ಸಂನ್ಯಾಸದೀಕ್ಷೆ ಕೊಟ್ಟು ಶ್ರೀ ಭಾರತೀತೀರ್ಥ ಎಂಬ ಯೋಗಪಟ್ಟ ಅನುಗ್ರಹಿಸಿದರು. ಇದೇ ಮಾರ್ಚ್ 30ರಂದು ಶ್ರೀಮಠದಲ್ಲಿ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ 70ನೇ ವರ್ಧಂತಿಯು ವಿಶೇಷವಾಗಿ ಜರುಗಲಿದೆ. ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಶ್ರೀಮಠದಿಂದ ನಿರಂತರವಾಗಿ ಅನೇಕ ಧಾರ್ವಿುಕ, ಸಾಮಾಜಿಕ, ಶೈಕ್ಷಣಿಕ ಸೇವೆಗಳನ್ನು ಮಾಡುತ್ತ ಬಂದಿರುವರು. ಅವರ ಪ್ರಮುಖ ಸಾಧನೆಗಳು ಹೀಗಿವೆ:

ಶೃಂಗೇರಿಯಲ್ಲಿ 127 ಎತ್ತರದ ರಾಜಗೋಪುರ ಸ್ಥಾಪನೆ ಶ್ರೀ ಶಾರದಾಂಬೆಯ ದೇವಾಲಯದ ಸ್ವರ್ಣಗೋಪುರ ಸ್ಥಾಪನೆ ಶೃಂಗೇರಿಯಲ್ಲಿ 21 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಚಿತ ಊಟದ ವ್ಯವಸ್ಥೆ ಕಾಲಟಿಯಲ್ಲಿ ಶ್ರೀಶಂಕರ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆ ಶ್ರೀ ಶಂಕರ ಅದ್ವೈತ ಶೋಧ ಕೇಂದ್ರ ಸ್ಥಾಪನೆ ಕಾರ್ಗಿಲ್ ಯುದ್ಧ ಸಂತಸ್ತರ ಪರಿಹಾರ ನಿಧಿಗೆ ದೇಣಿಗೆ ಬೆಂಗಳೂರಿನಲ್ಲಿ ಶಂಕರ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನ ೆ ಶ್ರೀ ಶಾರದಾ ಧನ್ವಂತರಿ ಧರ್ವರ್ಥ ಸೌಲಭ್ಯ ಬೆಂಗಳೂರಿನಲ್ಲಿ ರಂಗದೊರೆ ಆಸ್ಪತ್ರೆ ಸ್ಥಾಪನೆ ಪ್ರಾಕೃತಿಕ ವಿಕೋಪದ ವೇಳೆ ಶ್ರೀಮಠದಿಂದ ಉದಾರ ಆರ್ಥಿಕ ನೆರವು ಪ್ರತಿವರ್ಷ ಅಂಗವಿಕಲರಿಗೆ ಸಹಾಯಕ ಯಂತ್ರೋಪಕರಣ ನೀಡಿಕೆ ಬಡ ಸ್ತ್ರೀಯರಿಗೆ ಹೊಲಿಗೆ ಯಂತ್ರ ವಿತರಣೆ ಶೃಂಗೇರಿ ನಗರಕ್ಕೆ ಕುಡಿಯುವ ನೀರಿನ ಯೋಜನೆ ಅಶಕ್ತ ಶಿಶು ಸಂರಕ್ಷಣಾ ನಿಧಿ ಸ್ಥಾಪನೆ ಬುದ್ಧಿಮಾಂದ್ಯ ಮಕ್ಕಳಿಗಾಗಿ ವಸತಿಶಾಲೆ ಶೃಂಗೇರಿಯಲ್ಲಿ ಉಚಿತ ಕಂಪ್ಯೂಟರ್ ಕಲಿಕಾ ಕೇಂದ್ರ ಸ್ಥಾಪನೆ

ಮಂಡಗದ್ದೆ ಪ್ರಕಾಶಬಾಬು ಕೆ.ಆರ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net