ಶಿಕ್ಷಣ ಇಲಾಖೆಯಲ್ಲಿ ಶೇ.70ರಷ್ಟು ಸುಧಾರಣೆ

madhu samvada
ಮಧು ಬಂಗಾರಪ್ಪ ಅವರಿಗೆ ಎನ್.ಮಂಜುನಾಥ್, ನಾಗರಾಜ ನೇರಿಗೆ ಹೂಗುಚ್ಛ ನೀಡಿ ಸ್ವಾಗತ ಕೋರಿದರು. ಹೊನ್ನಾಳಿ ಚಂದ್ರಶೇಖರ್ ಇದ್ದರು.
Published on

ಶಿವಮೊಗ್ಗ: ಶಿಕ್ಷಣ ಇಲಾಖೆಯಲ್ಲಿನ ಶೇ.70ರಷ್ಟು ಸಮಸ್ಯೆಗಳನ್ನು ಬಗೆಹರಿಸಿದ ತೃಪ್ತಿ ನನಗಿದೆ. ಜಾತಿ, ಧರ್ಮ ತುಂಬಿರುವ ವ್ಯವಸ್ಥೆಯನ್ನೂ ಮೀರಿ ಇಲಾಖೆಯಲ್ಲಿ ಸುಧಾರಣೆಗಳನ್ನು ತಂದಿದ್ದೇನೆ ಎಂದು ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

ಶನಿವಾರ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಸಚಿವನಾಗಿ ಅಧಿಕಾರ ಸ್ವೀಕರಿಸಿದ 11 ತಿಂಗಳಲ್ಲಿ 13,500 ಶಿಕ್ಷಕರ ನೇಮಕಾತಿಯಾಗಿದೆ. ಇನ್ನೂ 18 ಸಾವಿರ ಶಿಕ್ಷಕರ ನೇಮಕಾತಿಗೆ ಪ್ರಕ್ರಿಯೆಗಳು ಆರಂಭವಾಗಿವೆ. ಒಂದು ಸರ್ಕಾರಿ ಶಾಲೆಯಲ್ಲಿ ಒಂದು ಮಗುವಿದ್ದರೂ ಅದನ್ನು ಮುಚ್ಚುವುದಿಲ್ಲ ಎಂದರು.

ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ ವಾರಕ್ಕೆ ಒಂದು ಅವಧಿ ನೈತಿಕ ಶಿಕ್ಷಣ ಬೋಧನೆ ಜಾರಿಗೆ ತರುವ ಆಲೋಚನೆಯಿದೆ. ತೀರ್ಥಹಳ್ಳಿಯಲ್ಲಿ ಅಂಗವಿಕಲರಿಗೆ ವಸತಿಶಾಲೆ ಸ್ಥಾಪಿಸುವ ಚಿಂತನೆಯಿದೆ. ಕ್ಯಾನ್ಸರ್‌ಪೀಡಿತ ಮಕ್ಕಳಿಗೆ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ಸಮೀಪ ಉಚಿತ ಚಿಕಿತ್ಸೆ ಸಹಿತ 1 ರಿಂದ 10ನೇ ತರಗತಿ ಮಕ್ಕಳಿಗೆ ವಸತಿ ಶಾಲೆ ಸ್ಥಾಪಿಸಲಾಗುವುದು. ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರೊಂದಿಗೆ ಈ ಬಗ್ಗೆ ಚರ್ಚಿಸಲಾಗಿದೆ ಎಂದು ಹೇಳಿದರು.

1995ರವರೆಗೆ ಆರಂಭಿಸಲಾದ ಕನ್ನಡ ಶಾಲೆಗಳಿಗೆ ಸರ್ಕಾರ ಅನುದಾನ ನೀಡಿದೆ. ಇದನ್ನು 2005ರವರೆಗೆ ಆರಂಭಿಸಲಾದ ಶಾಲೆಗಳಿಗೂ ವಿಸ್ತರಿಸಲಾಗುವುದು ಎಂದು ಭರವಸೆ ನೀಡಿದರು. ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ನೇರಿಗೆ, ಹೊನ್ನಾಳಿ ಚಂದ್ರಶೇಖರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net